ADVERTISEMENT

ಶಶಿಕಲಾಗೆ ವಿಶೇಷ ಸೌಲಭ್ಯ: ಪಿಎಸ್ಐ ಮಧ್ಯವರ್ತಿ

ಆಂಬುಲೆನ್ಸ್‌ ಮೂಲಕ ಊಟ, ತರಕಾರಿ ಸಾಗಣೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 19:46 IST
Last Updated 24 ಜುಲೈ 2017, 19:46 IST

ಬೆಂಗಳೂರು: ‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾಗೆ ವಿಶೇಷ ಸೌಲಭ್ಯ ಒದಗಿಸಲು ಪಿಎಸ್‌ಐ ಒಬ್ಬರು ಮಧ್ಯವರ್ತಿಯಾಗಿದ್ದಾರೆ’ ಎಂದು  ಜೈಲಿನ ಕೆಲ ಅಧಿಕಾರಿಗಳು ಹಾಗೂ  ಸಿಬ್ಬಂದಿ, ಅಕ್ರಮಗಳ ವಿಚಾರಣೆ ನಡೆಸುತ್ತಿರುವ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಮೂರು ಪುಟಗಳಲ್ಲಿ ಉಲ್ಲೇಖಿಸಿರುವ ಸಿಬ್ಬಂದಿ, ‘ಈ ಹಿಂದಿನ ಡಿಜಿಪಿ ಎಚ್‌.ಎನ್‌.ಸತ್ಯನಾರಾಯಣ ಅವರಿಗೆ ಈ ಪತ್ರ ಕಳುಹಿಸಿದ್ದೆವು. ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ  ಅದರ ಪ್ರತಿಯನ್ನು ನಿಮಗೆ (ವಿನಯ್‌ಕುಮಾರ್‌) ಕಳುಹಿಸುತ್ತಿದ್ದೇವೆ. ಇದನ್ನು ಪರಿಶೀಲಿಸಿ ಅಕ್ರಮಗಳ ತನಿಖೆಯನ್ನು ಸಿಐಡಿಗೆ ವಹಿಸಿ’ ಎಂದು ಕೋರಿದ್ದಾರೆ.

‘ಜೈಲಿನ ಹೊರ ಗೋಡೆ, ಮುಖ್ಯದ್ವಾರದ ಕಾವಲು ಹಾಗೂ ಸಂದರ್ಶಕರ ತಪಾಸಣೆಗಾಗಿ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್‌ಐಎಸ್‌ಎಫ್‌) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆ ಪಡೆಯಲ್ಲೇ ಪಿಎಸ್‌ಐ ಸಹ ಇದ್ದು, ಅವರಿಂದಲೇ ಇಂದು ಜೈಲಿನಲ್ಲಿ ಅಕ್ರಮಗಳು ನಡೆಯುತ್ತಿವೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ತಮಿಳುನಾಡಿನ ಮುಖಂಡರಾದ ದಿನಕರನ್‌, ಪುಗಲಂದಿ ಹಾಗೂ ಸಂದಿಲ್‌, ಪ್ರತಿದಿನ ಸಂಜೆ 7 ಗಂಟೆಗೆ ಜೈಲಿಗೆ ಬರುತ್ತಿದ್ದಾರೆ. ಅವರನ್ನು ಈ ಪಿಎಸ್ಐನೇ ಶಶಿಕಲಾ ಕೊಠಡಿಗೆ ಕರೆದುಕೊಂಡು ಹೋಗುತ್ತಾನೆ. ಅವರೆಲ್ಲ ಆತನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾನೆ’.

‘ಹೊಸೂರಿನ ಶಾಸಕರ ಮನೆಯಿಂದ ಪ್ರತಿದಿನ ಶಶಿಕಲಾಗೆ ಊಟ ಬರುತ್ತದೆ.  ಆಕೆಯ ಕೊಠಡಿಯಲ್ಲಿ  ಎಲ್‌ಇಡಿ ಟಿ.ವಿ., ಹವಾನಿಯಂತ್ರಿತ, ಐಷಾರಾಮಿ ಮಂಚ ಹಾಗೂ ಅಡುಗೆ ಮಾಡಿಕೊಳ್ಳಲು ಗ್ಯಾಸ್‌ ಸೇರಿ ಎಲ್ಲ ಸಾಮಗ್ರಿಗಳಿವೆ. ಊಟ, ತರಕಾರಿ ಹಾಗೂ ಹಣ್ಣುಗಳನ್ನು  ಯಾರಿಗೂ ಅನುಮಾನ ಬಾರದಂತೆ ಆಂಬುಲೆನ್ಸ್‌ ಮೂಲಕ ಒಳಗೆ ಕಳುಹಿಸಲಾಗುತ್ತಿದೆ. ಇದರ ಅಕ್ರಮದ ಉಸ್ತುವಾರಿಯನ್ನು  ಪಿಎಸ್‌ಐನೇ ವಹಿಸಿಕೊಂಡಿದ್ದಾನೆ’  ಎಂದು ದೂರಿನಲ್ಲಿ ಸಿಬ್ಬಂದಿ ಆರೋಪಿಸಿದ್ದಾರೆ.

‘ಈ ಹಿಂದಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್‌ ಅವರ ಆಪ್ತ ಎಂದು ಹೇಳಿಕೊಳ್ಳುವ ಪಿಎಸ್‌ಐ, ಶಶಿಕಲಾಗೆ ವಿಶೇಷ ಸೌಲಭ್ಯ ಒದಗಿಸಲು ಲಕ್ಷಾಂತರ ರೂಪಾಯಿ ಲಂಚ ಪಡೆದಿದ್ದಾನೆ. ಅದೇ ಹಣದಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿ ನಿವೇಶನ ಖರೀದಿಸಿದ್ದಾನೆ. ಸ್ವಂತ ಊರಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ಎರಡು ಅಂತಸ್ತಿನ ಮನೆ ಕಟ್ಟಿಸುತ್ತಿದ್ದಾನೆ. ಬೇನಾಮಿ ಹೆಸರಿನಲ್ಲಿ ಎರಡು ಕಾರು ಇಟ್ಟುಕೊಂಡಿದ್ದಾನೆ’.

‘ಇತ್ತೀಚೆಗೆ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದ ಐಎಎಸ್‌ ಅಧಿಕಾರಿ ಗಂಗಾರಾಮ್ ಬಡೇರಿಯಾ, ಕಪ್ಪು ಹಣ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ಜಯಚಂದ್ರ, ವೀರೇಂದ್ರ ಹಾಗೂ ಸಿಐಡಿ ಅಧಿಕಾರಿಗಳು ಬಂಧಿಸಿದ್ದ ಟಿಜಿಎಸ್‌ ಮಾಲೀಕ ಸಚಿನ್‌ ನಾಯಕ್‌ ಅವರಿಗೂ ಇದೇ ಪಿಎಸ್‌ಐ ವಿಶೇಷ ಸೌಲಭ್ಯ ಒದಗಿಸುತ್ತಿದ್ದಾನೆ’ ಎಂದು ನೊಂದ ಸಿಬ್ಬಂದಿ ದೂರಿದ್ದಾರೆ.

‘ನೊಂದ ಜೈಲು ಅಧಿಕಾರಿ, ಸಿಬ್ಬಂದಿ ಎಂದು ನಮೂದು’
ಹಿರಿಯ ಅಧಿಕಾರಿಗಳಿಗೆ ಬರೆದಿದ್ದಾರೆ ಎನ್ನಲಾದ ದೂರಿನ ಪತ್ರದ ಕೊನೆಯಲ್ಲಿ ‘ನೊಂದ ಜೈಲು ಅಧಿಕಾರಿ ಹಾಗೂ ಸಿಬ್ಬಂದಿ’ ಎಂದು ನಮೂದಿಸಲಾಗಿದೆ. ಯಾರೊಬ್ಬರೂ ಸಹಿಯನ್ನು ಮಾಡಿಲ್ಲ. ಈ ಬಗ್ಗೆ ಕಾರಾಗೃಹಗಳ ಇಲಾಖೆಯ ಹಿರಿಯ ಅಧಿಕಾರಿಯನ್ನು ಕೇಳಿದಾಗ, ‘ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ವಿಚಾರಣಾ ಸಮಿತಿಗೆ ದೂರನ್ನು ಕೊಟ್ಟಿರಬೇಕು. ಅದು ನನ್ನ ಗಮನಕ್ಕೆ ಬಂದಿಲ್ಲ. ವಿಚಾರಿಸಲೂ ಹೋಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.