ADVERTISEMENT

4 ತಾಸು ವಶದಲ್ಲಿಟ್ಟುಕೊಂಡಿದ್ದರು!

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2015, 20:21 IST
Last Updated 5 ಅಕ್ಟೋಬರ್ 2015, 20:21 IST

ಬೆಂಗಳೂರು: ಕಾಲ್‌ ಸೆಂಟರ್ ಉದ್ಯೋಗಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪಿಗಳು, ಯುವತಿಯನ್ನು 4 ತಾಸು ತಮ್ಮ ವಶದಲ್ಲಿಟ್ಟುಕೊಂಡಿದ್ದರು ಎಂದು ಪೊಲೀಸರು ತಿಳಿಸಿದರು.

ದೊಮ್ಮಲೂರು ಸಮೀಪದ ಆಜ್ಞಾತ ಸ್ಥಳದಲ್ಲಿ ಅತ್ಯಾಚಾರ ನಡೆಸಿದ ನಂತರ, ಮತ್ತೆ ಆಕೆಯನ್ನು ವಾಹನದಲ್ಲಿ ಕರೆದುಕೊಂಡು ದೊಮ್ಮಲೂರು ಮತ್ತು ಕೋರಮಂಗಲ ಒಳವರ್ತುಲ ರಸ್ತೆಯಲ್ಲಿ ಸುತ್ತಿಸಿದ್ದಾರೆ.

ವಾಹನ ಚಲಿಸುತ್ತಿದ್ದಾಗಲೂ ಒಬ್ಬೊಬ್ಬರಂತೆ ಆಕೆ ಅತ್ಯಾಚಾರ ಎಸಗಿದ್ದು, ಪ್ರತಿರೋಧ ತೋರಿದಾಗ ಹಲ್ಲೆ ನಡೆಸಿದ್ದಾರೆ. ನಂತರ ನಿತ್ರಾಣಗೊಂಡ ಆಕೆಯನ್ನು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮಡಿವಾಳದ ಬಸ್ ನಿಲ್ದಾಣದ ಬಳಿ ದಬ್ಬಿ ಹೋಗಿದ್ದಾರೆ.

ಕೆಲ ಹೊತ್ತಿನ ಬಳಿಕ ಚೇತರಿಸಿಕೊಂಡ ಆಕೆ, ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಸ್ಥಳಕ್ಕೆ ಬಂದ ಆತ ಆಕೆಯನ್ನು ಸೇಂಟ್ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾನೆ. ಎರಡು ದಿನಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಯುವತಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದು, ಸ್ನೇಹಿತನೊಂದಿಗೆ ಠಾಣೆಗೆ ಬಂದು ದೂರು ಕೊಟ್ಟರು ಎಂದು ಪೊಲೀಸರು ತಿಳಿಸಿದರು.

ಕರೆದೊಯ್ದ ಪೋಷಕರು: ‘ವಿಷಯ ತಿಳಿದು ಭಾನುವಾರ ನಗರಕ್ಕೆ ಬಂದ ಯುವತಿಯ ಪೋಷಕರು ಆಕೆಯನ್ನು ತಮ್ಮೊಂದಿಗೆ ಮಧ್ಯಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲದೆ, ಪ್ರಕರಣದ ತನಿಖೆಗೆ ಎಲ್ಲಾ ರೀತಿಯಲ್ಲೂ ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

ಕನ್ನಡ ಮಾತನಾಡುತ್ತಿದ್ದರು: ಆರೋಪಿಗಳಿಬ್ಬರು ಕನ್ನಡ ಮಾತನಾಡುತ್ತಿದ್ದರು. ಅತ್ಯಾಚಾರದ ವೇಳೆ ಕೂಗಿಕೊಳ್ಳುವ ಶಬ್ದ ಹೊರಕ್ಕೆ ಕೆಳದಂತೆ, ವಾಹನದಲ್ಲಿ ಜೋರಾಗಿ ಹಾಡು ಹಾಕಿದ್ದರು. ಇದಕ್ಕೂ ಮುಂಚೆ ಒಂದೆರಡು ಬಾರಿ ಅದೇ ವಾಹನದಲ್ಲಿ ಓಡಾಡಿದ್ದ ಯುವತಿಗೆ, ಚಾಲಕನ ಮುಖ ಪರಿಚಯಿತ್ತು. ಹಾಗಾಗಿ ಆ ವಾಹನಕ್ಕೆ ಹತ್ತಿದ್ದಾಗಿ ಯುವತಿ ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದರು.

ಯುವತಿ ನೀಡಿದ ಮಾಹಿತಿ ಆಧಾರದ ಮೇಲೆ ಹೊಸೂರು ರಸ್ತೆ, ಮಡಿವಾಳ ಮತ್ತು ಕೋರಮಂಗಳ ಭಾಗದಲ್ಲಿ ಸಂಚರಿಸುವ ಟೆಂಪೊ ಟ್ರಾವಲರ್‌ಗಳ ಚಾಲಕರು ಮತ್ತು ಕ್ಲೀನರ್‌ಗಳನ್ನು ಠಾಣೆಗೆ ಕರೆಸಿ ಯುವತಿಗೆ ತೋರಿಸಲಾಯಿತು. ಆದರೆ, ಯುವತಿ ಇವರ್‍ಯಾರು ನನ್ನ ಮೇಲೆ ಅತ್ಯಾಚಾರ ಎಸಗಿಲ್ಲ ಎಂದಳು ಎಂದು ಪೊಲೀಸರು ಮಾಹಿತಿ ನೀಡಿದರು.

*
ಕಾರಿನಲ್ಲೇ ನಡೆದಿತ್ತು ಪ್ರತಿಭಾ ಕೊಲೆ
ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಅವರು ಕ್ಯಾಬ್ ಚಾಲಕನಿಂದಲೇ ಅತ್ಯಾಚಾರಕ್ಕೀಡಾಗಿ, ಕೊಲೆಯಾಗಿದ್ದ ಘಟನೆ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಭಾ, ಕುಮಾರಸ್ವಾಮಿ ಬಡಾವಣೆಯಲ್ಲಿರುವ ಮನೆಯಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಚೇರಿಗೆ ಕ್ಯಾಬ್‌ನಲ್ಲಿ ತೆರಳುತ್ತಿದ್ದರು.

ಈ ಸಂದರ್ಭದಲ್ಲಿ ಚಾಲಕ ಶಿವಕುಮಾರ್ ಮಾರ್ಗ ಬದಲಿಸಿ ಪ್ರತಿಭಾ ಅವರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಈ ದುರ್ಘಟನೆ 2005ರ ಡಿಸೆಂಬರ್ 13ರಂದು ನಡೆದಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ 2010ರಲ್ಲಿ ತೀರ್ಪು ನೀಡಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT