ADVERTISEMENT

ಕೇಬಲ್‌ ಕಾರ್‌ ಯೋಜನೆಗೆ ‘ತಾಂತ್ರಿಕ’ ದೋಷ!

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 20:26 IST
Last Updated 2 ಜನವರಿ 2018, 20:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಂದಿಬೆಟ್ಟ, ಮಧುಗಿರಿ ಮತ್ತು ಯಾದಗಿರಿ ಬೆಟ್ಟಗಳಲ್ಲಿ ‘ಕೇಬಲ್‌ ಕಾರ್‌’ಗಳನ್ನು ಅಳವಡಿಸುವ ಯೋಜನೆಯು ಟೆಂಡರ್‌ ಹಂತದಿಂದ ಮುಂದುವರಿಯುತ್ತಲೇ ಇಲ್ಲ.

ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ, ‘ಮೇ ತಿಂಗಳಲ್ಲಿ ಮೊದಲ ಬಾರಿಗೆ ಟೆಂಡರ್ ಕರೆಯಲಾಗಿತ್ತು. ಆಗ ಒಬ್ಬ ಗುತ್ತಿಗೆದಾರರು ಮಾತ್ರ ಭಾಗವಹಿಸಿದ್ದರು. ತಾಂತ್ರಿಕವಾಗಿ ಸಬಲರಾಗಿಲ್ಲದ ಕಾರಣ ಅವರ ಟೆಂಡರ್‌ ತಿರಸ್ಕರಿಸಲಾಯಿತು. ಎರಡನೇ ಬಾರಿ ಟೆಂಡರ್‌ ಕರೆದಾಗಲೂ ಅದೇ ಸಮಸ್ಯೆಯಾಯಿತು. ಇತ್ತೀಚೆಗೆ ಮತ್ತೊಮ್ಮೆ ಟೆಂಡರ್‌ ಕರೆದಿದ್ದೇವೆ. ರಾಜ್ಯದವರಷ್ಟೇ ಅಲ್ಲದೆ, ಇತರರೂ ಟೆಂಡರ್‌ನಲ್ಲಿ ಭಾಗವಹಿಸಬಹುದು’ ಎಂದು ತಿಳಿಸಿದರು.

ಸಾಹಸ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಸಾಕಷ್ಟು ಸಂಸ್ಥೆಗಳು ಕೇಬಲ್‌ ಕಾರ್‌ ಅಳವಡಿಸಲು ಆಸಕ್ತಿ ತೋರಿವೆ. ಆದರೆ, ತಾಂತ್ರಿಕವಾಗಿ ಸರಿಯಿದ್ದರೆ ಮಾತ್ರ ಟೆಂಡರ್‌ ನೀಡಲು ಸಾಧ್ಯ. ಇಲ್ಲಿ ಹಣಕ್ಕಿಂತ ಸುರಕ್ಷತೆ ಬಹಳ ಮುಖ್ಯ ಎಂದು ಹೇಳಿದರು.

ADVERTISEMENT

‘ಇಲ್ಲಿನವರು ತಾಂತ್ರಿಕವಾಗಿ ದುರ್ಬಲರಾಗಿರುವುದರಿಂದ ಫ್ರಾನ್ಸ್‌ ತಜ್ಞರನ್ನು ಕರೆಸಿ, ಸ್ಥಳ ಪರಿಶೀಲನೆ ನಡೆಸಲು ಇಲಾಖೆ ತೀರ್ಮಾನಿಸಿದೆ. ಅವರು ತಾಂತ್ರಿಕ ಅಂಶಗಳು ಹಾಗೂ ಕಾರ್ಯಸಾಧ್ಯತೆಯ ಕುರಿತು ಅಧ್ಯಯನ ನಡೆಸಲಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನಂದಿಬೆಟ್ಟ ಏಕಶಿಲೆ ಬೆಟ್ಟ: ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್‌, ‘ಇದು ಏಕಶಿಲೆಯಲ್ಲಿ ರೂಪಗೊಂಡಿದೆ. ಇಲ್ಲಿ ಯಾವುದೇ ಇಳಿಜಾರುಗಳಿಲ್ಲ, ಅಂಚುಗಳಿಲ್ಲ. ಹಾಗಾಗಿ ಇಲ್ಲಿ ರೋಪ್‌ವೇ ರೂಪಿಸಲು ಕಷ್ಟವಾಗುತ್ತಿದೆ’ ಎಂದು ತಿಳಿಸಿದರು.

ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಲು ಮೂರು ಕಡೆಗಳಲ್ಲಿ ಕೇಬಲ್ ಕಾರ್‌ಗಳನ್ನು ಅಳವಡಿಸುವುದಾಗಿ ಪ್ರವಾಸೋದ್ಯಮ ಇಲಾಖೆ ಘೋಷಿಸಿತ್ತು. 80ರ ದಶಕದಲ್ಲಿ ನಂದಿ ಬೆಟ್ಟಕ್ಕೆ ರೋಪ್‌ವೇ ಅಳವಡಿಸುವ ಸಂಬಂಧ ನಟ ಶಂಕರ್‌ನಾಗ್‌ ಅವರು ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ್ದರು. ಅವರ ನಿಧನದ ನಂತರ ಯೋಜನೆ ನನೆಗುದಿಗೆ ಬಿದ್ದಿತ್ತು.ಅದಕ್ಕೆ ಪ್ರವಾಸೋದ್ಯಮ ಇಲಾಖೆಗೆ ಮರು ಚಾಲನೆ ನೀಡಿತ್ತು.

₹110 ಕೋಟಿ ವೆಚ್ಚದಲ್ಲಿ ಡಿಪಿಆರ್‌: ‘ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿದ್ದೇವೆ. ಯಾದಗಿರಿ ಕೋಟೆ, ಕಲಬುರ್ಗಿ ಕೋಟೆ, ತಲಕಾವೇರಿ, ಬೇಲೂರು, ಹಳೆಬೀಡು, ಹಂಪಿ ಸೇರಿ ಪ್ರಮುಖ 20 ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ, ಆತಿಥ್ಯಕ್ಕೆ ಸಂಬಂಧಿಸಿದ ಸೌಲಭ್ಯ ಕಲ್ಪಿಸುತ್ತಿದ್ದೇವೆ. ಅದಕ್ಕಾಗಿ 14 ತಾಣಗಳ ಮಹಾಯೋಜನೆಗಳು ಸಿದ್ಧವಾಗಿವೆ. ಏಳು ತಾಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ₹110 ಕೋಟಿ ವೆಚ್ಚದಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಾಗಿದೆ’ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.

13.7 ಕೋಟಿ ಪ್ರವಾಸಿಗರ ಭೇಟಿ: 2016–17ನೇ ಸಾಲಿನಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ದೇಶಿ ಪ್ರವಾಸಿಗರ ಸಂಖ್ಯೆ 13 ಕೋಟಿ ಹಾಗೂ ವಿದೇಶಿ ಪ್ರವಾಸಿಗರ ಸಂಖ್ಯೆ 7 ಲಕ್ಷ ಇದೆ. ವರ್ಷದಿಂದ ವರ್ಷಕ್ಕೆ ಪ್ರವಾಸೋದ್ಯಮ ಶೇ11ರಷ್ಟುಅಭಿವೃದ್ಧಿ ಕಾಣುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.