ADVERTISEMENT

ವೈದ್ಯ ಪರೀಕ್ಷೆಯ ಪೂರ್ವಭಾವಿ ಮಾಹಿತಿ ಅಗತ್ಯ

ರಾಘವೇಶ್ವರ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ಬೆಂಗಳೂರು: ‘ಅತ್ಯಾಚಾರದ ಆರೋಪ ಎದುರಿಸು ತ್ತಿರುವ ನಮ್ಮ ಕಕ್ಷಿದಾರರನ್ನು ಸಿಐಡಿ ತನಿಖಾ ತಂಡ ಯಾವ ವಿಧಾನದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಿದೆ  ಎಂಬುದನ್ನು ಮುಂಚಿತವಾಗಿಯೇ ತಿಳಿಸಬೇಕು. ಇಲ್ಲದೇ ಹೋದರೆ ಇದು ವ್ಯಕ್ತಿಯೊಬ್ಬನ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಯಾಗಲಿದೆ ಎಂಬ ಆತಂಕ ನಮ್ಮನ್ನು ತೀವ್ರವಾಗಿ ಕಾಡುತ್ತಿದೆ’ ಎಂದು ರಾಮ ಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಪರ ಹಿರಿಯ ವಕೀಲ ಕೆ.ಜಿ.ರಾಘವನ್‌ ಕಳವಳ ವ್ಯಕ್ತಪಡಿಸಿದರು.

ನ್ಯಾಯಮೂರ್ತಿ ಎ.ಎನ್. ವೇಣು ಗೋಪಾಲಗೌಡ ಅವರಿದ್ದ ಏಕಸದಸ್ಯ ಪೀಠದ ಮುಂದೆ ಶುಕ್ರವಾರ ಎರಡು ಗಂಟೆಗಳಿಗೂ ಹೆಚ್ಚು ಕಾಲ ವಾದ ಮಂಡಿಸಿದ ಅವರು, ಈ ಸಂಬಂಧ ಸುಪ್ರೀಂ ಕೋರ್ಟಿನ ಹತ್ತು ಹಲವು ತೀರ್ಪುಗಳನ್ನು ಸವಿವರವಾಗಿ ಉಲ್ಲೇಖಿಸಿದರು.
‘ಅಪರಾಧ ಪ್ರಕ್ರಿಯಾ ಸಂಹಿತೆಯ  ಕಲಂ 53 ‘ಎ’ ಅನುಸಾರ, ವೈದ್ಯಕೀಯ ಪರೀಕ್ಷೆಯಲ್ಲಿ ರಕ್ತ, ಮೂತ್ರ, ಉಗುಳು, ವೀರ್ಯವನ್ನು ಸಾಕ್ಷ್ಯದ ದೃಷ್ಟಿಯಿಂದ ಪಡೆಯಬೇಕು ಎಂದು ಕಾನೂನು ಹೇಳುತ್ತದೆ­ಯಾದರೂ, ಇದನ್ನೆಲ್ಲಾ ಆರೋಪಿಗೆ ಹಿಂಸೆ ಮಾಡಿ ಪಡೆಯುವಂತಿಲ್ಲ.

ಹೀಗಾಗಿ  ಆರೋಪಿಯ ವೈದ್ಯಕೀಯ ತನಿಖೆ  ಕುರಿತಂತೆ ಸೂಕ್ತ ಕಾರಣವನ್ನು ನೋಟಿಸಿನಲ್ಲಿ ಮೊದಲೇ ವಿವರಿಸಬೇಕು.  ಒಂದೊಮ್ಮೆ ವೈದ್ಯರು ತಿಳಿಸದೇ ಪರೀಕ್ಷೆ ನಡೆಸಿದರೆ ಅದು ವ್ಯಕ್ತಿಯೊಬ್ಬನ ವೈಯಕ್ತಿಕ ಹಕ್ಕನ್ನು ಕಸಿದಂತೆ ಮತ್ತು  ಸಂವಿಧಾನದ 14 ಮತ್ತು 21ನೇ ವಿಧಿಯ ಸ್ಪಷ್ಟ ಉಲ್ಲಂಘನೆಯೂ ಆಗುತ್ತದೆ’ ಎಂದು ಹೇಳಿದರು. 

‘ಅಷ್ಟೇ ಅಲ್ಲ, ಇದು ಕೇವಲ ದೈಹಿಕ ಪರೀಕ್ಷೆ ಮಾತ್ರವಾಗಿ ಕಾಣುತ್ತಿಲ್ಲ. ಬೇರೇನೋ ಇದೆ ಎಂಬ ಭಯವೂ ನಮಗಿದೆ. ಏಕಾಂತದಲ್ಲಿ ಆರೋಪಿಯ ಪರೀಕ್ಷೆ ನಡೆಸುವುದರಿಂದ ಅದು ಆತನಿಗೆ ಯಾತನೆ ಎನಿಸಬಹುದು.  ಹಾಗಾಗಿ ತನಿಖೆಯ ವೇಳೆ ನಮ್ಮ ಕಕ್ಷಿದಾರರ ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ ಆಗಬೇಕು ಎಂಬುದೇ ನಮ್ಮ ಏಕಮಾತ್ರ ಪ್ರತಿಪಾದನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.