ADVERTISEMENT

ಶುಲ್ಕ ಪಟ್ಟಿ ಪ್ರಕಟಿಸದ ಶಾಲೆಗಳ ವಿರುದ್ಧ ಕ್ರಮ: ತನ್ವೀರ್‌ ಸೇಠ್

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:41 IST
Last Updated 29 ಆಗಸ್ಟ್ 2016, 19:41 IST

ಬೆಂಗಳೂರು: ಖಾಸಗಿ ಶಾಲೆಗಳು ನಿಗದಿಪಡಿಸುವ ಶುಲ್ಕವನ್ನು ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ಪ್ರಕಟಿಸಬೇಕೆಂಬ ಸುಪ್ರೀಂಕೋರ್ಟ್‌ ಆದೇಶ ಉಲ್ಲಂಘಿಸುವ  ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಹೇಳಿದರು.

ಶಾಸಕರ ಭವನದಲ್ಲಿ ಸೋಮವಾರ ಖಾಸಗಿ ಅನುದಾನಿತ ಶಾಲಾ ಶಿಕ್ಷಕರ ಸಂಘ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಸರ್ಕಾರದ ನಿಯಮಗಳನ್ನು ಉಲ್ಲಂಘಿಸುವ ಶಾಲೆಗಳ ಬಾಗಿಲು ಹಾಕಲು ಹಿಂದೇಟು ಹಾಕುವುದಿಲ್ಲ ’ಎಂದು ಎಚ್ಚರಿಕೆ ನೀಡಿದರು.

ಖಾಸಗಿ  ಶಾಲೆಗಳು  ಶುಲ್ಕ ಪಟ್ಟಿಯನ್ನು ಪ್ರಕಟಿಸುತ್ತಿವೆಯೆ,  ಇಲ್ಲವೆ ಎಂಬುದನ್ನು ಪರಿಶೀಲಿಸುವಂತೆಯೂ ಸುಪ್ರೀಂಕೋರ್ಟ್‌ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ ಎಂದು ಅವರು ತಿಳಿಸಿದರು.

ಹಿಂದೆ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಇನ್ನು ಮುಂದೆ ರಿಯಾಯ್ತಿ ತೋರಿಸುವ ಪ್ರಶ್ನೆಯೇ ಇಲ್ಲ. ನಿಯಮ ಉಲ್ಲಂಘಿಸುವ ಶಾಲೆಗಳನ್ನು ಬಂದ್‌ ಮಾಡಿ, ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ವರ್ಗಾಯಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ಅಮರನಾಥ ಪಾಟೀಲ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಹನುಮಂತಯ್ಯ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.