ADVERTISEMENT

ಮಹಾಕಾವ್ಯದ ಹುಟ್ಟು ಸಾಮಾನ್ಯ ಸಂಗತಿಯಲ್ಲ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 20:28 IST
Last Updated 19 ಏಪ್ರಿಲ್ 2015, 20:28 IST
ಕಾರ್ಯಕ್ರಮದಲ್ಲಿ  ಪ್ರೊ.ನೀಲಗಿರಿ ತಳವಾರ, ಧರಣಿದೇವಿ ಮಾಲಗತ್ತಿ, ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ, ಕವಯತ್ರಿ ಎಚ್‌.ಎಲ್‌.ಪುಷ್ಪಾ ಮತ್ತು  ಡಾ.ಎಂ.ಎಸ್.ವಿದ್ಯಾ ಭಾಗವಹಿಸಿದ್ದರು.  –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಪ್ರೊ.ನೀಲಗಿರಿ ತಳವಾರ, ಧರಣಿದೇವಿ ಮಾಲಗತ್ತಿ, ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ, ಕವಯತ್ರಿ ಎಚ್‌.ಎಲ್‌.ಪುಷ್ಪಾ ಮತ್ತು ಡಾ.ಎಂ.ಎಸ್.ವಿದ್ಯಾ ಭಾಗವಹಿಸಿದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮಹಾಕಾವ್ಯವೊಂದು ಆಧುನಿಕ ಸಂದರ್ಭದಲ್ಲಿ ಹುಟ್ಟುವುದು ಸಾಮಾನ್ಯವಾದ ಸಂಗತಿಯಲ್ಲ. ಆದರೆ, ಎಲ್ಲವನ್ನೂ ಸಾಧಾರಣವೆಂದು ಭಾವಿಸು ವುದು ಸಮಕಾಲೀನ ಸಂದರ್ಭದ ಹಲವು ದುರಂತಗಳಲ್ಲಿ ಒಂದು’ ಎಂದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ನೀಲಗಿರಿ ತಳವಾರ ಅಭಿಪ್ರಾಯಪಟ್ಟರು.

ಕರ್ನಾಟಕ ಲೇಖಕಿಯರ ಸಂಘ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಲೇಖಕಿ ಎಚ್‌.ಎಸ್‌.ಪಾರ್ವತಿ ದತ್ತಿನಿಧಿ ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ.ಧರಣಿ ದೇವಿ ಮಾಲಗತ್ತಿ ಅವರ ‘ಇಳಾ ಭಾರತಂ’ ಮಹಾಕಾವ್ಯ ಕುರಿತು ಅವರು ಮಾತನಾಡಿದರು.

‘ಆಧುನಿಕತೆಯ ಪ್ರವೇಶದಿಂದಾಗಿ ಮಹಾಕಾವ್ಯವನ್ನು ರಚಿಸಲು ಕವಿಗೆ ಬೇಕಾದ ಪ್ರಶಸ್ತವಾದ ವಾತಾವರಣ ಈಗಿಲ್ಲ. ಹೀಗಾಗಿ ಮಹಾಕಾವ್ಯಗಳ ಕಾಲ ಮುಗಿದು ಹೋಯಿತು ಎನ್ನುವ ಆಂಗ್ಲ ಕವಿ ಟಿ.ಎಸ್. ಎಲಿಯೆಟ್ ಅವರ ಅಭಿಪ್ರಾಯ ಕನ್ನಡದ ಸಂದರ್ಭದಲ್ಲಿ ಹುಸಿಯಾಯಿತು.  ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ತರುವಾಯ ಈವರೆಗೆ ಅನೇಕ ಮಹಾಕಾವ್ಯಗಳು ಮೂಡಿಬಂದಿವೆ. ಇದು ನಾವು ಹೆಮ್ಮೆ  ಮತ್ತು ಅಭಿಮಾನ ಪಡುವ ಸಂಗತಿ’ ಎಂದು ಹೇಳಿದರು.

‘ಛಂದೋಬದ್ಧ ರಚನೆ ನಿಂತು ಹೋದವು ಎಂದು ಹೇಳುವ ಸಂದರ್ಭ ದಲ್ಲಿ ಧರಣಿದೇವಿ ಅವರು ಈ ಮಹಾ ಕಾವ್ಯವನ್ನು ಛಂದೋಬದ್ಧವಾಗಿ ಷಟ್ಪದಿ ಯಲ್ಲಿ ರಚನೆ ಮಾಡಿರುವುದು ಮಹತ್ವದ್ದು. ಹೆಚ್ಚು ಪರಿಚಿತವಲ್ಲದ ವಸ್ತು ಆಯ್ಕೆ ಮಾಡಿಕೊಂಡು ಮಹಾಭಾರತದ ಪೂರ್ವ ಕತೆಯನ್ನು ಬಹುಮುಖಿ ದೃಷ್ಟಿಕೋನದಿಂದ ಕನ್ನಡಿಗರಿಗೆ ಪರಿಚಯಿಸುವ ಕಾರ್ಯ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

‘ಲೇಖಕಿಯರು ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ಆರಂಭದಲ್ಲಿ ಕನ್ನಡ ವಿಮರ್ಶಕರು ಅವರದು ‘ಅಡುಗೆಮನೆ ಸಾಹಿತ್ಯ’ ಎಂಬ ದುಡುಕಿನ ತೀರ್ಮಾನ ಕೊಟ್ಟಿದ್ದರು. ಅದಕ್ಕೆ ನಮ್ಮ ಲೇಖಕಿಯರು, ಕವಯತ್ರಿಯರು ತಮ್ಮ ಮೌಲಿಕ ಕೃತಿಗಳ ಮೂಲಕ ಉತ್ತರ ನೀಡಿದರು’ ಎಂದು ಹೇಳಿದರು.

ಕವಯತ್ರಿ ಎಚ್‌.ಎಲ್‌.ಪುಷ್ಪಾ  ಮಾತನಾಡಿ, ‘ದಲಿತ ಮಹಿಳೆಯ ಏಳುಬೀಳಿನ ಕತೆಯನ್ನು ಕಟ್ಟಿಕೊಡುವ ‘ಇಳಾ ಭಾರತಂ’ ಹೆಣ್ಣಿನ ದೇಹ ಗಂಡಿನ ಮನಸ್ಥಿತಿ ಹೊಂದಿರುವ ಕಾವ್ಯ. ಹಿಂದಿನ ಪರಂಪರೆಯನ್ನು ಇಂದಿನ ಆಧುನಿಕತೆಯೊಂದಿಗೆ ಇದು ಯಶಸ್ವಿಯಾಗಿ ಅನುಸಂ
ಧಾನ ಮಾಡಿದೆ’ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯೆ ಸುಕನ್ಯ ವಿಜಯಕುಮಾರ್‌ ಅವರು ‘ಇಳಾ ಭಾರತಂ’ನ ಮಹಾಕಾವ್ಯದ ಆಯ್ದ ಭಾಗಗಳನ್ನು ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.