ADVERTISEMENT

ಕೈ ಉತ್ಪನ್ನ ಬಳಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST
ಕರಕುಶಲ ವಸ್ತುಗಳ ಬಗ್ಗೆ ಇರ್ಫಾನ್‌ ಖಾನ್‌ ಅವರಿಗೆ ಪ್ರಸನ್ನ ಮಾಹಿತಿ ನೀಡಿದರು. ನೀಲಕಂಠ ಕುರುಬರ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಕರಕುಶಲ ವಸ್ತುಗಳ ಬಗ್ಗೆ ಇರ್ಫಾನ್‌ ಖಾನ್‌ ಅವರಿಗೆ ಪ್ರಸನ್ನ ಮಾಹಿತಿ ನೀಡಿದರು. ನೀಲಕಂಠ ಕುರುಬರ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಾನು ಬುದ್ಧಿ, ಮನಸ್ಸು ಹಾಗೂ ದೇಹವನ್ನು ಬಳಸಿ ನಟನೆ ಮಾಡುತ್ತೇನೆ. ಅದಕ್ಕಾಗಿ ಯಂತ್ರವನ್ನು ಬಳಸುವುದಿಲ್ಲ. ಹೀಗಾಗಿ ನನ್ನ ನಟನೆಯೂ ಕೈ ಉತ್ಪನ್ನವೇ’ ಎಂದು ಬಾಲಿವುಡ್‌ ನಟ ಇರ್ಫಾನ್‌ ಖಾನ್‌ ಹೇಳಿದರು.

ಗ್ರಾಮ ಸೇವಾ ಸಂಘವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕೈ ಉತ್ಪನ್ನಗಳು’ ಕುರಿತ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಕೈ ಉತ್ಪನ್ನ ಎನ್ನುವುದು ಪ್ರಕೃತಿಯ ಜತೆಗೆ ಬದುಕುವ ಒಂದು ವಿಧಾನ. ಆದರೆ, ಇಂದು ಕರಕುಶಲ ಕರ್ಮಿಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ಬಂದಿದೆ. ಅವರಿಗೆ ಈ ವ್ಯವಸ್ಥೆಯ ಮೇಲೆ ವಿಶ್ವಾಸವೇ ಹೋಗಿದೆ. ಎಲ್ಲರೂ ಕೈ ಉತ್ಪನ್ನಗಳನ್ನೇ ಬಳಸಿದರೆ ದೇಶವು ಸುಂದರವಾಗಿರುತ್ತದೆ ಎಂದರು.

ADVERTISEMENT

‘ಬಾಲಿವುಡ್‌ ಚಿತ್ರಗಳಲ್ಲಿ ಕೈ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬಹುದಲ್ಲವೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಇರ್ಫಾನ್‌ ಖಾನ್‌, ‘ಸ್ವಾತಂತ್ರ್ಯದ ಬಂದ ಹೊಸದರಲ್ಲಿ ಚಿತ್ರ ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಎಲ್ಲರೂ ಸಮಾಜದ ಬದಲಾವಣೆಗಾಗಿ ಹಂಬಲಿಸುತ್ತಿದ್ದರು. ಸೈದ್ಧಾಂತಿಕ ವಿಷಯಗಳನ್ನು ಪ್ರೇಕ್ಷಕರಿಗೆ ಮುಟ್ಟಿಸುವ ಉದ್ದೇಶ ಹೊಂದಿದ್ದರು. ಆದರೆ, ಇತ್ತೀಚೆಗೆ ಸಿನಿಮಾಗಳು ಬದುಕನ್ನು ಪ್ರತಿನಿಧಿಸುತ್ತಿಲ್ಲ. ಅವುಗಳಿಂದ ಒಳ್ಳೆಯದನ್ನು ಕಲಿಯಬಹುದು ಎಂದು ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪು.’

‘ಸಿನಿಮಾದಿಂದ ಜನ ಪ್ರಭಾವಿತರಾಗುತ್ತಾರೆ ಎನ್ನುವುದು ನಿಜ. ಆದರೆ, ಕೈ ಉತ್ಪನ್ನದ ಹೋರಾಟಕ್ಕೂ ಬಾಲಿವುಡ್‌ಗೂ ವ್ಯತ್ಯಾಸ ಇದೆ. ಬಾಲಿವುಡ್‌ ದಿನೇ ದಿನೇ ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿದೆ. ಅಲ್ಲಿನ ಶೇ 90–95 ಮಂದಿ ಬದಲಾವಣೆಬಯಸುವುದಿಲ್ಲ’ ಎಂದರು.

‘ನಾನು ನಟನಾಗಿದ್ದೇನೆ ಎಂಬ ಕಾರಣಕ್ಕೆ ಸಾಮಾಜಿಕ ವಿಷಯಗಳ ಬಗ್ಗೆ ಅರಿವು ಮೂಡಿಸಲೇಬೇಕು ಎಂದೇನಿಲ್ಲ. ಆದರೆ, ಸಾಮಾನ್ಯ ಪ್ರಜೆಯಾಗಿ ಇವುಗಳ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಕರ್ತವ್ಯ. ಸಾಮಾಜಿಕ ಸಮಸ್ಯೆ ಪರಿಹರಿಸಲು ಸಾರ್ವಜನಿಕ ಜೀವನದಲ್ಲಿರುವವರ ಅಗತ್ಯವಿಲ್ಲ. ಅಭಿಮಾನಿಗಳು ವ್ಯಕ್ತಿಪೂಜೆಯನ್ನು ಬಿಡಬೇಕು. ಸಿನಿಮಾ, ಕ್ರಿಕೆಟ್‌ ತಾರೆಯರ ಅನುಕರಣೆ ಒಳ್ಳೆಯದಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜಾಲತಾಣಗಳಲ್ಲಿ ಬುದ್ಧಿಜೀವಿಗಳನ್ನು ಮನಬಂದಂತೆ ನಿಂದಿಸುವ ಬಗ್ಗೆ ಏನನ್ನುತ್ತೀರಿ’ ಎಂಬ ಪ್ರಶ್ನೆಗೆ  ಇರ್ಫಾನ್‌, ‘ಸಾಮಾಜಿಕ ಜಾಲತಾಣ ಒಂದು ವರ್ಗಕ್ಕೆ ಸೀಮಿತ. ಅಲ್ಲಿನ ಚರ್ಚೆಗೂ ವಾಸ್ತವ ಜಗತ್ತಿಗೂ ವ್ಯತ್ಯಾಸ ಇದೆ’ ಎಂದು ಹೇಳಿದರು.

ಉತ್ತಮ ಅರ್ಥ ವ್ಯವಸ್ಥೆ: ಕೈ ಉತ್ಪನ್ನಗಳೇ ಭವಿಷ್ಯದ ಉದ್ಯಮ. ಇದರ ಆರ್ಥಿಕತೆಯು ನವ ಉದಾರೀಕರಣದ ಆರ್ಥಿಕತೆಗಿಂತ ಉತ್ತಮವಾದುದು. ಅಸಮಾನತೆ, ಪರಿಸರ ಹಾನಿ, ನೈತಿಕ ಅಧಃಪತನ, ಪರಕೀಯ ಭಾವನೆಯ ಸಮಸ್ಯೆಗಳಿಗೆ ಈ ವ್ಯವಸ್ಥೆಯೇ ಸೂಕ್ತ ಪರಿಹಾರ ಎಂದು ರಂಗಕರ್ಮಿ ಪ್ರಸನ್ನ ಹೇಳಿದರು.

‘ರಂಗಭೂಮಿಗೆ ತೆರಿಗೆ ಬೇಡ’
ರಂಗಭೂಮಿ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಕುತ್ತಿದ್ದಾರೆ. ನಾಟಕದ ಟಿಕೆಟ್‌ ಮೇಲೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ ಎಂದು ರಂಗನಿರ್ದೇಶಕ ಎಂ.ಎಸ್‌.ಸತ್ಯು ಬೇಸರ ವ್ಯಕ್ತಪಡಿಸಿದರು.

‘ರಂಗಮಂದಿರವನ್ನು ಸರ್ಕಾರ ಕಲ್ಯಾಣ ಮಂಟಪ ಎಂದು ಪರಿಗಣಿಸಿದೆ. ಲಕ್ಷಾಂತರ ರೂಪಾಯಿ ಬಾಡಿಗೆ ಪಡೆಯುವ ಕಲ್ಯಾಣ ಮಂಟಪಗಳಿಗೆ ಜಿಎಸ್‌ಟಿ ವಿಧಿಸುವುದು ಸರಿ. ಆದರೆ, ರಂಗಮಂದಿರಕ್ಕೆ ತೆರಿಗೆ ವಿಧಿಸುವುದು ಸರಿಯಲ್ಲ. ’ ಎಂದರು.

ನಾಟಕದ ಟಿಕೆಟ್‌ ಮಾರಾಟದಿಂದ ಬರುವ ಬಹುಪಾಲು ಹಣ ಬಾಡಿಗೆಗೆ ವ್ಯಯವಾಗುತ್ತದೆ. ಕಲಾವಿದರಿಗೆ ಏನೂ ಉಳಿಯುತ್ತಿಲ್ಲ ಎಂದು ಹೇಳಿದರು.

**

ಶೇ 4ಕ್ಕಿಂತ ಕಡಿಮೆ ಜನ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುತ್ತಾರೆ. ಸಿನಿಮಾವೆಂದರೆ ಪಿಕ್‌ನಿಕ್‌ ಇದ್ದಂತೆ ಎಂದು ಜನ ಭಾವಿಸಿದ್ದಾರೆ.
–ಇರ್ಫಾನ್‌ ಖಾನ್‌, ಬಾಲಿವುಡ್‌ ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.