ADVERTISEMENT

ವಿಚಾರಣಾಧೀನ ಕೈದಿ ಮೈಸೂರಿಗೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2014, 19:53 IST
Last Updated 20 ಏಪ್ರಿಲ್ 2014, 19:53 IST

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಕಲಿ ನೋಟುಗಳು ಪತ್ತೆಯಾದ ಪ್ರಕರಣ ಸಂಬಂಧ ವಿಚಾರಣಾಧೀನ ಕೈದಿಯೊಬ್ಬನನ್ನು ಮೈಸೂರು ಜೈಲಿಗೆ ಸ್ಥಳಾಂತರ ಮಾಡಿರುವ ಜೈಲು ಅಧಿಕಾರಿಗಳು, ಉಳಿದ ನಾಲ್ಕು ಮಂದಿಯನ್ನು ಬೇರೊಂದು ಬ್ಯಾರಕ್‌ಗೆ ವರ್ಗಾಯಿಸಿದ್ದಾರೆ.

‘ಎಂಟನೇ ಬ್ಯಾರಕ್‌ನಲ್ಲಿ ನಕಲಿ ನೋಟುಗಳನ್ನು ಇಟ್ಟು­ಕೊಂಡಿದ್ದ ವಿಚಾರಣಾಧೀನ ಕೈದಿ ವಿಜಯೇಂದ್ರನನ್ನು ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಜತೆಗೆ ಆತನ ಜತೆಗಿದ್ದ ಗಿರೀಶ್‌ (ಕೈದಿ ಸಂಖ್ಯೆ 4489), ಮೋಹನ್‌ಕುಮಾರ್ (4340), ವೆಂಕಟೇಶ್ (6229) ಹಾಗೂ ಲಕ್ಷ್ಮೀಕಾಂತ್‌ (11961) ಎಂಬ ಸಜಾ ಬಂಧಿಗಳನ್ನು ಎಂಟನೇ ಬ್ಯಾರಕ್‌ನಿಂದ ಮೂರನೇ ಬ್ಯಾರಕ್‌ಗೆ ಸ್ಥಳಾಂತರ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

‘ಕಾರಾಗೃಹದ ಮೂರನೇ ಬ್ಯಾರಕ್ ಅನ್ನು ಶಿಕ್ಷಾ ವಿಭಾಗವೆಂದು ಕರೆಯಲಾಗುತ್ತದೆ. ಅಲ್ಲಿಗೆ ಸ್ಥಳಾಂತರ ಮಾಡಲಾಗಿರುವ ನಾಲ್ವರ ಮೇಲೂ ವಿಶೇಷ ಗಮನ ಹರಿಸಲಾಗುತ್ತಿದೆ. ನಕಲಿ ಹಣ ಜೈಲಿನೊಳಗೆ ನುಸುಳಿರುವ ಬಗ್ಗೆ ಇಲಾಖಾ ಮಟ್ಟದಲ್ಲಿ ವಿಚಾರಣೆ ಆರಂಭವಾಗಿದೆ. ಜತೆಗೆ ಆ ಹಣದ ಮೂಲವನ್ನು ಪತ್ತೆ ಮಾಡುವ ನಿಟ್ಟಿನಲ್ಲಿಯೂ ತನಿಖೆ ನಡೆಯುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟಿ–20 ವಿಶ್ವಕಪ್‌ ಪಂದ್ಯಗಳಿಗೆ ಜೈಲಿನಲ್ಲಿ ಬೆಟ್ಟಿಂಗ್‌ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಜೈಲು ಅಧಿಕಾರಿಗಳು ಏ.6ರಂದು ದಾಳಿ ನಡೆಸಿದ್ದರು. ಈ ವೇಳೆ ಎಂಟನೇ ಬ್ಯಾರಕ್‌­ನಲ್ಲಿದ್ದ ವಿಚಾರಣಾಧೀನ ಕೈದಿ ಹಾಗೂ ಸಜಾಬಂಧಿಗಳ ಬಳಿ ₨ 500 ಮುಖಬೆಲೆಯ 31 ನಕಲಿ ನೋಟುಗಳು ಸಿಕ್ಕಿದ್ದವು. ನಂತರ ಜೈಲು ಅಧಿಕಾರಿಗಳು ಪರಪ್ಪನ ಅಗ್ರಹಾರ ಠಾಣೆ­ಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪ್ರಕರಣದ ತನಿಖೆ­ಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಕೈಗೆತ್ತಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.