ADVERTISEMENT

‘ರಾಜಕೀಯ ಪಕ್ಷಗಳಿಂದ ಮೀಸಲಾತಿ ದುರುಪಯೋಗ’

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2014, 19:53 IST
Last Updated 28 ಆಗಸ್ಟ್ 2014, 19:53 IST

ಬೆಂಗಳೂರು: ‘ಜಾತಿಗಳ ಕುರಿತ ನಿಖರ ಅಂಕಿಅಂಶಗಳು ಇಲ್ಲದ ಕಾರಣ, ರಾಜಕೀಯ ಪಕ್ಷಗಳು ಮೀಸಲಾತಿಯನ್ನು ದುರು­ಪ­ಯೋಗ ಪಡಿಸಿಕೊಳ್ಳುತ್ತಾ  ಬಂದಿವೆ’ ಎಂದು ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿ’ಯ ಸಾಮಾ­ಜಿಕ ಪ್ರತ್ಯೇಕತೆ ಹಾಗೂ ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್. ಜಾಫೆಟ್ ಅಭಿಪ್ರಾಯ­ಪಟ್ಟರು.

ಡಿ.ದೇವರಾಜ ಅರಸು ಅವರ ಜಯಂತಿ ಆಚರಣೆ ಅಂಗ­ವಾಗಿ ನಗರದಲ್ಲಿ ಬುಧವಾರ ಸಮ ಸಮಾಜ ವೇದಿಕೆ ಆಯೋಜಿ­­ಸಿದ್ದ ವಿಚಾರಗೋಷ್ಠಿಯಲ್ಲಿ  ಮಾತನಾಡಿದರು.

‘ದೇಶದಲ್ಲಿ 1930ರಿಂದ ಜಾತಿಗಣತಿ ನಡೆದಿಲ್ಲ. ಅದರ ನಡುವೆಯೂ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸರ್ಕಾರಗಳು ರಾಷ್ಟ್ರೀಯ ಮಾದರಿ ಸಮೀಕ್ಷೆ ದತ್ತಾಂಶದ ಆಧಾರದ ಮೇಲೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತ ಬಂದಿವೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ನಿಖರ ದತ್ತಾಂಶಗಳು ಇಲ್ಲ. ಇದರಿಂದ ಶೋಷಿತರು ಇಂದಿಗೂ ಬಲಿಯಾಗುತ್ತಿದ್ದಾರೆ’ ಎಂದು ಹೇಳಿದರು.

‘ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳು ಸಾಮಾ­ಜಿಕ ನ್ಯಾಯಕ್ಕಾಗಿ ಒಂದಾಗಲು ಮತ್ತು ವ್ಯಕ್ತಿ, ಸಮು­ದಾಯ ಕೇಂದ್ರಿತ ನೀತಿಗಳನ್ನು ನಿರೂಪಿಸಲು ಜಾತಿ­ಗಣತಿ ನಿರ್ದಿಷ್ಟ ದತ್ತಾಂಶದ ಅಗತ್ಯವಿದೆ. ದುರದೃಷ್ಟವಶಾತ್, ನಮ್ಮಲ್ಲಿ ಜಾತಿಗಣತಿ ನಡೆಸದೆ ಅವಕಾಶ ವಂಚಿತರ ಸ್ಥಿತಿಗತಿ­ಗಳನ್ನು ಅರಿಯಲು ಮೇಲಿಂದ ಮೇಲೆ ಸಮಿತಿ ಮತ್ತು ಆಯೋಗ­ಗಳನ್ನು ರಚಿಸಿಕೊಂಡು ಬರಲಾಗುತ್ತಿದೆ. ಅವುಗಳ ವರದಿ­ಗಳಲ್ಲಿ ಕೂಡ ಸಾಕಷ್ಟು ಲೋಪದೋಷಗಳಿವೆ’ ಎಂದರು.

‘ದತ್ತಾಂಶದ ಕೊರತೆಯಿಂದಾಗಿ  ಇಂದಿಗೂ ಶೋಷಿತ ಸಮು­ದಾಯಗಳ ಶೋಷಣೆ ಮುಂದುವರಿದಿದೆ. ಇಂದು, ಪಂಗಡಗಳಲ್ಲಿ ಉಪ ಪಂಗಡಗಳು ಹುಟ್ಟಿಕೊಂಡು ವಿಶೇಷ ಮೀಸಲಾತಿ ಬೇಡುತ್ತಿವೆ. ಸರ್ಕಾರ ನಿಜ ಫಲಾನುಭವಿಗಳನ್ನು ಗುರುತಿಸಲು ಮತ್ತು ಯೋಗ್ಯ ನೀತಿ ನಿರೂಪಿಸಲು  ಎಲ್ಲ ಜಾತಿಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಆಧಾರಿತ ಅಂಕಿಅಂಶಗಳು ಅನಿವಾರ್ಯ’ ಎಂದರು.

‘ಈವರೆಗೆ ಸರ್ಕಾರ ಕೈಗೊಂಡಿರುವ ಸಾಮಾಜಿಕ ಕಾರ್ಯ­ಕ್ರಮ­ಗಳಿಗೆ ನ್ಯಾಯಾಂಗದ ಮಾನ್ಯತೆ ದೊರೆಯಬೇಕಾದರೆ ಜಾತಿಗಣತಿ ಬಹಳ ಮುಖ್ಯ. ಇದರಿಂದ ಜಾತಿಗಳ ನಡುವಿನ ಜಾತಿ ಪ್ರಜ್ಞೆ ಹೆಚ್ಚಾಗುತ್ತದೆ ಎನ್ನುವ ವಾದ ತಪ್ಪು. ಬದಲು, ನಿಜವಾದ ಶೋಷಿತರನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದರೆ ಸಾಮಾಜಿಕ ಸಾಮರಸ್ಯ ಮೂಡುತ್ತದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ಮುಖ್ಯ­ಮಂತ್ರಿ-ಯವರ  ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್‌­ಮಟ್ಟು  ಮಾತನಾಡಿ­ದರು. ಇತ್ತೀಚಿಗೆ ನಿಧನರಾದ ಹಿರಿಯ ಸಾಹಿತಿ ಯು.ಆರ್.­ಅನಂತ­ಮೂರ್ತಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.