ADVERTISEMENT

ಸಾರ್ವಜನಿಕ ಸಹಭಾಗಿತ್ವಕ್ಕೆ ಜಲಮಂಡಳಿ ಚಿಂತನೆ

ನೀರಿನ ಯೋಜನೆಗಳಿಗೆ ವಾರ್ಷಿಕ ಬಜೆಟ್ ಮತ್ತು ಸಂಪನ್ಮೂ ಲ ನಿಗದಿ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST

ಬೆಂಗಳೂರು: ನೀರಿನ ಯೋಜನೆಗಳಿಗೆ  ವಾರ್ಷಿಕ ಬಜೆಟ್‌ ಸಿದ್ಧಪಡಿಸಲು ಹಾಗೂ  ಸಂಪನ್ಮೂಲ ನಿಗದಿಪಡಿಸುವ ಎರಡು ಪ್ರಕ್ರಿಯೆಗಳಲ್ಲಿ ಸಾರ್ವಜನಿಕರನ್ನು ತೊಡಗಿಸಲು ಜಲಮಂಡಳಿ ಚಿಂತನೆ ನಡೆಸಿದೆ.

ಜೂನ್‌ 24ರಂದು ಜನಾಗ್ರಹ ಸಂಸ್ಥೆಯ ಶ್ರೀಕಾಂತ್ ವಿಶ್ವನಾಥ್‌ ಅವರು ಬಿಡಿಎ, ಬಿಎಂಟಿಸಿ ಹಾಗೂ  ಜಲಮಂಡಳಿಗಳ ಬಜೆಟ್ ವಿಶ್ಲೇಷಿಸಿ ಪತ್ರಿಕಾಗೋಷ್ಠಿ ನಡೆಸಿದ್ದರು.

ಈ ಸಂದರ್ಭದಲ್ಲಿ ಅವರು ಬಜೆಟ್ ಸಾಧನೆಯಲ್ಲಿ ಜಲಮಂಡಳಿಯ ಸಾಧನೆ ತುಂಬಾ ಕಳಪೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಜಲಮಂಡಳಿ ಸ್ಪಷ್ಟನೆ ನೀಡಿದೆ.

‘ಮಂಡಳಿಯು ನೀರು ನಿರ್ವಹಣಾ ಯೋಜನೆಗಳಿಗೆ ಬೃಹತ್ ಪ್ರಮಾಣದ ಬಂಡವಾಳ ಹೂಡಬೇಕಾಗಿದ್ದು,  ಅಂತಹ ಬೃಹತ್ ಯೋಜನೆಗಳು ಕಾರ್ಯಗತಗೊಳ್ಳಲು ಹಲವು ವರ್ಷಗಳೇ ಬೇಕಾಗುತ್ತದೆ. ಯೋಜನೆ ಅನುಷ್ಠಾನಗೊಂಡ ನಂತರವಷ್ಟೇ ವೆಚ್ಚವನ್ನು  ಭರಿಸಬೇಕಾಗುತ್ತದೆ. 

ಮಂಡಳಿ ತನ್ನ  ಸೇವೆಯನ್ನು ಜನಸಾಮಾನ್ಯರಿಗೆ ನಿಲುಕುವ ದರದಲ್ಲಿ  ಮಾಡಬೇಕಾಗಿರುವುದರಿಂದ  ಹೂಡಿದ ಬಂಡವಾಳವನ್ನು ಗಳಿಸಲು ಹೆಚ್ಚಿನ ಸಮಯಬೇಕಾಗುತ್ತದೆ. ಇಂತಹ ಸನ್ನಿವೇಶ ಉಳಿದ ಸಂಸ್ಥೆಗಳಿಗೆ ಇರುವುದಿಲ್ಲ’ ಎಂದು ಜಲಮಂಡಳಿ ಸಮಜಾಯಿಷಿ ನೀಡಿದೆ.

‘ಚೆನ್ನೈ ಮತ್ತು ದೆಹಲಿಗಳ ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ 50 ರಷ್ಟಿದೆ. ಬೆಂಗಳೂರಿನಲ್ಲಿ ಈ ಪ್ರಮಾಣ ಶೇ 40 ಆಗಿದೆ. ಜಲಮಂಡಳಿಯು ಅತಿ ಹೆಚ್ಚು ಅಂದರೆ ಶೇ 78 ರಷ್ಟು ವೆಚ್ಚ ನಿರ್ವಹಣಾ ಅನುಪಾತವನ್ನು ಹೊಂದಿದೆ.

ಅಂದರೆ,  ಮಂಡಳಿಯಲ್ಲಿ ಉತ್ಪತ್ತಿಯಾಗುವ ಆದಾಯದಿಂದ ಶೇ 78 ರಷ್ಟು ನಿರ್ವಹಣಾ ವೆಚ್ಚವನ್ನು ಭರಿಸಲಾಗುತ್ತದೆ. ಆದರೆ, ಇದು ಚೆನ್ನೈಯಲ್ಲಿ ಶೇ 72 ರಷ್ಟು, ದೆಹಲಿಯಲ್ಲಿ ಶೇ 30 ರಷ್ಟು ಇದೆ. ಜಲಮಂಡಳಿಯ ವಿದ್ಯುತ್ ವೆಚ್ಚ ಚೆನ್ನೈ ಮತ್ತು ದೆಹಲಿ ಜಲ ಮಂಡಳಿಯ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚಾಗಿದ್ದು  ಇದರಿಂದಾಗಿ  ಜಲಮಂಡಳಿಯ ನಿರ್ವಹಣಾ ವೆಚ್ಚ  ಹೆಚ್ಚಾಗಿದೆ’ ಎಂದು ಜಲಮಂಡಳಿ ತನ್ನ ಸಮಜಾಯಿಷಿಯಲ್ಲಿ ತಿಳಿಸಿದೆ.

‘2014-15ರಲ್ಲಿ  ಜಲಮಂಡಳಿಯ ಆದಾಯ ಮೂಲ ₹878 ಕೋಟಿ ಮೀರಿ ₹340 ಕೋಟಿ  ನಷ್ಟ ಅನುಭವಿಸಿರುವುದಾಗಿ ತಿಳಿಸಲಾಗಿದೆ. ಆದರೆ, ಆದಾಯ ಮೂಲ  ₹114.97 ಕೋಟಿ. ವೆಚ್ಚ ₹1,489.49 ಆಗಿದ್ದು ಜನಾಗ್ರಹ ತಿಳಿಸಿದಂತೆ ₹1,218  ಕೋಟಿ ಅಲ್ಲ’ ಎಂದು ಸ್ಪಷ್ಟಪಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.