ADVERTISEMENT

ಹಳೆಯ ಮರಗಳ ತೆರವಿಗೆ ಮೇಯರ್‌ ಸೂಚನೆ

ಮಳೆಗಾಲದ ಅನಾಹುತ ತಪ್ಪಿಸಲು ಬಿಬಿಎಂಪಿಯಿಂದ ಪೂರ್ವಭಾವಿ ಸಿದ್ಧತಾ ಸಭೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 19:30 IST
Last Updated 28 ಜೂನ್ 2016, 19:30 IST
ಹಳೆಯ ಮರಗಳ ತೆರವಿಗೆ ಮೇಯರ್‌ ಸೂಚನೆ
ಹಳೆಯ ಮರಗಳ ತೆರವಿಗೆ ಮೇಯರ್‌ ಸೂಚನೆ   

ಬೆಂಗಳೂರು: ‘ಹಳೆಯ ಹಾಗೂ ರೋಗಿಷ್ಟ ಮರಗಳನ್ನು ತೆರವು ಗೊಳಿಸಬೇಕು. ರಸ್ತೆಗಳು, ಅಂಡರ್ ಪಾಸ್‌ಗಳು, ಬೃಹತ್ ನೀರುಗಾಲುವೆ, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು’ ಎಂದು ಮೇಯರ್‌ ಬಿ.ಎನ್‌. ಮಂಜುನಾಥ್‌ ರೆಡ್ಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲದಲ್ಲಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಬಿಬಿಎಂಪಿ ವತಿಯಿಂದ ಕೈಗೊಳ್ಳಲಾದ ಪೂರ್ವ ಭಾವಿ ಸಿದ್ಧತೆಗಳ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಮಳೆಗಾಲದಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೂ, ಅರಣ್ಯ ಅಧಿಕಾರಿಗಳು, ಎಂಜಿನಿಯರ್‌ ಗಳು ಎಚ್ಚೆತ್ತುಕೊಂಡಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಅರಣ್ಯ ಇಲಾಖೆ ಸಿಬ್ಬಂದಿ, ಮರ ಬಿದ್ದಾಗ ಮಾತ್ರ ಅದನ್ನು ತೆರವುಗೊಳಿಸಿ ಸುಮ್ಮನೆ ಇದ್ದರೆ ಸಾಲದು. ಹಳೆಯ ಹಾಗೂ ರೋಗಿಷ್ಟ ಮರಗಳನ್ನು ಪತ್ತೆ ಹಚ್ಚಿ ತೆರವು ಗೊಳಿಸಬೇಕು. ಇದಕ್ಕೆ ಬೇಕಾದ ಸಲಕರಣೆ ಹಾಗೂ ಸಿಬ್ಬಂದಿಯನ್ನು ಸಜ್ಜಾಗಿ ಇರಿಸಬೇಕು’ ಎಂದು ಸೂಚಿಸಿದರು.

‘ಕಾಯಂ ಹಾಗೂ ತಾತ್ಕಾಲಿಕ ನಿಯಂತ್ರಣ ಕೊಠಡಿಗಳಲ್ಲಿ 61, ಅರಣ್ಯ ತಂಡಗಳಲ್ಲಿ 21 ಜನ ಸೇರಿ ಒಟ್ಟು 900ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವರು ಕಾರ್ಯ ವೈಖರಿ ಬಗ್ಗೆ ನನಗೆ ಹಾಗೂ ಆಯುಕ್ತರಿಗೆ ವರದಿ ನೀಡಬೇಕು. ನಿಯಂತ್ರಣ ಕೊಠಡಿಗೂ ಮಾಹಿತಿಯನ್ನು ರವಾನಿಸ ಬೇಕು’ ಎಂದು ಆದೇಶ ನೀಡಿದರು.

‘ಮಳೆಗಾಲದಲ್ಲಿ ತೊಂದರೆ ಉಂಟಾಗುವ  54 ಸ್ಥಳಗಳ ಬಗ್ಗೆ ಪೊಲೀಸ್‌ ಇಲಾಖೆ ವರದಿ ನೀಡಿದೆ. ಇಲ್ಲಿ ಯಾವುದೇ ಸಮಸ್ಯೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಎಚ್.ಎಸ್.ಆರ್. ಬಡಾವಣೆ, ಅಗರ ಕೆರೆ ಸುತ್ತಲಿನ ರಸ್ತೆಗಳು, ಸಿಲ್ಕ್‌ಬೋರ್ಡ್ ಜಂಕ್ಷನ್‌ಗಳಲ್ಲಿ ಮಳೆ ಬಂದಾಗ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ,  ‘ಅಗರ ಬಡಾವಣೆಯ ರಸ್ತೆ ಬದಿಯಲ್ಲಿ ಮಣ್ಣು ಸುರಿಯಲಾಗಿದೆ. ಇದರಿಂದ ನೀರು ಸರಿಯಾಗಿ ಹರಿಯು ತ್ತಿಲ್ಲ. ಮಣ್ಣನ್ನು ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಆಡಳಿತ ಪಕ್ಷದ ನಾಯಕ  ಆರ್.ಎಸ್.ಸತ್ಯನಾರಾಯಣ ಅವರು, ‘ಮಲ್ಲೇಶ್ವರ ಮುಖ್ಯರಸ್ತೆಯಲ್ಲಿ ಹಲವು ಕಡೆ ನೀರು ನಿಲ್ಲುತ್ತದೆ. ಸಮಸ್ಯೆ ಬಗೆ ಹರಿಸಲು ಎಂಜಿನಿಯರ್‌ಗಳು ಮುಂದಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ರಸ್ತೆಗಳ ನಿರ್ವಹಣೆಗಾಗಿ ಸಾಕಷ್ಟು ಹಣ ನೀಡಲಾಗಿದೆ. ಆದರೆ, ರಸ್ತೆ ಗುಂಡಿಗಳನ್ನು ಮುಚ್ಚಲಿಕ್ಕೆ ಎಂಜಿನಿಯರ್‌ಗಳು ನೆಪ ಹೇಳುತ್ತಿದ್ದಾರೆ. ಇದಕ್ಕೆಲ್ಲಾ ಅವಕಾಶ ಕೊಡುವುದಿಲ್ಲ. ಕೂಡಲೇ ರಸ್ತೆ ಗುಂಡಿ ಮುಚ್ಚಲಿಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಖ್ಯ ಎಂಜಿನಿಯರ್‌ ಮತ್ತು ಕಾರ್ಯಪಾಲಕ ಎಂಜಿನಿಯರ್‌ ಮೇಲೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಗುತ್ತಿಗೆದಾರರು ರಸ್ತೆ ಗುಂಡಿಗಳನ್ನು ಸರಿಯಾಗಿ ಮುಚ್ಚಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಪ್ರತಿ ಉಪವಿಭಾಗದಲ್ಲಿ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರ  ವಿವರ, ನಿರ್ವಹಣೆ ಅವಧಿ ಸೇರಿದಂತೆ ಸಮಗ್ರ ಮಾಹಿತಿಯನ್ನು ಮೇಯರ್‌ ಹಾಗೂ ನನಗೆ ನೀಡಬೇಕು’ ಎಂದು ಸೂಚಿಸಿದರು. ಉಪ ಮೇಯರ್‌ ಎಸ್.ಪಿ. ಹೇಮಲತಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.