ADVERTISEMENT

ಮೂವರ ಸಾವು, 30 ಮಂದಿಗೆ ಗಾಯ

ಆಯ ತಪ್ಪಿ ಉರುಳಿದ ಖಾಸಗಿ ಬಸ್

​ಪ್ರಜಾವಾಣಿ ವಾರ್ತೆ
Published 25 ಮೇ 2016, 19:32 IST
Last Updated 25 ಮೇ 2016, 19:32 IST

ಕನಕಪುರ: ಮದುವೆಗೆ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಬಸ್‌ ಆಯ ತಪ್ಪಿ ಉರುಳಿದ ಪರಿಣಾಮ ಮೂವರು ಸಾವನ್ನಪ್ಪಿ ಮೂವತ್ತು ಮಂದಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಸಂಗಮ್‌ನಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಕೆಸ್ತೂರು ಗ್ರಾಮದ ಕರೀಗೌಡ(50), ಮಂಚ್ಗೊಂಡನಹಳ್ಳಿ ದೇವರಾಜು(30) ಮತ್ತು ಮಳ್ಳಿಪುರದ ಬಸವೇಗೌಡ(73) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಮೂವತ್ತು ಮಂದಿ ಗಾಯಗೊಂಡಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ತಾಲ್ಲೂಕಿನ ತಮಿಳುನಾಡು ಗಡಿಭಾಗವಾದ ಮಂಚ್ಗೊಂಡನಹಳ್ಳಿಯ ವರ ಮತ್ತು ಸಂಗಮದ ಬೊಮ್ಮಸಂದ್ರದ ವಧುವಿಗೆ ಮದುವೆ ನಿಶ್ಚಯವಾಗಿ ಬುಧವಾರ ಬೆಳಿಗ್ಗೆ 10 ಗಂಟೆಗೆ ಮಡಿವಾಳದ ಶಿವನಾಂಕಾರೇಶ್ವರ ದೇವಾ ಲಯದಲ್ಲಿ ವಿವಾಹ ನಡೆಯುತ್ತಿತ್ತು.

ಮದುವೆಗೆ ಹೋಗಲು ತಡವಾಗುತ್ತಿದೆ ಎಂದು ಚಾಲಕ ಅತಿ ವೇಗವಾಗಿ ಬಸ್ಸನ್ನು ಚಲಾಯಿಸುತ್ತಿದ್ದು, ಸಂಗಮದ ಕಡಿದಾದ ತಿರುವಿನಲ್ಲೂ ಬಸ್ಸನ್ನು ವೇಗವಾಗಿ ಚಲಿಸಲು ಹೋಗಿ ನಿಯಂತ್ರಣ ತಪ್ಪಿ ಪಲ್ಟಿಹೊಡೆಸಿದ್ದಾನೆ.

ಬಸ್ಸು ಪಲ್ಟಿ ಹೊಡೆಯುತ್ತಿದ್ದಂತೆ  ಚಾಲಕ ಜಿಗಿದು  ಪರಾರಿಯಾಗಿದ್ದಾನೆ. ಅದೃಷ್ಟವಶಾತ್‌ ಬಸ್ಸು ರಸ್ತೆಗೆ ನಿರ್ಮಿಸಿದ್ದ ತಡೆಗೋಡೆಗೆ ತಡೆದು ಮತ್ತೊಂದು ಪಲ್ಟಿಯಾಗದೆ ನಿಂತಿದ್ದರಿಂದ ಎಲ್ಲರ ಜೀವ ಉಳಿಯಿತು, ಒಂದು ವೇಳೆ ಪಲ್ಟಿಯಾಗಿದ್ದರೆ ಬಸ್ಸಿನಲ್ಲಿದ್ದ 100 ಮಂದಿ ಸಜೀವವಾಗಿ ದಹನವಾಗುತ್ತಿದ್ದೆವು ಎಂದು ಘಟನೆಯಲ್ಲಿ ಪಾರಾದವರು ತಿಳಿಸಿದ್ದಾರೆ.

ಅಪಘಾತವಾಗುತ್ತಿದ್ದಂತೆ ಒಬ್ಬರು ಸ್ಥಳದಲ್ಲೇ ಸಾವನಪ್ಪಿದರು, ಮತ್ತೊಬ್ಬರು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟರೆ ಮತ್ತೊಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದಾಗ ಅಸು ನೀಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.