ADVERTISEMENT

ಹೈಕೋರ್ಟ್‌ಗೆ ಸರ್ಕಾರದ ಸ್ಪಷ್ಟನೆ

ಬೆಂಗಳೂರು ಕ್ಲಬ್‌ ವಿರುದ್ಧದ ಕಾನೂನು ಕ್ರಮ ಸದ್ಯಕ್ಕಿಲ್ಲ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 20:06 IST
Last Updated 28 ಜುಲೈ 2015, 20:06 IST

ಬೆಂಗಳೂರು: ‘ಬೆಂಗಳೂರು ಕ್ಲಬ್‌ ಅಧೀನದಲ್ಲಿರುವ ಪ್ರದೇಶವನ್ನು ಮುಂದಿನ ವಿಚಾರಣೆವರೆಗೂ ವಶಕ್ಕೆ ಪಡೆಯುವ ಪ್ರಯತ್ನ ಮಾಡುವುದಿಲ್ಲ ಹಾಗೂ ಈ ದಿಸೆಯಲ್ಲಿ ಯಾವುದೇ ಕಾನೂನು ಕ್ರಮಕ್ಕೂ ಮುಂದಾಗು ವುದಿಲ್ಲ’ ಎಂದು  ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಬೆಂಗಳೂರು ಕ್ಲಬ್ ಪ್ರದೇಶವನ್ನು ವಶಕ್ಕೆ ಪಡೆಯಲು ಮುಂದಾಗಿರುವ ಸರ್ಕಾರದ ಕ್ರಮ ಪ್ರಶ್ನಿಸಿ  ಸಲ್ಲಿಸಿರುವ  ರಿಟ್‌ ಅರ್ಜಿಗೆ ಸಂಬಂಧಿಸಿದಂತೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌. ಪೊನ್ನಣ್ಣ ಅವರು ಮಂಗಳವಾರ ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಅವರಿದ್ದ ಏಕಸದಸ್ಯ ಪೀಠಕ್ಕೆ ಈ ವಿವರಣೆ ನೀಡಿದರು.

ಈ ವೇಳೆ ನ್ಯಾಯಮೂರ್ತಿಗಳು, ‘ ನೋಂದಾಣಾಧಿಕಾರಿ ಕಚೇರಿಯಲ್ಲಿ ಸಂಘವನ್ನು ನೋಂದಣಿ ಮಾಡಿಸುವ ಬಗ್ಗೆ ಚಿಂತನೆ ನಡೆಸಿ’ ಎಂದು ಕ್ಲಬ್‌ ಪರ ವಕೀಲರಿಗೆ ಸಲಹೆ ನೀಡಿದರು. ಕರ್ನಾಟಕ ಮದ್ಯ ಸರಬರಾಜು ಕಾಯ್ದೆಯ ನಿಯಮ ಸಿ.ಎಲ್‌–8ರ ಅಡಿಯಲ್ಲಿ  ಅರ್ಜಿದಾರರು, ತಾತ್ಕಾಲಿಕ ಮದ್ಯ ಸರಬರಾಜಿಗೆ ಮನವಿ ಸಲ್ಲಿಸಿದರೆ ಅಂತಹ ಅರ್ಜಿಯನ್ನು ಮೂರು ದಿನಗಳ ಒಳಗೆ ಪರಿಗಣಿಸುವಂತೆ ಪೀಠವು ಸರ್ಕಾರಕ್ಕೆ ಸೂಚಿಸಿತು.

ಮತ್ತೊಂದು ಅರ್ಜಿ: ‘ಕ್ಲಬ್‌ ನಮ್ಮದೆಂದು ಹೇಳಿಕೊಂಡು ಬಂದಿರುವ ಕ್ಲಬ್‌ನ ಕಾರ್ಯದರ್ಶಿ ಮತ್ತು ಅಧ್ಯಕ್ಷರಿಗೆ ಈ ಸಂಬಂಧ ಯಾವುದೇ ಕಾನೂನು ಬಾಧ್ಯ ಹಕ್ಕುಗಳೇ ಇಲ್ಲ’ ಎಂದು ಪೊನ್ನಣ್ಣ ಅವರು ಈ ಸಂದರ್ಭದಲ್ಲಿ ಪುನರು ಚ್ಚರಿಸಿದರು.
ನ್ಯಾಯಮೂರ್ತಿ ಆರ್‌.ಎಸ್‌. ಚೌಹಾಣ್‌ ಅವರ ಏಕಸದಸ್ಯ ಪೀಠದ ಮುಂದೆ ಇರುವ ಒಡೆತನಕ್ಕೆ ಸಂಬಂಧಿ ಸಿದ ಮತ್ತೊಂದು ಅರ್ಜಿ ವಿಚಾರಣೆಯಲ್ಲಿ ಪೊನ್ನಣ್ಣ ಅರ್ಜಿದಾರರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಾಸ್ತವದಲ್ಲಿ 13 ಎಕರೆ ವಿಸ್ತಾರದ ಈ ಪ್ರದೇಶದ ಒಡೆತನದ ಹಕ್ಕು ಬೆಂಗಳೂರು ಕ್ಲಬ್‌ ಅಧೀನದಲ್ಲಿಯೇ ಇಲ್ಲ. ಮೊದಲಿಗೆ ಅರ್ಜಿ ದಾರರು ಈ ಕುರಿತ ತಮ್ಮ ಕಾನೂನು ಬದ್ಧ ಹಕ್ಕುಬಾಧ್ಯತೆಗಳನ್ನು ಮಂಡಿಸಲಿ. ನಂತರ ಮುಂದಿನ ವಿಚಾ ರಣೆ ನಡೆಯಲಿ ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಿಟ್‌ ಅರ್ಜಿ ತಿದ್ದುಪಡಿ ಮಾಡಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು  ಮತ್ತೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.