ADVERTISEMENT

ಬಿಡಿಎ ತೆರಿಗೆ ಕಟ್ಟಲು ಆನ್‌ಲೈನ್‌ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 24 ಮೇ 2018, 19:01 IST
Last Updated 24 ಮೇ 2018, 19:01 IST

ಬೆಂಗಳೂರು: ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ತೆರಿಗೆ ಕಟ್ಟುವುದನ್ನು ತಪ್ಪಿಸುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

www.bdabanglore.org ಅಥವಾ https://propertytax.bdabanglore.orgನಲ್ಲಿ ಹಣವನ್ನು ಪಾವತಿಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಇ–ಖಾತಾ, ನಿವೇಶನ ಮತ್ತು ವಸತಿ ಹಂಚಿಕೆಯ ವ್ಯವಸ್ಥೆಯನ್ನು ಕೂಡ ಆನ್‌ಲೈನ್ ಮಾಡುವ ಕೆಲಸ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇದರ ಲಾಭ ಪಡೆಯಬಹುದು’ ಎಂದು ತಿಳಿಸಲಾಗಿದೆ.

ADVERTISEMENT

‘ಬಿಡಿಎ ಅಭಿವೃದ್ಧಿಪಡಿಸಿರುವ ವೆಬ್‌ಸೈಟ್ ಮುಖಾಂತರ ಸುಲಭವಾಗಿ ಹಣ ಕಟ್ಟಬಹುದು. ಈ ಮೊದಲು ಆಸ್ತಿ ಮೌಲ್ಯವನ್ನು ಲೆಕ್ಕಹಾಕಿ ಚಲನ್ ಕಳಿಸುವ ವ್ಯವಸ್ಥೆ ಇತ್ತು. ಗ್ರಾಹಕರು ಅದನ್ನು ಪಡೆದುಕೊಂಡು ಸರತಿ ಸಾಲಿನಲ್ಲಿ ನಿಂತು ಹಣ ಕಟ್ಟಬೇಕಿತ್ತು. ಕೆಲವೊಮ್ಮೆ ಪೋಸ್ಟ್ ಮಾಡಿದ್ದ ಚಲನ್ ಅವರನ್ನು ತಲುಪುತ್ತಿರಲಿಲ್ಲ. ಆದರೆ, ಈಗ ಆನ್‌ಲೈನ್‌ನಲ್ಲಿಯೇ ತೆರಿಗೆ ಬಾಕಿ ಮೊತ್ತದ ಮಾಹಿತಿಯನ್ನು ಪಡೆದುಕೊಂಡು ಹಣ ಕಟ್ಟಬಹುದು’ ಎಂದು ಬಿಡಿಎ ಇಡಿಪಿ ವಿಭಾಗದ ಸಿಸ್ಟಮ್ಸ್‌ ಮ್ಯಾನೇಜರ್‌ ಚೇತನ್‌ ಅವರು ಮಾಹಿತಿ ನೀಡಿದ್ದಾರೆ.

‘ಆನ್‌ಲೈನ್ ವ್ಯವಸ್ಥೆಯಿಂದಾಗಿಚಲನ್‌ ಮುದ್ರಿಸಿ ಕಳಿಸುವ ಹಣಉಳಿತಾಯವಾಗಲಿದೆ. ಮೊಬೈಲ್‌ ಅಥವಾ ಕಂಪ್ಯೂಟರ್‌ ಮೂಲಕ ಸುಲಭವಾಗಿ ಪಾವತಿ ಮಾಡಬಹುದು. ಮುಂದಿನ ಒಂದು ವರ್ಷ ಬ್ಯಾಂಕ್‌ನಲ್ಲಿ ಹಣ ಕಟ್ಟುವ ವಿಧಾನ ಕೂಡ ಮುಂದುವರಿಯಲಿದೆ. ಆ ನಂತರ ಸಂಪೂರ್ಣವಾಗಿ ಆನ್‌ಲೈನ್‌ ಮಾಡುವ ಉದ್ದೇಶ ಇದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.