ADVERTISEMENT

ಶೀಘ್ರ ಹೊಸ ಸಂಚಾರ ಠಾಣೆ

ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಗೃಹ ಸಚಿವ ಜಾರ್ಜ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2015, 20:00 IST
Last Updated 28 ಜನವರಿ 2015, 20:00 IST

ಬೆಂಗಳೂರು: ‘ನಗರದ ಸಂಚಾರ ವ್ಯವಸ್ಥೆ ಸುಧಾರಿಸಲು ಸದ್ಯದಲ್ಲೇ ಹೊಸ ಸಂಚಾರ ಪೊಲೀಸ್‌ ಠಾಣೆಗಳನ್ನು ಆರಂಭಿ­ಸ­ಲಾಗುತ್ತದೆ’ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ಪೊಲೀಸ್‌ ಮತ್ತು ಸಾರಿಗೆ ಇಲಾ­ಖೆಯ ಸಹಯೋಗದಲ್ಲಿ ಬುಧವಾರ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿ­ಕೊಂಡಿದ್ದ 26ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ ಸುಮಾರು 1.30 ಕೋಟಿ ಜನಸಂಖ್ಯೆ ಇದೆ ಮತ್ತು 44 ಸಂಚಾರ ಠಾಣೆಗಳಿವೆ. ವಿವಿಧ ಕಾಮಗಾರಿಗಳಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಅಪಘಾತ ಪ್ರಮಾಣ ತಗ್ಗಿಸಲು ಮತ್ತು ಸಂಚಾರ ವ್ಯವಸ್ಥೆ ಸುಧಾರಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಹೊಸದಾಗಿ ಸಂಚಾರ ಠಾಣೆಗಳನ್ನು ಆರಂಭಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ ಎಂದರು.

ವಿವಿಧ ಇಲಾಖೆಗಳು ನಗರದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ಸುಗಮ ಸಂಚಾರದ ದೃಷ್ಟಿಯಿಂದ ನಗರ ಪೊಲೀಸ್‌ ಕಮಿಷನರ್‌ ಜತೆ ಚರ್ಚಿಸಿ, ಕಾಮಗಾರಿ ವಿನ್ಯಾಸಗೊಳಿಸಲು ಸೂಚಿ ಸ­ಲಾ­ಗಿದೆ. ರಸ್ತೆ ಸುರಕ್ಷತೆ, ಸಂಚಾರ ನಿಯಮ ಪಾಲನೆ ಸಂಬಂಧ ಸಾರ್ವ ಜನಿಕರು ಹಾಗೂ ವಿದ್ಯಾರ್ಥಿಗಳನ್ನು ಜಾಗೃತಗೊಳಿಸಬೇಕು ಎಂದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ನಗರದಲ್ಲಿ ಕಳೆದ ವರ್ಷ ಸುಮಾರು ಐದು ಸಾವಿರ ಅಪಘಾತ­ಗಳು ಸಂಭವಿಸಿವೆ. ಆ ಅಪಘಾತಗಳಲ್ಲಿ 729 ಮಂದಿ ಮೃತಪಟ್ಟಿದ್ದಾರೆ ಮತ್ತು 4,098 ಮಂದಿ ಗಾಯಗೊಂಡಿದ್ದಾರೆ. ಸಾರ್ವಜನಿಕರು ಸಂಚಾರ ನಿಯಮ ಪಾಲಿಸುವ ಮೂಲಕ ಅಪ­ಘಾತ­ಗಳಾ­ಗದಂತೆ ಎಚ್ಚರ ವಹಿಸಬೇಕು’ ಎಂದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು. ವಾರ್ತಾ ಸಚಿವ ಆರ್‌.ರೋಷನ್‌ ಬೇಗ್‌, ವಿಧಾನ ಪರಿಷತ್‌ ಸದಸ್ಯ ಕೆ.ಗೋವಿಂದರಾಜು, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಲಾಲ್‌ ರೋಕುಮ ಪಚಾವೊ, ಸಾರಿಗೆ ಇಲಾಖೆ ಆಯುಕ್ತ ಡಾ.ರಾಮೇಗೌಡ, ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.