ADVERTISEMENT

₹ 83 ಕೋಟಿ ತೆರಿಗೆ ಪಾವತಿಗೆ ಆದೇಶ

ಮಾನ್ಯತಾ ಟೆಕ್‌ಪಾರ್ಕ್‌ ವಿರುದ್ಧದ ಪ್ರಕರಣ: ಬಿಬಿಎಂಪಿ ವಾದಕ್ಕೆ ಮನ್ನಣೆ

​ಪ್ರಜಾವಾಣಿ ವಾರ್ತೆ
Published 26 ಮೇ 2016, 19:34 IST
Last Updated 26 ಮೇ 2016, 19:34 IST
ಮಂಜುನಾಥ್‌ ರೆಡ್ಡಿ
ಮಂಜುನಾಥ್‌ ರೆಡ್ಡಿ   

ಬೆಂಗಳೂರು: ಆಸ್ತಿ ತೆರಿಗೆ ಪಾವತಿಯಲ್ಲಿ 2008–09 ರಿಂದ ಈವರೆಗೆ ಬಾಕಿ ಉಳಿಸಿಕೊಂಡ ₹ 83.45 ಕೋಟಿ ವ್ಯತ್ಯಾಸದ ಮೊತ್ತವನ್ನು ಪಾವತಿಸುವಂತೆ ಬಿಬಿಎಂಪಿ ನೀಡಿದ್ದ ನೋಟಿಸ್‌ ವಿರುದ್ಧ ಮಾನ್ಯತಾ ಟೆಕ್‌ಪಾರ್ಕ್‌ ಮಾಲೀಕರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ.

ಹೈಕೋರ್ಟ್‌ನ ಈ ತೀರ್ಪಿನಿಂದ ಮಾನ್ಯತಾ ಟೆಕ್‌ಪಾರ್ಕ್‌ ದಂಡ ಹಾಗೂ ಬಡ್ಡಿ ಸೇರಿ ₹ 110 ಕೋಟಿ  ಪಾವತಿ ಮಾಡಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

‘ಕೇಂದ್ರೀಕೃತ ಹವಾ ನಿಯಂತ್ರಣ ವ್ಯವಸ್ಥೆ’ಯುಳ್ಳ ವಸತಿಯೇತರ ಕಟ್ಟಡಗಳಿಗೆ ಹೆಚ್ಚಿನ ತೆರಿಗೆ ವಿಧಿಸುವ ಬಿಬಿಎಂಪಿ ನಿರ್ಧಾರವನ್ನು ಹೈಕೋರ್ಟ್‌ ಆದೇಶ ಎತ್ತಿ ಹಿಡಿದಿದೆ.

ತಮ್ಮದು ‘ಕೇಂದ್ರೀಕೃತ ಹವಾ ನಿಯಂತ್ರಣ ವ್ಯವಸ್ಥೆ’ ಹೊರತುಪಡಿಸಿದ ವಸತಿಯೇತರ ಕಟ್ಟಡ ಎಂದು ಘೋಷಿಸಿಕೊಂಡ ಮಾನ್ಯತಾ ಟೆಕ್‌ಪಾರ್ಕ್‌ ಮಾಲೀಕರು, 2008–09 ರಿಂದ 2015–16ನೇ ಸಾಲಿನ ವರೆಗೆ ಸ್ವಯಂ ಮೌಲ್ಯಮಾಪನ ಯೋಜನೆಯಡಿ ಪ್ರತಿ ಚದರ ಅಡಿಗೆ ₹8ರಂತೆ ತೆರಿಗೆ ಪಾವತಿಸುತ್ತ ಬಂದಿದ್ದರು.

2014ರಲ್ಲಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಧಾನ ಮಹಾ ಲೇಖಪಾಲರು (ಪಿಎಜಿ), ಮಾನ್ಯತಾ ಟೆಕ್ ಪಾರ್ಕ್‌ ‘ಕೇಂದ್ರೀಕೃತ ಹವಾ ನಿಯಂತ್ರಣ ವ್ಯವಸ್ಥೆ’ಯುಳ್ಳ ವಸತಿಯೇತರ ಕಟ್ಟಡದ ವರ್ಗಕ್ಕೆ ಸೇರುತ್ತದೆ. ಹೀಗಾಗಿ ಅದರಿಂದ ಪ್ರತಿ ಚದರ ಅಡಿಗೆ ₹10 ರಂತೆ ತೆರಿಗೆ ವಸೂಲಿ ಮಾಡಬೇಕು ಎಂದು ಹೇಳಿದ್ದರು.

ಬಳಿಕ ಬಿಬಿಎಂಪಿ ಟೆಕ್‌ಪಾರ್ಕ್‌ ಮಾಲೀಕರಿಗೆ ನೋಟಿಸ್‌ ನೀಡಿ ಪರಿಷ್ಕೃತ ದರದಲ್ಲಿ ಲೆಕ್ಕ ಹಾಕಿ ವ್ಯತ್ಯಾಸವಾಗಿರುವ ಬಾಕಿ ತೆರಿಗೆಯನ್ನು ಪಾವತಿಸುವಂತೆ ಸೂಚಿಸಿತ್ತು. ಅದಕ್ಕೆ ಮಾಲೀಕರು ಸ್ಪಂದಿಸದಿದ್ದಾಗ ಎಂಟು ವರ್ಷಗಳಲ್ಲಿ ವ್ಯತ್ಯಾಸದ ತೆರಿಗೆ ಮೊತ್ತ ₹83.45 ಕೋಟಿ ಪಾವತಿಸಬೇಕು ಎಂದು ನೋಟಿಸ್‌ ನೀಡಿತ್ತು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಟ್ಟಡದ ಮಾಲೀಕರು ಹೆಚ್ಚುವರಿ ತೆರಿಗೆ ವಿಧಿಸುವ ಅಧಿಕಾರ ಬಿಬಿಎಂಪಿಗೆ ಇಲ್ಲ ಎಂದು ವಾದಿಸಿದ್ದರು. ಜತೆಗೆ ಆಸ್ತಿ ಬಳಕೆಯ ಸ್ವರೂಪ ಮತ್ತು ಸೌಕರ್ಯಗಳನ್ನು ನೋಡಿ ತೆರಿಗೆ ನಿರ್ಧರಿಸುವ ಬಿಬಿಎಂಪಿ ಆಸ್ತಿ ತೆರಿಗೆ ನಿಯಮಾವಳಿ 2009ರ ನಿಯಮ 4ರ ನ್ಯಾಯಬದ್ಧತೆಯನ್ನು ಪ್ರಶ್ನಿಸಿದ್ದರು.

ಅರ್ಜಿದಾರರ ಮನವಿ ಆಲಿಸಿದ ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಅವರು, ‘ಪಾಲಿಕೆಯು ನೋಟಿಸ್‌ ಮೂಲಕ ಮಾಡಿರುವ ವರ್ಗೀಕರಣವು ಭಾರತೀಯ ಸಂವಿಧಾನದ 14ನೇ ಕಂಡಿಕೆಯ ಅನುಗುಣವಾಗಿರುತ್ತದೆ’ ಎಂದು ತೀರ್ಪು ನೀಡಿ ಅರ್ಜಿದಾರರ ಮನವಿ ತಿರಸ್ಕೃರಿಸಿದ್ದಾರೆ.

‘ಯಾವುದೇ ಹಂತದಲ್ಲಿ ಇಂತಹ ವಂಚನೆ, ತಪ್ಪು ಮಾಹಿತಿ ಅಥವಾ ಅಕ್ರಮಗಳನ್ನು ಬಿಬಿಎಂಪಿ ಕಂಡು ಹಿಡಿಯಬಹುದು. ಅರ್ಜಿದಾರರಿಗೆ ತಮ್ಮ ಕಟ್ಟಡ ‘ಕೇಂದ್ರೀಕೃತ ಹವಾ ನಿಯಂತ್ರಣ ವ್ಯವಸ್ಥೆ’ ಹೊಂದಿರುವುದು ಗೊತ್ತಿದ್ದರೂ ಅದು ಕೆಳವರ್ಗಕ್ಕೆ ಸೇರಿದೆ ಎಂದು ತಪ್ಪು ಮಾಹಿತಿ ನೀಡಿದ್ದರು’ ಎಂದು ಆದೇಶದಲ್ಲಿ ಹೇಳಿದ್ದಾರೆ.

₹110 ಕೋಟಿ ಪಾವತಿಸಬೇಕು: ‘ಪಾಲಿಕೆ ವಾದವನ್ನು ಕೋರ್ಟ್‌ ಎತ್ತಿಹಿಡಿದಿರುವುದು ಸಂತಸ ತಂದಿದೆ. ಈ ತೀರ್ಪಿನಿಂದ ಕೋಟ್ಯಂತರ ತೆರಿಗೆ ಉಳಿಸಿಕೊಂಡವರ ಬಾಕಿ ವಸೂಲಿ ಮಾಡುವ ಕಾರ್ಯಕ್ಕೆ ಬಲ ಬಂದಂತಾಗಿದೆ.

ಇದೀಗ ಮಾನ್ಯತಾ ಟೆಕ್‌ ಪಾರ್ಕ್‌ ಬಿಬಿಎಂಪಿಗೆ ಬಡ್ಡಿ ಮತ್ತು ದಂಡ ಸೇರಿದಂತೆ ಸುಮಾರು ₹110 ಕೋಟಿ ಪಾವತಿಸಬೇಕಿದೆ’ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜು ಹೇಳಿದರು.

ಒಳ್ಳೆಯ ಪಾಠ
‘ತೆರಿಗೆ ಬಾಕಿ ಪಾವತಿಸುವಂತೆ ಮಾನ್ಯತಾ ಟೆಕ್‌ ಪಾರ್ಕ್‌ನವರಿಗೆ ಹಲವು ಬಾರಿ ಮನವಿ ಮಾಡಿಕೊಂಡೆವು. ಪಾರ್ಕ್‌ ಎದುರು ನಮ್ಮ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ನಾನು ಸಹ ಎರಡು ಬಾರಿ ಮನವಿ ಮಾಡಿದೆ. ಆದರೂ ಅವರು ಬಾಕಿ ಪಾವತಿಸಲು ಒಲವು ತೋರಲಿಲ್ಲ.

ಪಾಲಿಕೆಯ ತೆರಿಗೆ ಬಾಕಿಯಿಂದ ತಪ್ಪಿಸಿಕೊಳ್ಳುತ್ತೇವೆ ಎನ್ನುವವರಿಗೆ ಇದೊಂದು ಒಳ್ಳೆಯ ಪಾಠ. ಸದ್ಯ ಬಾಕಿ ಉಳಿಸಿಕೊಂಡವರು ತಕ್ಷಣವೇ ಪಾವತಿಸುವುದು ಒಳ್ಳೆಯದು’ ಎಂದು ಮೇಯರ್‌ ಬಿ.ಎನ್.ಮಂಜುನಾಥ್‌ ರೆಡ್ಡಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.