ADVERTISEMENT

ಭಾನುವಾರ ಇಡೀ ದಿನ ಬಿಜೆಪಿ ಪ್ರಮುಖರಿಗೆ ಅಮಿತ್‌ ಷಾ ಪಾಠ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 19:34 IST
Last Updated 30 ಡಿಸೆಂಬರ್ 2017, 19:34 IST

ಬೆಂಗಳೂರು: ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸಲು ರಾಜಧಾನಿಗೆ ಬರುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಭಾನುವಾರ (ಡಿ.31) ಇಡೀ ದಿನ ಸರಣಿ ಸಭೆ ನಡೆಸಿ ವಿವಿಧ ಹಂತದ ಪ್ರಮುಖರಿಗೆ ಚುನಾವಣಾ ತಯಾರಿಯ ಪಾಠ ಹೇಳಲಿದ್ದಾರೆ.

ಬೆಳಿಗ್ಗೆ 10.45ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿರುವ ಷಾ, ಯಲಹಂಕ ಸಮೀಪದ ರಾಯಲ್ ಆರಡ್‌ ಹೋಟೆಲ್‌ನಲ್ಲಿ ಸಭೆ ನಡೆಸಲಿದ್ದಾರೆ. ರಾತ್ರಿ 8 ಗಂಟೆಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

‘ಆಗಸ್ಟ್‌ನಲ್ಲಿ ಮೂರು ದಿನ ಬೆಂಗಳೂರಿನಲ್ಲಿ ಮೊಕ್ಕಾಂ ಮಾಡಿದ್ದ ಷಾ, ಪ‍್ರಮುಖರ ಸಮಿತಿ, ರಾಜ್ಯ, ಜಿಲ್ಲಾ ಘಟಕದ ಅಧ್ಯಕ್ಷರು, ಪ್ರಭಾರಿಗಳು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರಿಗೆ ನಿರ್ದಿಷ್ಟ ಗುರಿ ನೀಡಿದ್ದರು. 224 ವಿಧಾನಸಭಾ ಕ್ಷೇತ್ರಗಳಲ್ಲಿ ಖಾಸಗಿ ತಂಡವನ್ನು ನಿಯೋಜಿಸಿರುವ ಷಾ, ರಾಜ್ಯದ ಪ್ರಮುಖರು ಗುರಿ ಸಾಧಿಸಿದ್ದಾರೆಯೇ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ತಮ್ಮ ಬಳಿ ಇರುವ ವರದಿಯನ್ನು ಮುಂದಿಟ್ಟುಕೊಂಡು ಸಭೆ ನಡೆಸಲಿದ್ದಾರೆ. ಗುರಿ ಸಾಧನೆಯಲ್ಲಿ ವಿಫಲರಾಗಿರುವ ಪದಾಧಿಕಾರಿಗಳಿಗೆ ಕಿವಿ ಹಿಂಡುವ ಸಾಧ್ಯತೆ ಇದೆ’ ಎಂದು ಪಕ್ಷದ ಪ್ರಮುಖರೊಬ್ಬರು ತಿಳಿಸಿದರು.

ADVERTISEMENT

‘ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಗೆ ಯಶಸ್ಸು ಸಿಕ್ಕಿದೆ. ಅದರಲ್ಲೂ ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿದ ಬಳಿಕ ಪಕ್ಷದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ ಎಂದು ಪಕ್ಷದ ನಾಯಕರು ಪ್ರತಿಪಾದಿಸುತ್ತಿದ್ದಾರೆ.  ಈ ಬಗ್ಗೆ ತಮ್ಮ ಮೂಲದಿಂದ ವರದಿ ಪಡೆದಿರುವ ಷಾ, ಯಾತ್ರೆಯ ಯಶಸ್ಸು–ವೈಫಲ್ಯಗಳ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ’ ಎಂದು ಅವರು ಹೇಳಿದರು.

‘ಯಾತ್ರೆ ಪೂರ್ಣಗೊಂಡಿರುವ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಹೆಸರನ್ನು ಯಡಿಯೂರಪ್ಪ ಘೋಷಿಸಿದ್ದಾರೆ. ಇದರಿಂದ ಉಂಟಾಗಿರುವ ಗೊಂದಲಗಳ ಬಗ್ಗೆಯೂ ಷಾ ಬಳಿ ಮಾಹಿತಿ ಇದೆ. ಈ ವಿಷಯವೂ
ಪ್ರಸ್ತಾಪವಾಗುವ ಸಾಧ್ಯತೆ ಇದೆ’ ಎಂದರು.

‘ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಪ್ರಮುಖರ ಸಮಿತಿ ಸಭೆಗೆ ಸತತವಾಗಿ ಗೈರಾಗಿದ್ದಾರೆ. ಸಮಿತಿ ಸಭೆ ನಡೆಯುತ್ತಿದ್ದಾಗಲೇ, ಶಿವಮೊಗ್ಗದಲ್ಲಿ ಮಾಧ್ಯಮಗೋಷ್ಠಿ ನಡೆಸಿ, ಅಭ್ಯರ್ಥಿಗಳ ಹೆಸರು ಘೋಷಿಸುತ್ತಿರುವ
ಯಡಿಯೂರಪ್ಪನವರ ಧೋರಣೆ ಬಗ್ಗೆ ವರಿಷ್ಠರಿಗೆ ದೂರು ನೀಡುವುದಾಗಿ ಹೇಳಿದ್ದರು. ರಾಜ್ಯ ಚುನಾವಣಾ ಉಸ್ತುವಾರಿಗಳು ಇದನ್ನು ಗಂಭೀರ
ವಾಗಿ ಪರಿಗಣಿಸಿದ್ದು, ಈ ಕುರಿತೂ ಚರ್ಚೆಯಾಗುವ ಸಂಭವ ಇದೆ’ ಎಂದು ಅವರು ಹೇಳಿದರು.

ಕಾರ್ಯಕ್ರಮ‌

ಬೆಳಿಗ್ಗೆ 11.30: ಸಂಸದರು, ಶಾಸಕರ ಸಭೆ

ಮಧ್ಯಾಹ್ನ 02.00: 224 ವಿಧಾನಸಭಾ ಕ್ಷೇತ್ರಗಳ ಪ್ರಭಾರಿಗಳ ಸಭೆ

03.13:ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರ ಸಭೆ

05.30: ರಾಜ್ಯ ಪ್ರಮುಖರ ಸಮಿತಿ ಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.