ADVERTISEMENT

ಸಚಿವ ದೇಶಪಾಂಡೆ ವಿರುದ್ಧದ ದೂರು ವಜಾ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 19:56 IST
Last Updated 9 ಅಕ್ಟೋಬರ್ 2015, 19:56 IST

ಬೆಂಗಳೂರು: ನಕಲಿ ದಾಖಲೆಗಳ ಆಧಾರದಲ್ಲಿ ಖಾಸಗಿ ಕಂಪೆನಿಗಳಿಗೆ ಜಮೀನು ಮಂಜೂರು ಮಾಡಿದ ಆರೋಪದಡಿ ಸಚಿವ ಆರ್‌.ವಿ.ದೇಶಪಾಂಡೆ ವಿರುದ್ಧ  ದಾಖಲಿಸಲಾಗಿದ್ದ ಎಫ್‌ಐಆರ್‌ ಅನ್ನು ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ವಾಸುದೇವ ರೆಡ್ಡಿ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ರದ್ದುಕೋರಿ ದೇಶಪಾಂಡೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠವು ಶುಕ್ರವಾರ ಈ ಕ್ರಿಮಿನಲ್‌ ಅರ್ಜಿಯ ವಿಚಾರಣೆ ನಡೆಸಿತು. ‘ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ದಿಸೆಯಲ್ಲಿ ಈಗಾಗಲೇ ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು ಈ ಎಫ್‌ಐಆರ್‌ ರದ್ದುಗೊಳಿಸುತ್ತಿರುವುದಾಗಿ’ ಪೀಠವು ಹೇಳಿತು.

1999–2004ರ ಅವಧಿಯಲ್ಲಿ ದೇಶಪಾಂಡೆ ಅವರು ರಾಜ್ಯದ ಕೈಗಾರಿಕಾ ಸಚಿವರಾಗಿದ್ದಾಗ  20 ಐ.ಟಿ.ಕಂಪೆನಿಗಳಿಗೆ ದೇವರಬೀಸನಹಳ್ಳಿ, ಕರಿಯಮ್ಮನ ಹಳ್ಳಿ ಅಗ್ರಹಾರ, ಬೆಳ್ಳಂದೂರು ಹಾಗೂ ಕಾಡುಬೀಸನಹಳ್ಳಿ ವ್ಯಾಪ್ತಿಯಲ್ಲಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು 434 ಎಕರೆ ವಶಪಡಿಸಿಕೊಂಡಿತ್ತು.

‘ಈ ಜಮೀನು ನೀಡಿಕೆ ಪ್ರಕ್ರಿಯೆಯಲ್ಲಿ ದೇಶಪಾಂಡೆ ನೇರ ಪಾತ್ರ ವಹಿಸಿದ್ದಾರೆ. ಇಲ್ಲಿ ಮಂಜೂರಾದ ಜಮೀನನ್ನು ಉಪ ಗುತ್ತಿಗೆ ನೀಡಲಾಗಿದೆ ಹಾಗೂ ಇವುಗಳು ಉದ್ದೇಶಿತ ಸ್ವರೂಪದಲ್ಲಿ ಬಳಕೆಯಾಗುತ್ತಿಲ್ಲ. ಈ ಜಮೀನು ನೀಡಿಕೆ ಪ್ರಕ್ರಿಯೆಯಲ್ಲಿ ₹16 ಸಾವಿರ ಕೋಟಿ ಅವ್ಯವಹಾರ ನಡೆದಿದೆ’ ಎಂಬುದು ಅರ್ಜಿದಾರರ ಆರೋಪವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.