ADVERTISEMENT

‘ಕ್ರೈಸ್ತರ ಮೇಲಿನ ದೌರ್ಜನ್ಯ ಕೊನೆಯಾಗಲಿ’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2014, 19:47 IST
Last Updated 14 ಸೆಪ್ಟೆಂಬರ್ 2014, 19:47 IST
‘ಕ್ರೈಸ್ತರ ಮೇಲಿನ ದೌರ್ಜನ್ಯ ಕೊನೆಯಾಗಲಿ’
‘ಕ್ರೈಸ್ತರ ಮೇಲಿನ ದೌರ್ಜನ್ಯ ಕೊನೆಯಾಗಲಿ’   

ಬೆಂಗಳೂರು: ಇರಾಕ್‌ನಲ್ಲಿ ಐಎಸ್‌ಐಎಸ್‌ ಉಗ್ರರಿಂದ ಹತ್ಯೆಯಾಗುತ್ತಿರುವ ಕ್ರೈಸ್ತರು ಮತ್ತು  ಜಮ್ಮು– ಕಾಶ್ಮೀರ ಪ್ರವಾಹದಿಂದ ನಿರಾಶ್ರಿತರಾಗಿರುವ ಜನರ ರಕ್ಷಣೆಗಾಗಿ ಬೆಂಗಳೂರು ಆರ್ಚ್‌ ಡಯಾಸಿಸ್‌ ವತಿಯಿಂದ ನಗರದ ಸೇಂಟ್‌ ಜೋಸೆಫ್‌ ಇಂಡಿಯನ್‌ ಪ್ರೌಢ­ಶಾಲೆ ಮೈದಾನದಲ್ಲಿ ಭಾನುವಾರ ಸಾಮೂ­ಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ನಗರದ ವಿವಿಧ ಚರ್ಚ್‌ಗಳ ಫಾದರ್‌ಗಳು, ಕ್ರೈಸ್ತ ಸನ್ಯಾಸಿನಿಯರು ಮತ್ತು ವಿದ್ಯಾರ್ಥಿಗಳು ಬ್ರಿಗೇಡ್ ರಸ್ತೆಯ ಸೇಂಟ್‌ ಪ್ಯಾಟ್ರಿಕ್‌ ಚರ್ಚ್‌ನಿಂದ ಸೇಂಟ್‌ ಜೋಸೆಫ್‌ ಇಂಡಿಯನ್‌ ಪ್ರೌಢಶಾಲೆ ಮೈದಾನದ­ವರೆಗೆ ರ್‌್ಯಾಲಿ ನಡೆಸಿದರು.

ಈ ವೇಳೆ ಮಾತನಾಡಿದ ಆರ್ಚ್‌ ಬಿಷಪ್‌ ಬರ್ನಾಡ್‌ ಮೊರಾಸ್‌, ‘ಇರಾಕ್‌, ಇರಾನ್‌, ನೈಜೀರಿಯಾ­ಗಳಲ್ಲಿ 1.75 ಲಕ್ಷಕ್ಕೂ ಹೆಚ್ಚು ಅಮಾ­ಯಕ ಕ್ರಿಶ್ಚಿಯನ್ನರನ್ನು ಹತ್ಯೆ ಮಾಡ­ಲಾಗಿದೆ. ಕ್ರೈಸ್ತರ ಮೇಲಿನ ದೌರ್ಜನ್ಯ, ಹತ್ಯೆ ಕೊನೆಯಾಗಬೇಕು’ ಎಂದರು.

ಕ್ರಿಶ್ಚಿಯನ್‌ ಮಾತ್ರವಲ್ಲದೆ ಇತರೆ ಧರ್ಮಗಳ ಜನರ ಮೇಲೂ ಹಲ್ಲೆ ನಡೆಯುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ. ಮೌನವಾಗಿರುವುದು ಸಹ ಪಾಪ. ಆದ್ದರಿಂದ ಎಲ್ಲ ಧರ್ಮಗಳು ಒಂದಾಗಿ ಹತ್ಯೆಯನ್ನು ಪ್ರತಿಭಟಿಸಬೇಕು ಎಂದರು.

ಕೊಳದ ಮಠದ ಶಾಂತವೀರ ಸ್ವಾಮೀಜಿ, ‘ಇರಾಕ್‌ ಮತ್ತು ಇರಾನ್‌ನಲ್ಲಿ ಕ್ರಿಶ್ಚಿಯನ್ನರ ಮೇಲೆ ಹಲ್ಲೆ ಮಾಡಿರುವವರು ರಾಕ್ಷಸ  ಪ್ರವೃತ್ತಿ­ಯವರು. ಅಲ್ಲಿ ಮುಸ್ಲಿಂ ಧರ್ಮದ­ವರು ಏನಾದರೂ ಹಲ್ಲೆ ನಡೆಸಿದ್ದರೆ ಅವರು ಅಲ್ಲಾಗೆ ದ್ರೋಹ ಬಗೆದಂತೆ. ಯಾವ ಧರ್ಮ ಸಹ ಹಿಂಸೆ ಬೋಧಿಸುವುದಿಲ್ಲ’  ಎಂದು ಹೇಳಿದರು.
ಶಾಸಕ ಆರ್‌.ಅಶೋಕ ಮಾತನಾಡಿ, ‘ವಿಶ್ವದ ಎಲ್ಲ ರಾಷ್ಟ್ರಗಳು ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತಿದ್ದರೆ, ಇರಾನ್‌, ಸಿರಿಯಾ, ಪಾಕಿಸ್ತಾನದಂತಹ ರಾಷ್ಟ್ರ­ಗಳು ಭಯೋತ್ಪಾದಕರನ್ನು ಬೆಳೆಸುತ್ತಿವೆ. ಕ್ರಿಶ್ಚಿಯನ್ನರ ಮೇಲಿನ ಹಲ್ಲೆ ಖಂಡನೀಯ’ ಎಂದರು.

ಜಮ್ಮು–ಕಾಶ್ಮೀರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರನ್ನು ರಕ್ಷಿಸಲು ತೆರಳುತ್ತಿರುವ ಸೈನಿಕರ ಮೇಲೂ ಭಯೋತ್ಪಾದಕರು ದಾಳಿ ನಡೆಸುತ್ತಿದ್ದಾರೆ. ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲರೂ ಧ್ವನಿ ಎತ್ತಬೇಕು ಎಂದು ಹೇಳಿದರು. ಶಾಸಕ ಎನ್‌.ಎ.ಹ್ಯಾರಿಸ್‌, ಸಾಮಾ­ಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.