ADVERTISEMENT

ಮೇಯರ್‌ ಹುದ್ದೆ ಮೇಲೆ ಒಕ್ಕಲಿಗರ ಕಣ್ಣು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ಬೆಂಗಳೂರು: ಮೇಯರ್ ಹುದ್ದೆಯನ್ನು ಒಕ್ಕಲಿಗ ಸಮುದಾಯದ ಸದಸ್ಯರಿಗೇ ನೀಡಬೇಕು ಎಂದು ಬಿಜೆಪಿ ಮುಖಂಡ­ರನ್ನು ಒತ್ತಾಯಿಸಲು ವಿಶ್ವ ಒಕ್ಕಲಿಗರ ಮಹಾವೇದಿಕೆ ಸಂಘಟಿಸಿದ್ದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಮೇಯರ್‌– ಉಪ ಮೇಯರ್‌ ಹುದ್ದೆ­ಗಳ ಕುರಿತಂತೆ ಸಮಾಲೋಚಿಸಲು ಕರೆಯಲಾಗಿದ್ದ ಈ ಸಭೆಯಲ್ಲಿ 25ಕ್ಕೂ ಅಧಿಕ ಬಿಬಿಎಂಪಿ ಸದಸ್ಯರು ಪಾಲ್ಗೊಂಡಿ­ದ್ದರು. ಮೇಯರ್‌ ಹುದ್ದೆಗೆ ಪ್ರಬಲ ಆಕಾಂಕ್ಷಿ­­ಗಳಾಗಿರುವ ಗಂಗಬೈರಯ್ಯ (ಡಾ.ರಾಜ್‌ಕುಮಾರ್‌ ವಾರ್ಡ್‌), ಬಿ.ಆರ್‌. ನಂಜುಂಡಪ್ಪ (ಜೆ.ಪಿ. ಪಾರ್ಕ್‌ ವಾರ್ಡ್‌) ಸಹ ಭಾಗವಹಿಸಿದ್ದರು.

ರಾಜ್ಯ ಬಿಜೆಪಿ ಮುಖಂಡರೂ ಆಗಿರುವ ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ. ಸದಾನಂದ ಗೌಡ ಹಾಗೂ ಶಾಸಕ ಆರ್‌. ಅಶೋಕ ಅವರನ್ನು ಇನ್ನೆರಡು ದಿನಗಳಲ್ಲಿ ಭೇಟಿ ಮಾಡಿ, ಸಮುದಾಯದ ಬೇಡಿಕೆ­ಯನ್ನು ಮನವರಿಕೆ ಮಾಡಿಕೊಡಬೇಕು ಎಂಬ ನಿರ್ಣಯ­ವನ್ನೂ ಕೈಗೊಳ್ಳಲಾಯಿತು. 

ಪಕ್ಷದ ನಾಯಕತ್ವ ಒಕ್ಕಲಿಗ ಸಮು­ದಾ­ಯದ ಯಾವ ಸದಸ್ಯನಿಗೆ ಅವಕಾಶ ಮಾಡಿಕೊಟ್ಟರೂ ಉಳಿದ­ವರು ಒಕ್ಕೊರ­ಲಿನಿಂದ ಬೆಂಬಲಿಸಬೇಕು. ಅದಕ್ಕೆ ವಿರೋಧ­ವಾಗಿ ಹೋದರೆ ಸಮು­ದಾಯಕ್ಕೆ ಸಿಗುವ ಅವಕಾಶ ಕೈ­ತಪ್ಪಿ­ಹೋಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

‘ಒಕ್ಕಲಿಗ ಸಮುದಾಯದ ಯಾವುದೇ ಸದಸ್ಯರಿಗೆ ಅವಕಾಶ ಸಿಕ್ಕರೂ ನಾವು ಬೇಸರ ಮಾಡಿಕೊಳ್ಳದೆ ಅವರಿಗೆ ಬೆಂಬಲವಾಗಿ ನಿಲ್ಲಲು ಸಿದ್ಧರಿದ್ದೇವೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಸದಸ್ಯರು ಭರವಸೆ ನೀಡಿದರು.

‘ಬಿಬಿಎಂಪಿಯಲ್ಲಿ ನಮ್ಮ ಸಮುದಾಯಕ್ಕೆ ಸೇರಿದ ಸುಮಾರು 75 ಜನ ಸದಸ್ಯರಿದ್ದಾರೆ. ಮೇಯರ್‌ ಹಾಗೂ ಉಪ ಮೇಯರ್‌ ಹುದ್ದೆಗಳೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಮೇಯರ್‌ ಹುದ್ದೆಯನ್ನು ನಮ್ಮ ಸಮುದಾಯಕ್ಕೆ ಕೊಡಬೇಕು ಎನ್ನುವ ಮನವಿ ನಮ್ಮದಾಗಿದೆ’ ಎಂದು ವೇದಿಕೆ ಅಧ್ಯಕ್ಷ ವೈ.ಡಿ. ರವಿಶಂಕರ್‌ ಹೇಳಿದರು.

ಮೇಯರ್‌ ಹುದ್ದೆಗೆ ಮತ್ತೊಬ್ಬ ಆಕಾಂಕ್ಷಿ­ಯಾಗಿ­ರುವ ಎಚ್‌.ರವೀಂದ್ರ (ವಿಜಯನಗರ ವಾರ್ಡ್‌), ಈ ಹಿಂದೆ ಉಪ ಮೇಯರ್‌ ಆಗಿದ್ದ ಎಲ್‌. ಶ್ರೀನಿವಾಸ್‌ (ಪದ್ಮನಾಭನಗರ), ಲತಾ ನರಸಿಂಹ­ಮೂರ್ತಿ (ಎಚ್‌ಎಸ್‌ಆರ್‌ ಲೇಔಟ್‌) ಮತ್ತಿತರರು ಸಮಾಲೋಚನೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಮಾತ್ರವಲ್ಲದೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರೂ ಸಭೆ­ಯಲ್ಲಿ ಭಾಗವಹಿಸಿದ್ದರು. ಸೆಪ್ಟೆಂಬರ್‌ನಲ್ಲಿ ಆಯ್ಕೆ: ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಹಾಗೂ ಉಪ ಮೇಯರ್‌ ಇಂದಿರಾ ಅವರ ಆಡಳಿತಾವಧಿ ಇನ್ನು 10 ದಿನಗಳಲ್ಲಿ (ಸೆ. 4ರಂದು) ಕೊನೆಗೊಳ್ಳಲಿದೆ. ಬಿಬಿಎಂಪಿ ಕೌನ್ಸಿಲ್‌ಗೆ 2015ರ ಏಪ್ರಿಲ್‌ನಲ್ಲಿ ಮತ್ತೆ ಚುನಾವಣೆ ನಡೆಯಲಿದ್ದು, ಪ್ರಸಕ್ತ ಕೌನ್ಸಿಲ್‌ನ ಕೊನೆಯ ಅವಧಿಗೆ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಮೇಯರ್‌–ಉಪ ಮೇಯರ್‌ ಆಯ್ಕೆ ನಡೆಯಲಿದೆ.

ಮೇಯರ್‌ ಹುದ್ದೆ ಮೇಲೆ ಪ್ರಬಲ ಒಕ್ಕಲಿಗ ಹಾಗೂ ಕುರುಬ ಸಮುದಾಯ­ಗಳು ಕಣ್ಣಿಟ್ಟಿವೆ. ಈ ಎರಡು ಜಾತಿಗಳಿಗೆ ಸೇರಿದ ಸದಸ್ಯರ ಪೈಕಿ ಒಬ್ಬರು ಮೇಯರ್‌ ಗೌನು ತೊಡು­ವುದು ಖಚಿತ­ವಾಗಿದೆ ಎಂದು ಬಿಜೆಪಿ ಮೂಲ­ಗಳು ಹೇಳುತ್ತವೆ. ಶಾಂತ­ಕುಮಾರಿ (ಮೂಡಲ­ಪಾಳ್ಯ), ಗೀತಾ ವಿವೇಕಾನಂದ (ವಿಜ್ಞಾನ­ನಗರ), ಎ.ಎಚ್‌. ಬಸವರಾಜು (ಬನ­ಶಂಕರಿ ದೇವಸ್ಥಾನ), ಪಿ.ಎನ್‌. ಸದಾಶಿವ (ಸುಂಕೇನಹಳ್ಳಿ) ಹಾಗೂ  ಸಿ.ಕೆ. ರಾಮ­ಮೂರ್ತಿ (ಪಟ್ಟಾಭಿರಾಮನಗರ) ಮೇಯರ್‌ ಹುದ್ದೆಗೆ ಸ್ಪರ್ಧೆಯಲ್ಲಿರುವ ಇತರ ಪ್ರಮುಖ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.