ADVERTISEMENT

ಬಿಡಿಎ ಬಹುಕೋಟಿ ಹಗರಣ ತನಿಖೆ ಸಿಐಡಿಗೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:34 IST
Last Updated 18 ಡಿಸೆಂಬರ್ 2014, 19:34 IST

ಬೆಂಗಳೂರು:  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ನಡೆದಿದ್ದ ‘ಬಹುಕೋಟಿ ಹಗರಣ’ದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಪ್ರಾಧಿಕಾರದ ಮೂವರು ನೌಕರರು, ಕೋಟ್ಯಂತರ ರೂಪಾಯಿ ನಿಶ್ಚಿತ ಠೇವಣಿಯನ್ನು ಅಕ್ರಮವಾಗಿ ಖಾಸಗಿ ಜೀವ ವಿಮಾ ಕಂಪೆನಿಯಲ್ಲಿ ಹೂಡಿಕೆ  ಮಾಡಿ ಲಾಭ ಪಡೆದುಕೊಂಡಿರುವ ಸಂಗತಿ ಬಿಡಿಎ ಹಣಕಾಸು ಸಮಿತಿಯು  ಇತ್ತೀಚೆಗೆ ನಡೆಸಿದ ಲೆಕ್ಕ ಪರಿಶೋಧನೆಯಿಂದ ಬೆಳಕಿಗೆ ಬಂದಿತ್ತು.  ಈ ಸಂಬಂಧ ಸಮಿತಿ ಸದಸ್ಯ ಗಂಗಾ­ಧರ್‌, ನ.28ರಂದು ಶೇಷಾದ್ರಿಪುರ ಠಾಣೆಗೆ ದೂರು ಕೊಟ್ಟಿದ್ದರು.

‘ಬಿಡಿಎ ಹಣಕಾಸು ವಿಭಾಗದ ಅಧಿಕಾರಿ ಸಂದೀಪ್‌ ದಾಸ್‌, ಲೆಕ್ಕ ಪರಿಶೋಧನಾ ವಿಭಾಗದ ಶೇಷಪ್ಪ ಹಾಗೂ ಪ್ರಥಮ ದರ್ಜೆ ನೌಕರ ವಸಂತ್‌ ಕುಮಾರ್‌ ಅವರ ವಿರುದ್ಧ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಗಂಗಾಧರ್‌ ಅವರು ನೀಡಿದ ದೂರಿನ ಅನ್ವಯ ಶೇಷಾದ್ರಿಪುರ ಠಾಣೆ­ಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಮುಂದಿನ ತನಿಖೆ ಸಿಐಡಿಗೆ ವಹಿಸಿ ಆದೇಶ ಹೊರಡಿ­ಸಿದೆ’ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.

‘1999ರಿಂದ 2008ರವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬ್ಯಾಂಕ್‌ನಲ್ಲಿ ಇರಿಸಿದ್ದ ನಿಶ್ಚಿತ ಠೇವಣಿಯನ್ನು ಅಕ್ರಮವಾಗಿ ಡ್ರಾ ಮಾಡಿರುವ ಆರೋಪಿಗಳು, ಖಾಸಗಿ ವಿಮಾ ಕಂಪೆನಿಯಲ್ಲಿ ಮ್ಯೂಚ್ಯುಯಲ್‌ ಫಂಡ್‌ನಲ್ಲಿ ತೊಡಗಿಸಿದ್ದರು. ಇದರಿಂದ ಬಿಡಿಎಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದ್ದರೆ, ಅಧಿಕಾರಿಗಳಿಗೆ ಲಾಭವಾಗಿದೆ’ ಎಂದು ಬಿಡಿಎ ಆಯುಕ್ತ ಶ್ಯಾಮ್‌ಭಟ್ ತಿಳಿಸಿದರು.
‘ಅವ್ಯವಹಾರದ ಆರೋಪ ಎದುರಿಸುತ್ತಿರುವ ಸಂದೀಪ್‌ದಾಸ್ ಅವರು ಈಗ ಕೇಂದ್ರ ಸೇವೆಯಲ್ಲಿದ್ದಾರೆ. ಶೇಷಪ್ಪ ನಿವೃತ್ತರಾಗಿದ್ದು, ವಸಂತ್‌ ಕುಮಾರ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದರು.

‘ಬಹುಕೋಟಿ ಹಗರಣವಾದ ಕಾರಣ ನಗರ ಪೊಲೀಸ್ ಕಮಿಷನರ್‌ ಎಂ.ಎನ್‌.ರೆಡ್ಡಿ ಅವರು ಪ್ರಕರಣದ ತನಿಖೆಯನ್ನು ಮೊದಲು ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ವರ್ಗಾಯಿಸಿದ್ದರು. ಸಿಬ್ಬಂದಿ ತನಿಖೆ ನಡೆಸಿ ಕೆಲ ಮಾಹಿತಿ ಸಂಗ್ರಹಿಸಿದ್ದರು.   ಈ ಮಧ್ಯೆ ಸರ್ಕಾರ  ಇಡೀ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿ ಆದೇಶ ಹೊರಡಿಸಿದೆ. ಅದರಂತೆ ಪ್ರಕರಣ ವರ್ಗಾಯಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.

₨ 19 ಕೋಟಿ ನಷ್ಟ
‘ಬಿಡಿಎಯಲ್ಲಿ ಹಣ ದುರುಪಯೋಗ ಆಗಿ­ರುವುದು ಲೆಕ್ಕ ಪರಿಶೋಧನೆಯಿಂದ ಗೊತ್ತಾ­ಗಿದೆ. ಪ್ರಾಧಿಕಾರಕ್ಕೆ ₨ 19 ಕೋಟಿ ನಷ್ಟವಾ­ಗಿರು ವುದು ಪ್ರಾಥಮಿಕ ಹಂತದಲ್ಲಿ ತಿಳಿದು ಬಂದಿದೆ. ಆದರೆ ಎಷ್ಟು ಪ್ರಮಾಣದ ಹಣ ದುರುಪ ಯೋಗವಾಗಿದೆ ಎಂಬುದು ಖಚಿತವಾಗಿಲ್ಲ’
–-ಶ್ಯಾಮ್‌ಭಟ್ ಆಯುಕ್ತರು, ಬಿಡಿಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT