ADVERTISEMENT

ವ್ಯಂಗ್ಯಚಿತ್ರದಲ್ಲೂ ನೋಟು ರದ್ದತಿಯ ಗುಂಗು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 20:19 IST
Last Updated 4 ಡಿಸೆಂಬರ್ 2016, 20:19 IST
ಕಲಾವಿದ ವೀರೇಶ್‌ ರುದ್ರಸ್ವಾಮಿ ಅವರು ತಮ್ಮ ಚಿತ್ರಕಲೆಯನ್ನು ಹರೀಶ್‌ ಜೆ. ಪದ್ಮನಾಭ್‌ ಅವರಿಗೆ ತೋರಿಸಿದರು. ‘ಆರ್ಟ್‌ ಪಾರ್ಕ್‌’ ಸಂಘಟನೆಯ ಕಲಾವಿದ ಎಸ್‌.ಜಿ. ವಾಸುದೇವ್, ಗೀತಾ ಸುಬ್ರಹ್ಮಣ್ಯ ಮತ್ತು ಶಿವಾನಂದ ಬಸವಂತಪ್ಪ ಇದ್ದರು
ಕಲಾವಿದ ವೀರೇಶ್‌ ರುದ್ರಸ್ವಾಮಿ ಅವರು ತಮ್ಮ ಚಿತ್ರಕಲೆಯನ್ನು ಹರೀಶ್‌ ಜೆ. ಪದ್ಮನಾಭ್‌ ಅವರಿಗೆ ತೋರಿಸಿದರು. ‘ಆರ್ಟ್‌ ಪಾರ್ಕ್‌’ ಸಂಘಟನೆಯ ಕಲಾವಿದ ಎಸ್‌.ಜಿ. ವಾಸುದೇವ್, ಗೀತಾ ಸುಬ್ರಹ್ಮಣ್ಯ ಮತ್ತು ಶಿವಾನಂದ ಬಸವಂತಪ್ಪ ಇದ್ದರು   

ಬೆಂಗಳೂರು: ರವೀಂದ್ರ ಕಲಾಕ್ಷೇತ್ರ ಆವರಣದ ಶಿಲ್ಪವನದಲ್ಲಿ ಭಾನುವಾರ ವ್ಯಂಗ್ಯ ಚಿತ್ರಗಳ ಗುಂಗು ಆವರಿಸಿತ್ತು. ನೋಟು ರದ್ದತಿಯ ವಿವಿಧ ಆಯಾಮಗಳು ಕೆಲವರ ಕ್ಯಾನ್‌ವಾಸ್‌ನಲ್ಲಿ ಜಾಗ ಪಡೆದರೆ, ಇನ್ನೂ ಕೆಲವರು ಅಲ್ಲಿದ್ದ ಜನರ ಚಹರೆಗಳನ್ನು ರೇಖೆಗಳಲ್ಲಿ ಹಿಡಿದಿಟ್ಟರು.

‘ಆರ್ಟ್‌ ಪಾರ್ಕ್‌’ ಸಂಘಟನೆ ಪ್ರತಿ ತಿಂಗಳ ಮೊದಲ ಭಾನುವಾರ ಕಲಾಮೇಳ ಏರ್ಪಡಿಸುತ್ತದೆ. ಈ ಬಾರಿ ವ್ಯಂಗ್ಯ ಚಿತ್ರಕಲೆಗೆ ಅಲ್ಲಿ ಅವಕಾಶ ನೀಡಲಾಗಿತ್ತು. ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷ ಹರೀಶ್‌ ಜೆ. ಪದ್ಮನಾಭ್‌ ಅವರು ಮೇಳವನ್ನು ಉದ್ಘಾಟಿಸಿದರು.

ರದ್ದಾದ ಅಧಿಕ ಮುಖಬೆಲೆ ನೋಟುಗಳ ಮೇಲೆ ಕುಳಿತ ವ್ಯಕ್ತಿ, ಬ್ಯಾಂಕ್‌ ಸಿಬ್ಬಂದಿಯೊಂದಿಗೆ ಜಗಳ ಕಾಯುತ್ತಿದ್ದ ಗ್ರಾಹಕರು, ಎಟಿಎಂಗಳ ಎದುರು  ಸಾಲುಗಟ್ಟಿದ ಜನ ಹೀಗೆ ದೇಶದಲ್ಲಿ ಚರ್ಚೆಯಾಗುತ್ತಿರುವ ನೋಟಿನ ವಿಚಾರವನ್ನು ವ್ಯಂಗ್ಯಚಿತ್ರಕಾರರು ರೇಖೆಗಳ ಮೂಲಕ ಅಭಿವ್ಯಕ್ತಿಗೊಳಿಸಿದರು.

ಮಕ್ಕಳೊಂದಿಗೆ ಮಕ್ಕಳಾದ ಕೆಲವು ಹಿರಿಯ ವ್ಯಂಗ್ಯಚಿತ್ರಕಾರರು ಅವರ ಬಳಿ ರೇಖೆ ಬರೆಸಿ ಅದಕ್ಕೆ ಒಂದು ರೂಪ ನೀಡಿ ಬೆರಗುಗೊಳಿಸುತ್ತಿದ್ದರು.‘ ಸುಂದರ ಮೊಗದ ವ್ಯಕ್ತಿಗಿಂತ ಗಡ್ಡ, ಕನ್ನಡ, ಜುಬ್ಬ, ದೊಡ್ಡ ಮೂಗು ಹೀಗೆ ವಿಚಿತ್ರ ಚಹರೆಯ ವ್ಯಕ್ತಿ ಸಿಕ್ಕರೆಂದರೆ ನಮ್ಮ ಬೆರಳುಗಳಿಗೆ ಉತ್ಸಾಹ ಬರುತ್ತದೆ’ ಎಂದು ಅಲ್ಲಿದ್ದ ವ್ಯಂಗ್ಯಚಿತ್ರ ಕಲಾವಿದರೊಬ್ಬರು ಹೇಳಿದರು. ಇದು ನಿಜವೆಂದು ಸಾಬೀತಾಗಲು ಬಹಳ ಸಮಯ ತೆಗೆದುಕೊಳ್ಳಲಿಲ್ಲ. ಅಲ್ಲಿಗೆ ಬಂದಿದ್ದ ನೀಳಕಾಯದ ಗಡ್ಡದಾರಿ ವ್ಯಕ್ತಿಯೊಬ್ಬರ ರೂಪ ಸದ್ದಿಲ್ಲದೆ ನಾಲ್ಕೈದು ಕಲಾವಿದರ ಕ್ಯಾನ್‌ವಾಸ್‌ ಮೇಲೆ ರೇಖೆಗಳಲ್ಲಿ ಒಡಮೂಡಿತು.

ಎಸ್‌.ಜಿ.ವಾಸುದೇವ್‌ ಮತ್ತು ಅವರ ಕಲಾವಿದರ ಬಳಗ ಒಟ್ಟಾಗಿ ಸೇರಿ ಹುಟ್ಟುಹಾಕಿದ ‘ಆರ್ಟ್‌ ಪಾರ್ಕ್‌’ ಸಂಸ್ಥೆ ಏರ್ಪಡಿಸುವ ಪ್ರತಿ ತಿಂಗಳ ಮೇಳದಲ್ಲಿ 30 ಜನ ಕಲಾವಿದರಿಗೆ ಆಹ್ವಾನ ಇರುತ್ತದೆ. ಪ್ರತಿ ಬಾರಿಯೂ ಒಂದು ಚಿತ್ರಕಲಾ ಪ್ರಕಾರಕ್ಕೆ ವೇದಿಕೆ ಕಲ್ಪಿಸಲಾಗುತ್ತದೆ.

ಕೆಲವು ಕಲಾವಿದರು ಬೆಳಿಗ್ಗೆ 11ಗಂಟೆಯಿಂದ ಸಂಜೆ 4ರವರೆಗೆ ಶಿಲ್ಪವನದಲ್ಲೇ ಇದ್ದು, ಚಿತ್ರ ರಚಿಸಿದರೆ, ಇನ್ನು ಕೆಲವರು ತಾವು ಮೊದಲೇ ರಚಿಸಿದ್ದ ರೇಖಾಕೃತಿಗಳನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದರು.

ಆರ್ಟ್‌ ಪಾರ್ಕ್‌ ಸಂಸ್ಥೆಯ ಶಿವಾನಂದ ಬಸವಂತಪ್ಪ ಅವರು ಮಾತನಾಡಿ, ‘ಇಲ್ಲಿಯವರೆಗೂ ಕಲಾಕೃತಿಗಳನ್ನು ಕೇವಲ ಸಂಗ್ರಹಿಸಿ ಇಡಲಾಗುತ್ತಿತ್ತು.  ಆದರೆ ಅದು ಎಲ್ಲರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಅವುಗಳನ್ನು ಒಟ್ಟುಗೂಡಿಸಿ ಪುಸ್ತಕ ತರುವ ಆಲೋಚನೆ ಇದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT