ADVERTISEMENT

ಶೀಘ್ರ ಕಾಮಗಾರಿಗೆ ತಾಕೀತು

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 20:03 IST
Last Updated 22 ಸೆಪ್ಟೆಂಬರ್ 2014, 20:03 IST

ಬೆಂಗಳೂರು: ನಗರದ ಮಿಂಟೋ ಆಸ್ಪತ್ರೆ­ಯಲ್ಲಿ ‘ನೇತ್ರ ತಪಾಸಣೆಯ ಹೊಸ ಉಪಕ­ರ­ಣಗಳ’ ಉದ್ಘಾಟನಾ ಸಮಾ­ರಂಭದಲ್ಲಿ ಸೋಮವಾರ ಭಾಗವಹಿಸಿದ್ದ ವೈದ್ಯಕೀಯ ಶಿಕ್ಷಣ ಸಚಿವ ಶರಣ್‌ ಪ್ರಕಾಶ್ ಪಾಟೀಲ್ ಅವರು, ಆಸ್ಪತ್ರೆ ಆವರಣದಲ್ಲಿ ನನೆಗುದಿಗೆ ಬಿದ್ದಿರುವ ಕಟ್ಟಡಗಳ ಕಾಮಗಾರಿ ಪರಿಶೀಲಿಸಿದರು.

ಈ ವೇಳೆಯಲ್ಲಿ ಸ್ಥಳದಲ್ಲಿಯೇ ಇದ್ದ ಲೋಕೋಪಯೋಗಿ ಇಲಾಖೆ ಎಂಜಿನಿ­ಯರ್ ಅವರನ್ನು ತರಾಟೆಗೆ ತೆಗೆದು­ಕೊಂಡರು. ಡಿಸೆಂಬರ್ ವೇಳೆಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು. ನಂತರ ಆಸ್ಪತ್ರೆಯಲ್ಲಿ ಅಳವಡಿಸಲಾ­ಗಿರುವ ನೂತನ ಸೇವೆ ಮತ್ತು ಉಪ­ಕರಣ­ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಲಮಿತಿಯೊಳಗೆ ಕೆಲಸ ಮಾಡಬೇಕು. ಇಲ್ಲದಿದ್ದರೆ ರೋಗಿಗಳಿಗೆ ಪ್ರಯೋಜನ­ವಾಗುವುದಿಲ್ಲ. ಕಟ್ಟಡ ಕಾಮ­ಗಾರಿ­ಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ. ಅದಕ್ಕಾಗಿ ಸರ್ಕಾರ ಈಗಾಗಲೇ ₨ 6 ಕೋಟಿ ಮೀಸಲಿಟ್ಟಿದೆ’ ಎಂದರು.

‘ಆಸ್ಪತ್ರೆ ಆವರಣದಲ್ಲಿ ಕಳೆದ 15 ವರ್ಷದಿಂದ ನಿರ್ಮಾಣವಾಗುತ್ತಿರುವ ಕಟ್ಟಡದ ನಿರ್ಮಾಣ ಕಾರ್ಯಕ್ಕೂ ಅಗತ್ಯ ಹಣಕಾಸು ನೆರವು ನೀಡಲು ಸರ್ಕಾರ ಸಿದ್ಧವಿದೆ. ಈ ಎರಡೂ ಕಟ್ಟ­ಡಗಳ ಕಾಮಗಾರಿಯನ್ನು ಕಾಲಮಿ­ತಿ­ಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಸರ್ಕಾರಿ ಆಸ್ಪತ್ರೆಯು ಕೇವಲ ಬಡ ರೋಗಿಗಳಿಗೆ ಮಾತ್ರ ಸೀಮಿತವಾಗದೆ, ಎಲ್ಲಾ ವರ್ಗದ ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುವಂತಾಗಬೇಕು. ಹೀಗಾಗಿ, ಕಾರ್ಪೊರೇಟ್ ಆಸ್ಪತ್ರೆಗಳಿಗೆ ಪೈಪೋಟಿಯಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆ­ಯು­ವಂತಾಗಬೇಕು’ ಎಂದು ಹೇಳಿದರು.

‘ಸರ್ಕಾರಿ ಆಸ್ಪತ್ರೆಗಳ ಗುಣ­ಮಟ್ಟ ಕಾಪಾಡಲು ಸರ್ಕಾರ ಬದ್ಧವಾಗಿದೆ. ಸರ್ಕಾರವು ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಹಾಗೂ ಹೋಬಳಿ ಮಟ್ಟದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ತೆರೆಯಲು ಮುಂದಾಗಿದೆ’ ಎಂದರು.
ಬೆಂಗಳೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ. ದೇವದಾಸ್ ಮಾತನಾಡಿ, ‘ವೈದ್ಯರು ಬಡ್ತಿಗಾಗಿ ಕಾದಾಡುವುದನ್ನು ಬಿಟ್ಟು, ಶ್ರದ್ಧೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಮೂಲಕ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವತ್ತ ಗಮನ ಹರಿಸಬೇಕು’ ಎಂದು ಹೇಳಿದರು.

‘ಸೌಲಭ್ಯಗಳ ಕೊರತೆಗಳಿದ್ದಲ್ಲಿ ನನ್ನ ಗಮನಕ್ಕೆ ತಂದರೆ ಸಚಿವರಿಗೆ ತಿಳಿಸಿ ಅದನ್ನು ಒದಗಿಸಿಕೊಡುವ ಪ್ರಯತ್ನ ಮಾಡುತ್ತೇನೆ. ಇರುವ ಸೌಲಭ್ಯಗಳನ್ನು ಯಾರು ಸರಿಯಾಗಿ ಬಳಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುವುದಿಲ್ಲವೋ ಅಂತಹವರ ವಿರುದ್ಧ ಕ್ರಮ ಕೈಗೊ­ಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.

ನೇತ್ರ ಚಿಕಿತ್ಸಾ ಉಪಕರಣ
ಕೆನರಾ ಬ್ಯಾಂಕ್ ವತಿಯಿಂದ ₨ 10 ಲಕ್ಷ ವೆಚ್ಚದಲ್ಲಿ  ಮಿಂಟೋ ಆಸ್ಪತ್ರೆಗೆ ‘ಆಪ್ತಮಾಲಿಕ್ ಆಪ­ರೇಟಿಂಗ್ ಮೈಕ್ರೋಸ್ಕೋಪ್ಸ್’ ನೇತ್ರ ಚಿಕಿತ್ಸಾ ಉಪಕರಣ ಹಾಗೂ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಯೋಜನೆಯಡಿ ಮೊಬೈಲ್‌ ವ್ಯಾನ್ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.