ADVERTISEMENT

ಮೆಟ್ರೊ ನಿಲ್ದಾಣದ ಕಂಬಗಳಲ್ಲಿ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2015, 19:30 IST
Last Updated 2 ಅಕ್ಟೋಬರ್ 2015, 19:30 IST

ಬೆಂಗಳೂರು: ಭಿತ್ತಿಪತ್ರಗಳ ಹಾವಳಿಯಿಂದ ಅಂದಗೆಟ್ಟಿದ್ದ ‘ನಮ್ಮ ಮೆಟ್ರೊ’ದ ಕಂಬಗಳನ್ನು ಸ್ವಚ್ಛಗೊಳಿಸಿ, ಅವುಗಳ ಮೇಲೆ  ರಂಗುರಂಗಿನ ಚಿತ್ತಾರಗಳನ್ನು ಬಿಡಿಸುವ ಅಭಿಯಾನವೊಂದು ಪ್ರಾರಂಭವಾಗಿದೆ. ‘ಬೆಂಗಳೂರು ರೈಸಿಂಗ್‌’ ಸಮುದಾಯ ಸಂಘಟನೆ ಹಾಗೂ ಸ್ಥಳೀಯ ವಾಣಿಜ್ಯೋದ್ಯಮಿಗಳ ಸಹಕಾರದೊಂದಿಗೆ ಆರಂಭವಾಗಿರುವ ಈ ಅಭಿಯಾನದಿಂದಾಗಿ  ಸಿಎಂಎಚ್‌ ರಸ್ತೆ ಮತ್ತು ಟ್ರಿನಿಟಿ ವೃತ್ತದ ಬಳಿ ಮೆಟ್ರೊ ಕಂಬಗಳು ಸುಂದರಗೊಂಡಿವೆ.

‘ಈ ಅಭಿಯಾನವನ್ನು ಇತರ ಬಡಾವಣೆಗಳಲ್ಲೂ ಮುಂದುವರೆಸಲಾಗುವುದು’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವಕ್ತಾರ ಯು.ವಿ.ವಸಂತರಾವ್‌ ತಿಳಿಸಿದರು. ‘ಇನ್ನು ಮುಂದೆ ಮೆಟ್ರೊ ಕಂಬಗಳ ಮೇಲೆ ಭಿತ್ತಿಪತ್ರ ಅಂಟಿಸುವವರ ವಿರುದ್ಧ ಪೊಲೀಸರಿಗೆ ದೂರು ಕೊಡಲಾಗುವುದು’ ಎಂದು ಅವರು ಹೇಳಿದರು.

‘ಟ್ರಿನಿಟಿ ವೃತ್ತದ ಬಳಿಯ ಕಂಬಗಳನ್ನು   ಒಬೆರಾಯ್‌ ಹೋಟೆಲ್‌ನ ಸಿಬ್ಬಂದಿ ಸ್ವಚ್ಛಗೊಳಿಸಿ, ಬಣ್ಣ ಬಣ್ಣದ ವಿನ್ಯಾಸಗಳನ್ನು ಬಿಡಿಸಿದ್ದಾರೆ. ಅದೇ ರೀತಿ ಸಿಎಂಎಚ್‌ ರಸ್ತೆಯಲ್ಲಿ ಅಲ್ಲಿನ ಸ್ಥಳೀಯ ವ್ಯಾಪಾರಿಗಳು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ’ ಎಂದು ಅವರು ವಿವರಿಸಿದರು.
‘ಅಗ್ಲಿ ಇಂಡಿಯನ್‌ ಗುಂಪಿನ ಸಲಹೆ ಸೂಚನೆ ಮೇರೆಗೆ ಕಂಬಗಳ ಮೇಲೆ ಚಿತ್ತಾರ ಬಿಡಿಸಲಾಗುತ್ತಿದೆ’ ಎಂಕದು ತಿಳಿಸಿದರು.

‘ಸಿಎಂಎಚ್‌ ರೋಡ್‌ ಶಾಪ್ಸ್‌ ಅಂಡ್‌ ಎಸ್ಟಾಬ್ಲಿಷ್‌ಮೆಂಟ್‌ ಅಸೋಸಿಯೇಷನ್‌’ ಕಾರ್ಯದರ್ಶಿ  ಎನ್‌.ಎಸ್‌.ರಾಮಮೋಹನ್‌ ಮಾತನಾಡಿ, ‘ಮೆಟ್ರೊ ಕಂಬಗಳನ್ನು ಬಣ್ಣದಿಂದ ಅಲಂಕರಿಸಿದ ಮೇಲೆ ನಮ್ಮ ರಸ್ತೆಯನ್ನು ನೋಡುವುದಕ್ಕೆ ಖುಷಿಯಾಗುತ್ತಿದೆ’ ಎಂದರು. ‘ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಆರಂಭವಾಗಿರುವ ವಾಹನ ಮುಕ್ತ ದಿನವನ್ನು ನಮ್ಮ ರಸ್ತೆಯಲ್ಲೂ ಆಚರಿಸುವ ಬಗ್ಗೆ ಸಂಬಂಧ ಪಟ್ಟ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದೇವೆ’ ಎಂದು ಅವರು ಹೇಳಿದರು.

ಒಬೆರಾಯ್‌ ಹೋಟೆಲ್‌ನ ಹಿರಿಯ ವ್ಯವಸ್ಥಾಪಕ ಶಮೀಮ್‌ ರೆಜಾ, ‘ಸ್ವಚ್ಛ ಭಾರತ್‌ ಅಭಿಯಾನದಿಂದ ಪ್ರೇರಣೆ ಪಡೆದು ನಮ್ಮ ಹೋಟೆಲ್‌ನ 180ಕ್ಕೂ ಹೆಚ್ಚು ಉದ್ಯೋಗಿಗಳು ಮೆಟ್ರೊ ಕಂಬಗಳ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡೆವು’ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.