ADVERTISEMENT

‘ಬೊಮ್ಮಾಯಿಗೆ ಪಂಚೆ ಶಲ್ಯ ಕೊಡಿಸುವೆ’

​ಪ್ರಜಾವಾಣಿ ವಾರ್ತೆ
Published 21 ಜೂನ್ 2017, 19:51 IST
Last Updated 21 ಜೂನ್ 2017, 19:51 IST

ಬೆಂಗಳೂರು: ‘ಏಯ್‌ ಬೊಮ್ಮಾಯಿ, ನಿನ್ನ ಮಗನ ಮದುವೆಗೆ ನಿನಗೆ ನಾನು ಹಾಕಿರುವಂತಹದೇ ಶಲ್ಯ, ಪಂಚೆ ಉಡುಗೊರೆ ಕೊಡುತ್ತೇನೆ. ಈಗ ಸುಮ್ಮನೆ ಕೂತ್ಕೊ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ಬುಧವಾರ ಉತ್ತರ ನೀಡಲು ಸಿದ್ದರಾಮಯ್ಯ ಆರಂಭಿಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ‘ನೀವು ಧರಿಸಿರುವ ರೇಷ್ಮೆ ಶಲ್ಯ, ಪಂಚೆ ನೋಡಿದರೆ ರೈತರ ಸಾಲ ಮನ್ನಾ ಮಾಡುವುದು ಖಾತ್ರಿಯಾಗುತ್ತದೆ’ ಎಂದು ಹೇಳಿದರು.
‘ಮೊದಲು ಟವೆಲ್‌ ಹಾಕುತ್ತಿದ್ದೆ. ಮಾತನಾಡುವಾಗಲೆಲ್ಲ ಅದು ಬಿದ್ದು ಹೋಗುತ್ತಿತ್ತು. ಅದಕ್ಕಾಗಿ ಈ ರೀತಿ ಶಲ್ಯ ಹಾಕಲು ಶುರು ಮಾಡಿದೆ. ಇದು ಮೈಸೂರು ಸಿಲ್ಕ್‌ ಶಲ್ಯ. ನಿನಗೂ ಅದನ್ನೇ ಕೊಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಹೇಳಿದರು.

ರೇವಣ್ಣ ಮತ್ತು ರಾಹುಕಾಲ: ‘ರಾಹುಕಾಲ, ಶಾಸ್ತ್ರ ನೋಡಿಕೊಂಡು ರೇವಣ್ಣ ಸದನಕ್ಕೆ ಬರುತ್ತಾನೆ. ಈ ತಿಂಗಳಿನಲ್ಲಿ ಒಳ್ಳೆಯ ದಿನಗಳಿಲ್ಲ. ಹಾಗಾಗಿ ಅವನು ಬಂದಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದಾಗ ಸದನದಲ್ಲಿ ನಗು ಉಕ್ಕಿತು.

ADVERTISEMENT

‘ನಾನು ಸಭಾಧ್ಯಕ್ಷನಾಗಿದ್ದಾಗ ಪ್ರತಿಯೊಂದು ವಿಷಯಕ್ಕೂ ಎಚ್‌.ಡಿ. ರೇವಣ್ಣ ಎದ್ದು ನಿಲ್ಲುತ್ತಿದ್ದರು. ನೀವು ಮುಖ್ಯಮಂತ್ರಿಯಾದ ಮೇಲೆ ಅವರು ಮಾತನಾಡುವುದನ್ನೇ ಬಿಟ್ಟಿದ್ದಾರೆ’ ಎಂದು ಜಗದೀಶ ಶೆಟ್ಟರ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅವನು ನನ್ನ ಹಿತಚಿಂತಕ. ಹೌದೋ ಅಲ್ವೋ ರೇವಣ್ಣ’ ಎಂದು ಪ್ರಶ್ನಿಸಿದರು. ಆಗ ರೇವಣ್ಣ ಏನೂ ಹೇಳಲಿಲ್ಲ. ‘ಇರುವುದನ್ನು ಒಪ್ಪಿಕೊಂಡರೇ ನಿನ್ನ ಗಂಟೇನು ಹೋಗುತ್ತದೆ ಹೇಳು’ ಎಂದು ಒತ್ತಾಯಿಸಿದ ಸಿದ್ದರಾಮಯ್ಯ, ‘ರೇವಣ್ಣ ಬಹಳ ಒಳ್ಳೆಯವನು. 1996ರಲ್ಲಿ ನಾನು ಮುಖ್ಯಮಂತ್ರಿಯಾಗಲಿಲ್ಲ ಎಂಬ ಕಾರಣಕ್ಕೆ ಕಣ್ಣೀರಿಟ್ಟಿದ್ದ. ರಾಹುಕಾಲ ನಂಬಿದ್ದರಿಂದ ಅವನಿಗೆ ಒಳ್ಳೆಯದಾಗಿದೆ. ನಂಬಿಕೆ ಮತ್ತು ಮೂಢನಂಬಿಕೆ ಮಧ್ಯೆ ಗೆರೆಯನ್ನೂ ಎಳೆಯಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.