ADVERTISEMENT

ರೈಲ್ವೆ ಇಲಾಖೆಗೆ ₹ 20 ಕೋಟಿ ಪಾವತಿ

ಅಷ್ಟ ಪಥ ಕಾರಿಡಾರ್‌ ನಿರ್ಮಾಣಕ್ಕೆ ವೇಗ

​ಪ್ರಜಾವಾಣಿ ವಾರ್ತೆ
Published 22 ಮೇ 2015, 20:10 IST
Last Updated 22 ಮೇ 2015, 20:10 IST

ಬೆಂಗಳೂರು: ನಗರದ ಓಕಳಿಪುರ ಜಂಕ್ಷನ್‌ನಿಂದ ಫೌಂಟೇನ್‌ ವೃತ್ತದವರೆಗೆ (ಸಂಗೊಳ್ಳಿ ರಾಯಣ್ಣ) ಸಿಗ್ನಲ್‌ ಮುಕ್ತ ಅಷ್ಟ ಪಥದ ಕಾರಿಡಾರ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಶುಕ್ರವಾರ ರೈಲ್ವೆ ಇಲಾಖೆಗೆ ₹ 20 ಕೋಟಿ ಪಾವತಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ₹ 20 ಕೋಟಿ ಮೊತ್ತದ ಚೆಕ್‌ಅನ್ನು ರೈಲ್ವೆ ಇಲಾಖೆಯ ವಿಭಾಗೀಯ ಪ್ರಧಾನ ವ್ಯವಸ್ಥಾಪಕರಿಗೆ ಹಸ್ತಾಂತರಿಸಿದರು. ಅಷ್ಟಪಥ ನಿರ್ಮಾಣದ ಆರಂಭಿಕ ಹಂತದಲ್ಲಿ ಯೋಜನಾ ಪ್ರದೇಶದ ರೈಲ್ವೆ ರನ್ನಿಂಗ್ ರೂಮ್ ಕಟ್ಟಡವನ್ನು ಸ್ಥಳಾಂತರಿಸಿ ಮರು ನಿರ್ಮಾಣ ಮಾಡಬೇಕಿದೆ. ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರ ತಲಾ ಶೇ 50ರಷ್ಟು ವೆಚ್ಚವನ್ನು ಭರಿಸಲು ನಿರ್ಧರಿಸಲಾಗಿತ್ತು. ನಮ್ಮ ಪಾಲಿನ ಮೊತ್ತವನ್ನು ನೀಡಲಾಗಿದೆ’ ಎಂದು ಸಚಿವರು ತಿಳಿಸಿದರು.

‘ಕಾಮಗಾರಿ ನಡೆಯುವ ಸಂದರ್ಭದಲ್ಲಿ ಈ ರಸ್ತೆ­ಯಲ್ಲಿ ವಾಹನ ಸಂಚಾರ ನಿಷೇಧ ಮಾಡುವುದಿಲ್ಲ. ಸಾರ್ವಜನಿಕರಿಗೆ ತೊಂದರೆ­ಯಾಗದ ರೀತಿಯಲ್ಲಿ ಕಾಮಗಾರಿ ನಡೆಸಲಾಗುವುದು’ ಎಂದು ಹೇಳಿದರು.

2002ರಲ್ಲೇ ಪಾಲಿಕೆ­ಯಿಂದ ಈ ಯೋಜನೆಗೆ ಒಪ್ಪಿಗೆ ಸೂಚಿಸ­ಲಾಗಿತ್ತು. ರಾಜ್ಯ ಸರ್ಕಾರ 2012ರ ಫೆ.2­ರಂದು ಯೋಜನೆಗೆ ಒಪ್ಪಿಗೆ ನೀಡಿದ್ದರೂ ಭೂಮಿ ಹಸ್ತಾಂತರ ವಿವಾದ­ದಿಂದ ಕಾಮಗಾರಿ ಆರಂಭ­ವಾಗಿರಲಿಲ್ಲ. ಬಿನ್ನಿ ಮಿಲ್ ಬಳಿ 3.16 ಎಕರೆ ಭೂಮಿ ನೀಡಲು ಬಿಬಿಎಂಪಿ ಒಪ್ಪಿದ ಮೇಲೆ ಅಷ್ಟಪಥ ನಿರ್ಮಾಣಕ್ಕೆ ಅಗತ್ಯ ಪ್ರದೇಶ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿತ್ತು.

2012ರ ಡಿ. 20ರಂದು ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಕೂಡ ಮಾಡಲಾಗಿತ್ತು. ಆದರೆ, ಕಾಮಗಾರಿ ಆರಂಭವಾಗಿರಲಿಲ್ಲ. ಇತ್ತೀಚೆಗೆ ನಗರ ಸಂಚಾರ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಷ್ಟಪಥ ಕಾಮಗಾರಿಯನ್ನು 15 ದಿನಗಳಲ್ಲಿ ಆರಂಭಿಸುವಂತೆ ಸೂಚನೆ ನೀಡಿದ್ದರು.

ರೈಲ್ವೆ ಇಲಾಖೆಗೆ ಹಣ ನೀಡಿದ್ದರಿಂದ ರನ್ನಿಂಗ್ ರೂಮ್ ಕಟ್ಟಡದ ಸ್ಥಳಾಂತರ ಪ್ರಕ್ರಿಯೆ ತಕ್ಷಣ ಶುರುವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ನಗರದ 14 ಕಡೆ ರೈಲ್ವೆ ಮೇಲ್ಸೇತುವೆ/ ಕೆಳಸೇತುವೆಗಳ ನಿರ್ಮಾಣಕ್ಕೂ ಒಪ್ಪಂದ ಮಾಡಿಕೊಳ್ಳಲಾಗಿದ್ದು, ರಾಜ್ಯದ ಪಾಲಾದ ₹ 55 ಕೋಟಿಯನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT