ADVERTISEMENT

ಸರ್ಕಾರದಿಂದಲೇ ಷೇರು ಹಣ ಪಾವತಿ

ಸಹಕಾರ ಸೌಧದ ಶಂಕುಸ್ಥಾಪನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2015, 20:22 IST
Last Updated 27 ಏಪ್ರಿಲ್ 2015, 20:22 IST
ಆಹಾ ಎಂತಹ ಕಟ್ಟಡ... ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಸೌಧ ಕಟ್ಟಡದ ನೀಲ ನಕಾಶೆಯನ್ನು ಬೆಂಗಳೂರಿನ  ಮಲ್ಲೇಶ್ವರದಲ್ಲಿ ಸೋಮವಾರ ಅನಾವರಣಗೊಳಿಸಿದರು.  ಸಚಿವರಾದ ದಿನೇಶ್‌ ಗುಂಡೂರಾವ್‌, ಎಚ್‌.ಎಸ್‌. ಮಹದೇವ ಪ್ರಸಾದ್‌, ರಾಮಲಿಂಗಾರೆಡ್ಡಿ  ಇತರರು ಇದ್ದಾರೆ   ಪ್ರಜಾವಾಣಿ ಚಿತ್ರ
ಆಹಾ ಎಂತಹ ಕಟ್ಟಡ... ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಸೌಧ ಕಟ್ಟಡದ ನೀಲ ನಕಾಶೆಯನ್ನು ಬೆಂಗಳೂರಿನ ಮಲ್ಲೇಶ್ವರದಲ್ಲಿ ಸೋಮವಾರ ಅನಾವರಣಗೊಳಿಸಿದರು. ಸಚಿವರಾದ ದಿನೇಶ್‌ ಗುಂಡೂರಾವ್‌, ಎಚ್‌.ಎಸ್‌. ಮಹದೇವ ಪ್ರಸಾದ್‌, ರಾಮಲಿಂಗಾರೆಡ್ಡಿ ಇತರರು ಇದ್ದಾರೆ ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರತಿ ಬಿಪಿಎಲ್‌ ಕುಟುಂಬಕ್ಕೆ ಸೇರಿದ ಒಬ್ಬ ವ್ಯಕ್ತಿಯ ಷೇರು ಹಣವನ್ನು ಸರ್ಕಾರವೇ ಭರಿಸಿ ಸಹಕಾರ ಸಂಘದ ಸದಸ್ಯತ್ವ ಕೊಡಿಸಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಸಹಕಾರ ಇಲಾಖೆಯಿಂದ ನಗರದ ಮಲ್ಲೇಶ್ವರದ ಎಂಟನೇ ಅಡ್ಡರಸ್ತೆಯಲ್ಲಿ ಸೋಮವಾರ ಆಯೋಜಿಸಿದ್ದ ಸಹಕಾರ ಸೌಧದ ಶಂಕುಸ್ಥಾಪನೆ ನೆರವೇರಿಸಿ  ಮಾತನಾಡಿದರು.

‘ರಾಜ್ಯದಲ್ಲಿ 1.8 ಕೋಟಿ ಜನ ಬಿಪಿಎಲ್‌ ಕುಟುಂಬಕ್ಕೆ ಸೇರಿದವರು ಇದ್ದಾರೆ. ಪ್ರತಿ ಕುಟುಂಬದ ಒಬ್ಬ ಸದಸ್ಯನ ಷೇರು ಹಣವನ್ನು ಸರ್ಕಾರವೇ ಭರಿಸಿ ಸಹಕಾರ ಸಂಘದ ಸದಸ್ಯನಾಗಿ ಮಾಡಲಿದೆ’ ಎಂದು ಹೇಳಿದರು. ‘ಸಣ್ಣ ಹಿಡುವಳಿದಾರರು, ಕೂಲಿ ಕಾರ್ಮಿಕರು ಸಹಕಾರ ಸಂಘದ ಸದಸ್ಯರಾದರೆ ಆರ್ಥಿಕ ಚಟುವಟಿಕೆಗಳು ತಾನಾಗಿಯೇ ಹೆಚ್ಚಾಗುತ್ತವೆ.

ಇದರಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಕೂಡ ಸೃಷ್ಟಿಯಾಗುತ್ತವೆ. ಎಲ್ಲರೂ ಸದಸ್ಯರಾದರೆ ಅವರಿಗೆ ‘‘ಯಶಸ್ವಿನಿ’’ ಯೋಜನೆಯ ಲಾಭ ಕೂಡ ದೊರಕುತ್ತದೆ’ ಎಂದು ತಿಳಿಸಿದರು. ‘ಸಹಕಾರ ಚಳವಳಿ ಹೆಚ್ಚಿನ ಪ್ರದೇಶಕ್ಕೆ ವಿಸ್ತರಿಸಬೇಕು. ಅವಕಾಶ ವಂಚಿತರಿಗೆ, ಧ್ವನಿ ಇಲ್ಲದವರಿಗೆ ಶಕ್ತಿ ತುಂಬುವ ಕೆಲಸ ಆಗಬೇಕು’ ಎಂದು ಹೇಳಿದರು.

‘ಸಹಕಾರ ರಂಗದಲ್ಲಿ ಕೆಲಸ ಮಾಡುವುದು ಎಂದರೆ ಅದೊಂದು ರೀತಿಯಲ್ಲಿ ಸಮಾಜ ಸೇವೆಯೇ ಸರಿ. ಹಾಗಾಗಿ ಅಲ್ಲಿ ರಾಜಕಾರಣಕ್ಕೆ ಅವಕಾಶ ಇರಬಾರದು’ ಎಂದು ಕಿವಿಮಾತು ಹೇಳಿದರು. ‘ರಾಜ್ಯದಲ್ಲಿ 13 ಸಾವಿರಕ್ಕೂ ಹೆಚ್ಚು ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಅವುಗಳು ನಿತ್ಯ 60 ಲಕ್ಷ ಲೀಟರ್‌ ಹಾಲು ಉತ್ಪಾದಿಸುತ್ತಿವೆ.

ಆದರೆ, ಅವರು ಉತ್ಪಾದಿಸುವ ಪ್ರತಿ ಲೀಟರ್‌ ಹಾಲಿಗೆ ಸರ್ಕಾರ ₹4 ಸಬ್ಸಿಡಿ ಕೊಡಲು  ಆರಂಭಿಸಿದ ನಂತರ ಪ್ರತಿದಿನ ಹಾಲಿನ ಉತ್ಪಾದನೆ 65 ಲಕ್ಷ ಲೀಟರ್‌ಗೆ ಹೆಚ್ಚಿದೆ’ ಎಂದು ಸರ್ಕಾರದ ಕ್ರಮದಿಂದ ಆದ ಪ್ರಗತಿಯ ಬಗ್ಗೆ ವಿವರಿಸಿದರು. ‘ಹಳ್ಳಿಯಲ್ಲಿ ಉತ್ಪಾದನೆಯಾಗುವ ಹಾಲು ನಗರಕ್ಕೆ ಬರುತ್ತದೆ. ನಗರದ ಸಾರಾಯಿ ಹಳ್ಳಿಗಳಿಗೆ ಹೋಗುತ್ತದೆ ಎಂದು ಕೆಲವರು ಆಡಿಕೊಳ್ಳುತ್ತಾರೆ. ಆದರೆ, ವಾಸ್ತವ ಹಾಗಲ್ಲ. ನಗರದಲ್ಲೂ ಕುಡಿಯುವವರು ಇದ್ದಾರೆ, ಹಳ್ಳಿಗಳಲ್ಲೂ ಕುಡಿಯುವವರು ಇದ್ದಾರೆ’ ಎಂದರು.

‘ಸಹಕಾರ ಚಳವಳಿ ಏಷ್ಯಾ ಖಂಡದಲ್ಲೇ ಮೊದಲು ಪ್ರಾರಂಭವಾದದ್ದು ಕರ್ನಾಟಕದಲ್ಲಿ. 1905ರಲ್ಲಿ  ಸಿದ್ದನಗೌಡ ಸಂಣರಾಮನಗೌಡ ಪಾಟೀಲ ಅವರು, ಬದುಕಿಗೆ ಇದು ಮುಖ್ಯವೆಂದು ಮುಂದಾಲೋಚಿಸಿ ಈ ಚಳವಳಿ ಆರಂಭಿಸಿದ್ದರು. ಈ ಕಾರಣಕ್ಕಾಗಿಯೇ ಈ ಸೌಧಕ್ಕೆ ಅವರ ಹೆಸರಿಡಲು ಸರ್ಕಾರ ತೀರ್ಮಾನಿಸಿದೆ’ ಎಂದು ತಿಳಿಸಿದರು.

ಸಿ.ಎಂ ಶಹಬ್ಬಾಸ್‌ಗಿರಿ: ‘ಬೆಂಗಳೂರಿನಲ್ಲಿ ಜಾಗ ಸಿಗುವುದು ಕಷ್ಟದ ಕೆಲಸ. ಮೇಲಿಂದ ದುಬಾರಿ ಬೆಲೆ ಬೇರೆ. ಅಂತಹದ್ದರಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ಮಲ್ಲೇಶ್ವರದಲ್ಲಿರುವ ಈ ಬೆಲೆಬಾಳುವ ಜಾಗವನ್ನು ಭೂ ಕಬಳಿಕೆದಾರರಿಂದ ರಕ್ಷಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ’ ಎಂದು ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.

₹8.60 ಕೋಟಿ ವೆಚ್ಚದಲ್ಲಿ ನಿರ್ಮಾಣ: ‘₹8.60 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಹಕಾರ ಸೌಧದಲ್ಲಿ, ಸಹಕಾರ ಸಂಘಗಳು ತಯಾರಿಸಿದ ಎಲ್ಲ ರೀತಿಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಕಾರ್ಯಾಗಾರ, ಸಭೆ ನಡೆಸಲು ಅವಕಾಶ ಮಾಡಿಕೊಡಲಾಗುವುದು’ ಎಂದು ಸಹಕಾರ ಸಚಿವ ಎಚ್‌.ಎಸ್‌. ಮಹದೇವ ಪ್ರಸಾದ್‌ ತಿಳಿಸಿದರು. ಸಿದ್ದನಗೌಡ ಸಂಣರಾಮನಗೌಡ ಪಾಟೀಲ ಅವರ ವಂಶಸ್ಥ ಲಿಂಗನಗೌಡ ಪಾಟೀಲ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
*
ಮುಖ್ಯಾಂಶಗಳು
*₹8.60 ಕೋಟಿ ವೆಚ್ಚದಲ್ಲಿ ಮಲ್ಲೇಶ್ವರದಲ್ಲಿ ಸಹಕಾರ ಸೌಧ ನಿರ್ಮಾಣ
* ಸೌಧಕ್ಕೆ ಸಿದ್ದನಗೌಡ ಸಂಣರಾಮನಗೌಡ ಪಾಟೀಲ ಹೆಸರಿಡಲು ತೀರ್ಮಾನ
*ಬಿಪಿಎಲ್‌ ಕುಟುಂಬದ ಒಬ್ಬ ಸದಸ್ಯನಿಗೆ ಸಹಕಾರ ಸಂಘದ ಸದಸ್ಯತ್ವಕ್ಕೆ ಕ್ರಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.