ADVERTISEMENT

ವಿಧಾನಸಭೆ ಸಭಾಂಗಣ ನವೀಕರಣ ಆರಂಭ

28 ವರ್ಷಗಳ ಬಳಿಕ ಕೆಳಮನೆಗೆ ಹೊಸ ಕಳೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 19:30 IST
Last Updated 23 ಅಕ್ಟೋಬರ್ 2014, 19:30 IST

ಬೆಂಗಳೂರು: ವಿಧಾನಸಭೆಯ ಸಭಾಂಗಣ ನವೀಕರಣದ ಕಾರ್ಯ ಭರದಿಂದ ಆರಂಭವಾಗಿದೆ. ‘ರೂ 4.5 ಕೋಟಿ ವೆಚ್ಚದ ಈ ನವೀಕರಣ ಕಾರ್ಯ  ಮೂರು ದಿನಗಳಿಂದ ಆರಂಭವಾಗಿದ್ದು ಮುಂದಿನ ಮೂರು ತಿಂಗಳಿನಲ್ಲಿ ಮುಗಿಯಲಿದೆ’  ಎಂದು ಸಚಿವಾಲಯದ ಕಾರ್ಯದರ್ಶಿ ಓಂಪ್ರಕಾಶ್‌ ತಿಳಿಸಿದ್ದಾರೆ.

‘ಸಭಾಂಗಣಕ್ಕೆ ಹೊಸ ರೂಪ ನೀಡಲಾಗುತ್ತಿದ್ದು, ನೆಲಹಾಸು, ಪೀಠೋಪಕರಣ, ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಕುಳಿತುಕೊಳ್ಳುವ ಸಾಲುಗಳ ಆಸನ ಹಾಗೂ ಶೌಚಾಲಯ ಕೊಠಡಿಗಳನ್ನು ನವೀಕರಿಸಲಾಗುವುದು. ಸಭಾಂಗಣದಲ್ಲಿ ಈಗಾಗಲೇ ವಿದ್ಯುತ್‌ ಹಾಗೂ ಧ್ವನಿವರ್ಧಕ ವ್ಯವಸ್ಥೆ ವಿಭಾಗಗಳ ಕೆಲಸ ಮುಗಿದಿದೆ’ ಎಂದು ಅವರು ತಿಳಿಸಿದ್ದಾರೆ.

‘ಲೋಕೋಪಯೋಗಿ ಇಲಾಖೆಯು ನವೀಕರಣದ ಗುತ್ತಿಗೆಯನ್ನು ಸಂಜಯ್‌ ಮಾರ್ಕೆಟಿಂಗ್’ ಎಂಬ ಹೆಸರಿನ ಕಂಪೆನಿಗೆ ನೀಡಿದೆ’ ಎಂದು ಓಂಪ್ರಕಾಶ್‌ ಹೇಳಿದ್ದಾರೆ. 1986ರಲ್ಲಿ ಸಾರ್ಕ್‌ ಸಮ್ಮೇಳನ ನಡೆದ ಸಮಯದಲ್ಲಿ ವಿಧಾನಸಭೆ ಕೆಳಮನೆ ಸಭಾಂಗಣದ ನವೀಕರಣ ಕಾರ್ಯ ನಡೆದಿತ್ತು. ಕೆಲವು ತಿಂಗಳ ಹಿಂದಷ್ಟೇ ವಿಧಾನ ಪರಿಷತ್ತಿನ ನವೀಕರಣ ಕಾರ್ಯವನ್ನು ರೂ 7 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಆಧುನಿಕ ವಿದ್ಯುತ್‌ ಮತ್ತು ಧ್ವನಿವರ್ಧಕ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗಿದೆ. ಪರಿಷತ್‌  ಅನ್ನು 40 ವರ್ಷಗಳ ಹಿಂದೆ ನವೀಕರಣಗೊಳಿಸಲಾಗಿತ್ತು.

ಬೆಳಗಾವಿ ಅಧಿವೇಶನ:
‘ಮುಂದಿನ ವರ್ಷದ ಜನವರಿ ತಿಂಗಳಿನ ಒಳಗಾಗಿ ನವೀಕರಣ ಕಾರ್ಯ ಪೂರ್ಣಗೊಳ್ಳಲಿದೆ. ಚಳಿಗಾಲದ ಅಧಿವೇಶನ ನವೆಂಬರ್‌ ತಿಂಗಳಿನಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಬೇಕು. ಈ ಸಂಬಂಧ ನಾನೀಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತಿಳಿಸಿದ್ದೇನೆ. ಆದರೆ ಈ ಪತ್ರಕ್ಕೆ ಇನ್ನೂ ಯಾವುದೇ ಪ್ರತ್ಯುತ್ತರ ಬಂದಿಲ್ಲ’ ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು.

ಲೋಕೋಪಯೋಗಿ ಇಲಾಖೆಯು ವಿಧಾಸಭೆಯ ಸಭಾಂಗಣದ ನವೀಕರಣ ಕಾರ್ಯಕ್ಕೆ ಪ್ರಸಕ್ತ ವರ್ಷದ ಆರಂಭದಲ್ಲಿ ಎರಡು ಬಾರಿ ಪ್ರಯತ್ನ ನಡೆಸಿತ್ತು. ಆದರೆ ಗುತ್ತಿಗೆದಾರರು ಇದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ‘ಆಸನಗಳ ಹೊದಿಕೆ ಗುತ್ತಿಗೆ ಹೆಚ್ಚಿನ ಮೊತ್ತದಿಂದ ಕೂಡಿದೆ’ ಎಂದು ಆರೋಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.