ADVERTISEMENT

‘ಕಡತ ತಡೆಹಿಡಿಯುವ ಬೆಸ್ಕಾಂ ಎಂಜಿನಿಯರ್‌’

​ಪ್ರಜಾವಾಣಿ ವಾರ್ತೆ
Published 24 ಜುಲೈ 2016, 20:00 IST
Last Updated 24 ಜುಲೈ 2016, 20:00 IST

ಬೆಂಗಳೂರು: ‘ಬೆಸ್ಕಾಂ ಯಲಹಂಕ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಜಿ.ಮನಮೋಹನ್‌ ಪ್ರಿಯಾಂಕ ಅವರು ಕಡತಗಳನ್ನು ವಿನಾಕಾರಣ ತಡೆಹಿಡಿದು ಗುತ್ತಿಗೆದಾರರಿಗೆ ತೊಂದರೆ ನೀಡುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಸದಸ್ಯರು ಆರೋಪಿಸಿದರು.

ಸಂಘದ ಗೌರವಾಧ್ಯಕ್ಷ ಎಂ.ವೆಂಕ ಟೇಶ್‌ ಮಾತನಾಡಿ, ‘ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಹಾಗೂ ಹೆಸರು ಬದಲಾವಣೆಗೆ ಸಂಬಂಧಪಟ್ಟ ಕಡತಗಳನ್ನು ತಿಂಗಳೊಳಗೆ ವಿಲೇವಾರಿ ಮಾಡಬೇಕು.

ಆದರೆ, ಅವುಗಳನ್ನು ತಡೆಹಿಡಿದು, ಅದಕ್ಕೆ ಹಿಂಬರಹ ಬರೆದು ಕಳುಹಿಸುತ್ತಾರೆ.  ಈ ಬಗ್ಗೆ ವಿಚಾರಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಇದರಿಂದ ಗ್ರಾಹಕರಿಗೆ ಸಮರ್ಪಕ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

ಸಂಘದ ಸದಸ್ಯ ವಿರೂಪಾಕ್ಷ ಮಾತನಾಡಿ, ‘ವಿದ್ಯುತ್‌ ಸಂಪರ್ಕದ ಅನುಮತಿಗಾಗಿ ಅರ್ಜಿ ಸಲ್ಲಿಸಿ ಸಾವಿರಾರು ರೂಪಾಯಿ ಶುಲ್ಕ ಪಾವತಿಸುತ್ತೇವೆ. ಬಳಿಕ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹಿಂಬರಹ ಬರೆಯುತ್ತಾರೆ. ಇದರಿಂದ ಪಾವತಿಸಿದ ಹಣವನ್ನು ವಾಪಸ್‌ ಪಡೆಯಲು ಅನೇಕ ತೊಡಕುಗಳು ಎದುರಾಗುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗುತ್ತಿದೆ’ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮನಮೋಹನ್‌, ‘ಗುತ್ತಿಗೆದಾರರು ವಿದ್ಯುತ್‌ ಸಂಪರ್ಕ ಕಲ್ಪಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿದಾಗ ಕೆಲವರು ನಿಯಮ ಉಲ್ಲಂಘನೆ ಮಾಡಿ ಅನಧಿಕೃತವಾಗಿ ಸಂಪರ್ಕ ಪಡೆಯಲು ಮುಂದಾಗಿರುವುದು ಗಮನಕ್ಕೆ ಬಂತು.  ಅಂತಹ ಕಡತಗಳನ್ನು ತಡೆಹಿಡಿದು, ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹಿಂಬರಹ ಬರೆದಿದ್ದೇನೆ’ ಎಂದರು.

‘ಪಾದಚಾರಿ ಮಾರ್ಗದಲ್ಲಿ ಟ್ರಾನ್‌್ಸಫಾರ್ಮರ್‌ ನಿರ್ಮಿಸಲು ಅನುಮತಿ ನೀಡುವಂತೆ ಒತ್ತಾಯಿಸುತ್ತಾರೆ.  ಹಸಿರು ವಲಯದಲ್ಲಿ ಭೂಪರಿವರ್ತನೆ ಮಾಡದೆ ಅನಧಿಕೃತವಾಗಿ ನಿರ್ಮಿಸಿರುವ ಬಡಾವಣೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಅನುಮತಿ ನೀಡುವಂತೆ ಒತ್ತಡ ತರುತ್ತಾರೆ.

ಇಂತಹ ಸಂಪರ್ಕಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ್ದೇನೆ. ಕೆಲ ಗುತ್ತಿಗೆದಾರರು ಬೆದರಿಕೆ ಕರೆ ಮಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ಜತೆಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.