ADVERTISEMENT

ಮಳೆ: ತುರ್ತು ಕಾಮಗಾರಿಗೆ ₹100 ಕೋಟಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2016, 19:32 IST
Last Updated 30 ಜುಲೈ 2016, 19:32 IST
ಮಳೆ: ತುರ್ತು ಕಾಮಗಾರಿಗೆ ₹100 ಕೋಟಿ
ಮಳೆ: ತುರ್ತು ಕಾಮಗಾರಿಗೆ ₹100 ಕೋಟಿ   

ಬೆಂಗಳೂರು: ‘ಮಳೆಯಿಂದ ಹೆಚ್ಚಿನ ಅನಾಹುತ ಸಂಭವಿಸಿರುವ ಬೆಂಗಳೂರು ದಕ್ಷಿಣ ಭಾಗದಲ್ಲಿ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ  ₹ 100 ಕೋಟಿ ಬಿಡುಗಡೆ ಮಾಡಲಿದೆ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್‌ ತಿಳಿಸಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಬಿಬಿಎಂಪಿ ಸದಸ್ಯರು ಹಾಗೂ ಅಧಿಕಾರಿಗಳ ಸಭೆ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಮಳೆಯಿಂದ ಬಾಧಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ನಿರ್ದೇಶನ ನೀಡಿದ್ದಾರೆ.

‘ಮಳೆಯಿಂದಾಗಿ ರಸ್ತೆಗಳು, ಚರಂಡಿಗಳು ಹಾಳಾಗಿವೆ. ಮಳೆ ನೀರು ಕಾಲುವೆ ನಿರ್ಮಾಣ, ಹೂಳು ತೆಗೆಸುವುದು, ಚರಂಡಿ ದುರಸ್ತಿ ಮೊದಲಾದ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು’ ಎಂದು ಜಾಧವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಬಿಡಿಎ ನಿರ್ಮಿಸಿದ್ದ ಮಳೆ ನೀರು ಕಾಲುವೆಗಳು ಶೇ 60ರಷ್ಟು ಹಾಳಾಗಿವೆ. ಅವುಗಳನ್ನು ಕೂಡಲೇ ದುರಸ್ತಿ ಮಾಡಬೇಕು. ಹೆಚ್ಚಿನ ಅನುದಾನ ನೀಡಲು ಸರ್ಕಾರ ಸಿದ್ಧವಿದೆ’ ಎಂದು ಹೇಳಿದರು.

ಕಾಮಗಾರಿಗೆ ಅನುಮತಿ: ಮಡಿವಾಳ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಕಾಮಗಾರಿಗೆ ಇದ್ದ ತೊಡಕನ್ನು ಅರವಿಂದ್‌  ಜಾಧವ್‌ ನಿವಾರಿಸಿದ್ದಾರೆ.

ರಾಜಕಾಲುವೆ ಕಾಮಗಾರಿ ಕೈಗೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡದೆ ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ರಾಜಕಾಲುವೆ ಕಾಮಗಾರಿಗೆ ಅನುಮತಿ ನೀಡುವಂತೆ ಜಾಧವ್‌ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹೆಚ್ಚಿದ ಆತಂಕ
ಕೋಡಿಚಿಕ್ಕನಹಳ್ಳಿ  ಕೆರೆ ಕೋಡಿ ಬಿದ್ದಿದ್ದರಿಂದ ಸುತ್ತಮುತ್ತಲ ಪ್ರದೇಶಗಳ ಚರಂಡಿಯಲ್ಲಿ ಶನಿವಾರ ತಡರಾತ್ರಿ ನೀರಿನ ಹರಿಯುವಿಕೆ ಪ್ರಮಾಣ ಹೆಚ್ಚಾಗಿದ್ದು, ನಿವಾಸಿಗಳಲ್ಲಿ ಆತಂಕ ಎದುರಾಗಿದೆ.

ಮುಖ್ಯಾಂಶಗಳು
* ಸಚಿವ ರಾಮಲಿಂಗಾರೆಡ್ಡಿ, ಬಿಬಿಎಂಪಿ ಸದಸ್ಯರು, ಅಧಿಕಾರಿಗಳ ಸಭೆ
* ಮಳೆಯಿಂದಾಗಿ ರಸ್ತೆ, ಚರಂಡಿಗಳು ಹಾಳು
* ರಾಜಕಾಲುವೆ: ಅನುಮತಿಗೆ ಅರಣ್ಯ ಇಲಾಖೆಗೆ ಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.