ADVERTISEMENT

ಮಾರ್ಚ್‌ಗೆ ನಮ್ಮ ಮೆಟ್ರೊ ಮೊದಲ ಹಂತ ಪೂರ್ಣ

ಹೆಸರಘಟ್ಟ ಕ್ರಾಸ್‌ವರೆಗೆ ಮೆಟ್ರೊ ಸಂಚಾರಕ್ಕೆ ಸಿ.ಎಂ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಮೇ 2015, 20:10 IST
Last Updated 1 ಮೇ 2015, 20:10 IST

ಬೆಂಗಳೂರು: ‘ನಮ್ಮ ಮೆಟ್ರೊದ 42.3 ಕಿ.ಮೀ. ಉದ್ದದ ಮೊದಲ ಹಂತದ ಯೋಜನೆ ಡಿಸೆಂಬರ್‌ ಅಥವಾ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ಮೆಟ್ರೊ ರೈಲು ನಿಗಮದ ವತಿಯಿಂದ ಪೀಣ್ಯ ಕೈಗಾರಿಕಾ ಪ್ರದೇಶದಿಂದ ನಾಗಸಂದ್ರದವರೆಗಿನ ನಮ್ಮ ಮೆಟ್ರೊ ಮಾರ್ಗಕ್ಕೆ  (ರೀಚ್‌–3 ಬಿ) ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

‘₹ 13,845 ಕೋಟಿ ವೆಚ್ಚದ ಮೊದಲ ಹಂತದ ಕಾಮಗಾರಿ ಶೇ 94 ರಷ್ಟು ಪೂರ್ಣಗೊಂಡಿದೆ. ₹ 26,405 ಕೋಟಿ ವೆಚ್ಚದ 72 ಕಿ.ಮೀ. ಉದ್ದದ 2ನೇ ಹಂತದ ಯೋಜನೆಯ ಟೆಂಡರ್‌ ಪ್ರಕ್ರಿಯೆ  ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಎರಡನೇ ಹಂತದ ಯೋಜನೆ ಪೂರ್ಣಗೊಂಡ ಬಳಿಕ ನಗರದಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಲಿದೆ’ ಎಂದರು. ‘ಮೆಟ್ರೊ ಹಾದುಹೋಗುವ ಮಾರ್ಗಗಳ ರಸ್ತೆಗಳು, ಸರ್ವಿಸ್‌ ರಸ್ತೆಗಳನ್ನು ಶೀಘ್ರದಲ್ಲಿ ದುರಸ್ತಿ ಮಾಡಬೇಕು. ಪೀಣ್ಯ– ನಾಗಸಂದ್ರ ನಡುವೆ ಮೂರು ಕಡೆ ಅಂಡರ್‌ಪಾಸ್‌ಗಳನ್ನು ನಿರ್ಮಿಸಬೇಕು’ ಎಂದು ಅವರು ಮೆಟ್ರೊ ಅಧಿಕಾರಿಗಳಿಗೆ ಸೂಚಿಸಿದರು.

ಪೀಣ್ಯ ಮೆಟ್ರೊ ನಿಲ್ದಾಣದ ಹೆಸರನ್ನು ಗೊರಗುಂಟೆಪಾಳ್ಯ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗುವುದು ಎಂದು ಘೋಷಿಸಿದರು.

ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಮಾತನಾಡಿ, ‘ನಮ್ಮ ನಗರಕ್ಕೂ ಸ್ಮಾರ್ಟ್ ಸಿಟಿ ಹಾಗೂ ಮೆಟ್ರೊ ಮಂಜೂರು ಮಾಡಿ ಎಂದು ಸಂಸತ್‌ನಲ್ಲಿ ಹೆಚ್ಚಿನ ಸದಸ್ಯರು ಮನವಿ ಮಾಡುತ್ತಿದ್ದಾರೆ.  5 ವರ್ಷಗಳಲ್ಲಿ ದೇಶದಲ್ಲಿ 100 ಸ್ಮಾರ್ಟ್ ಸಿಟಿಗಳು ತಲೆಎತ್ತಲಿವೆ’ ಎಂದರು. ‘ಈ ಹಿಂದೆ 20 ಲಕ್ಷ ಜನಸಂಖ್ಯೆ ಇದ್ದ ನಗರಕ್ಕೆ ಮೆಟ್ರೊ ಯೋಜನೆ ಮಂಜೂರು ಮಾಡಲಾಗುತ್ತಿತ್ತು. ಈಗ 10 ಲಕ್ಷ ಜನಸಂಖ್ಯೆ ಇರುವ ನಗರಗಳನ್ನು ಪರಿಗಣಿಸಲಾಗುತ್ತಿದೆ’ ಎಂದರು.

ಮೆಟ್ರೊ ಯೋಜನೆಗೆ ಕೇಂದ್ರವೂ ಆರ್ಥಿಕ ನೆರವು ನೀಡಲಿದೆ. ಮೆಟ್ರೊ ಸಂಚಾರದಿಂದ ಪೀಣ್ಯ ಮಾತ್ರವಲ್ಲದೆ ರಾಜಾಜಿನಗರ, ಮಲ್ಲೇಶ್ವರ, ಯಶವಂತಪುರದ ಜನರಿಗೂ  ಅನುಕೂಲವಾಗಲಿದೆ ಎಂದರು. ವರ್ಷಕ್ಕೆ 50 ಮೆಟ್ರೊ ರೈಲು ಗಳನ್ನು ತಯಾರಿಸುವಂತಹ  ಬಿಇಎಂಎಲ್ ಘಟಕವನ್ನು ಬೆಂಗಳೂರಿನಲ್ಲಿ  ಸ್ಥಾಪಿಸಲಾಗುವುದು ಎಂದರು.

ಕೇಂದ್ರದ ಕಾನೂನು ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿದರು. ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ಮಾತನಾಡಿ, ಮಾಗಡಿ ರಸ್ತೆ–ನಾಯಂಡನಹಳ್ಳಿ ಜಂಕ್ಷನ್‌ ನಡುವೆ ಜೂನ್‌ ಅಂತ್ಯದಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ ಎಂದು ಹೇಳಿದರು.

ನ.1ಕ್ಕೆ ಕಾರ್ಮಿಕ ದಿನ!
‘ನ.1 ರಂದು ಕಾರ್ಮಿಕ ದಿನಾ ಆಚರಿಸಲಾಗುತ್ತಿದೆ’ ಎಂದು  ಸಿದ್ದರಾಮಯ್ಯ ಹೇಳಿದರು. ವೇದಿಕೆಯಲ್ಲಿದ್ದವರು ‘ಮೇ 1’  ಎಂದು ತಿದ್ದಿದರು.

*
ನಮ್ಮ ಮೆಟ್ರೊದ ಪ್ರಯಾಣ ದರವನ್ನು ಹೆಚ್ಚಿಸುವ ಪ್ರಸ್ತಾಪ ಇಲ್ಲ.

-ಪ್ರದೀಪ್‌ ಸಿಂಗ್‌ ಖರೋಲಾ, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

ಅಂಕಿ ಅಂಶಗಳು
2.5 ಕಿ.ಮೀ. ಮೆಟ್ರೊ ಮಾರ್ಗದ ಅಂತರ, 6 ನಿಮಿಷ ಪ್ರಯಾಣ ಅವಧಿ, ₹ 800 ಕೋಟಿ ಮಾರ್ಗದ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT