ADVERTISEMENT

ಮುಂದುವರಿದ ಕಾರ್ಯಾಚರಣೆ ಆ್ಯಪ್‌ ಆಧರಿತ ಟ್ಯಾಕ್ಸಿಗಳ ಜಪ್ತಿ

​ಪ್ರಜಾವಾಣಿ ವಾರ್ತೆ
Published 6 ಮೇ 2016, 19:42 IST
Last Updated 6 ಮೇ 2016, 19:42 IST

ಬೆಂಗಳೂರು:  ‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಗಳು–2016’ ಅಡಿ ಪರವಾನಗಿ ಪಡೆಯದೆ ಸಂಚರಿಸುತ್ತಿದ್ದ ವಿವಿಧ ಕಂಪೆನಿಯ 75 ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

 ಕೆ.ಆರ್‌.ಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದ ಇಲಾಖೆ ಜಂಟಿ ಆಯುಕ್ತ ನರೇಂದ್ರ ಹೋಳ್ಕರ್ ನೇತೃತ್ವದ ತಂಡವು 200 ಹೆಚ್ಚು ವಾಹನಗಳ ತಪಾಸಣೆ ನಡೆಸಿತು.

ಈ ವೇಳೆ ಓಲಾ, ಟ್ಯಾಕ್ಸಿ ಫಾರ್‌ ಶ್ಯೂರ್‌, ಉಬರ್‌ ಸೇರಿದಂತೆ ಹಲವು ಕಂಪೆನಿಗಳ ಟ್ಯಾಕ್ಸಿಗಳು ನಿಯಮಬಾಹಿರವಾಗಿ ಸಂಚರಿಸುತ್ತಿದ್ದುದ್ದು ಅಧಿಕಾರಿಗಳ ಗಮನಕ್ಕೆ ಬಂತು.

ಕೂಡಲೇ ಟ್ಯಾಕ್ಸಿ ಬಗ್ಗೆ ಮಾಹಿತಿ ಪಡೆದುಕೊಂಡ ಅಧಿಕಾರಿಗಳು, ಟ್ಯಾಕ್ಸಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. 75 ಟ್ಯಾಕ್ಸಿಗಳ ಪೈಕಿ ಸಮರ್ಪಕ ದಾಖಲೆ ನೀಡದ 40ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದರು.

‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮದಡಿ ಟ್ಯಾಕ್ಸಿಗಳು ಪರವಾನಗಿ ಪಡೆಯಬೇಕು.  ಆದರೆ, ಯಾವುದೇ ಕಂಪೆನಿಗಳು ಪರವಾನಗಿ ಪಡೆಯದಿರುವುದರಿಂದ ಕಾರ್ಯಾಚರಣೆ ನಡೆಸಿ ಟ್ಯಾಕ್ಸಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದೇವೆ’ ಎಂದು ನರೇಂದ್ರ ಹೋಳ್ಕರ್ ತಿಳಿಸಿದರು.

‘ಹೊಸ ನಿಯಮವನ್ನು ಟ್ಯಾಕ್ಸಿ ಕಂಪೆನಿಗಳು ಪದೇ ಪದೇ ಉಲ್ಲಂಘಿಸುತ್ತಿವೆ. ಅವುಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ನಕಲಿ ನೋಂದಣಿ ಸಂಖ್ಯೆ ಕಾರು ಪತ್ತೆ: ಕಾರ್ಯಾಚರಣೆ ವೇಳೆ ನಕಲಿ ನೋಂದಣಿ ಸಂಖ್ಯೆ ನಾಮಫಲಕ ಹಾಕಿಕೊಂಡಿದ್ದ ಕಾರನ್ನು ಅಧಿಕಾರಿಗಳು ಪತ್ತೆ ಹಚ್ಚಿದರು.

ಕೆ.ಆರ್‌.ಪುರನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೆಟ್‌ ಉದ್ಯಮಿಯೊಬ್ಬರ ಆಡಿ ಎ–6 ಕಾರನ್ನು ತಡೆದು ನಿಲ್ಲಿಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು.

ಈ ವೇಳೆ ಕಾರು ಮಾಲೀಕ ಇಲಾಖೆಗೆ ತೆರಿಗೆ ಪಾವತಿಸದೆ ನಕಲಿ ನೋಂದಣಿ ಸಂಖ್ಯೆ ನಾಮಫಲಕ ಹಾಕಿಕೊಂಡಿದ್ದು ಕಂಡುಬಂತು. ಕಾರು ಜಪ್ತಿ ಮಾಡಿದ ಅಧಿಕಾರಿಗಳು, ತೆರಿಗೆ ಪಾವತಿಗೆ ಗಡುವು ನೀಡಿದ್ದಾರೆ ಎಂದು ಹೋಳ್ಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.