ADVERTISEMENT

6 ತಿಂಗಳ ಹೆಚ್ಚುವರಿ ವೇತನ ಪಾವತಿಗೆ ಆಗ್ರಹ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಕಚೇರಿ ಎದುರು ಗುತ್ತಿಗೆ ಪೌರಕಾರ್ಮಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 20:40 IST
Last Updated 27 ಫೆಬ್ರುವರಿ 2017, 20:40 IST
ಗುತ್ತಿಗೆ ಪೌರಕಾರ್ಮಿಕರು ನಗರದ ಬಿಬಿಎಂಪಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು  –ಪ್ರಜಾವಾಣಿ ಚಿತ್ರ
ಗುತ್ತಿಗೆ ಪೌರಕಾರ್ಮಿಕರು ನಗರದ ಬಿಬಿಎಂಪಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   
ಬೆಂಗಳೂರು: ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರಿಗೆ  ನೀಡಬೇಕಿರುವ ಆರು ತಿಂಗಳ ಹೆಚ್ಚುವರಿ ವೇತನವನ್ನು ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ ಹಾಗೂ ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಸದಸ್ಯರು ನಗರದ ಬಿಬಿಎಂಪಿ ಮುಖ್ಯ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
 
‘ಗುತ್ತಿಗೆ ಪೌರಕಾರ್ಮಿಕರಿಗೆ ನೀಡುತ್ತಿದ್ದ ವೇತನವನ್ನು ₹7 ಸಾವಿರದಿಂದ ₹14,439ಕ್ಕೆ ಹೆಚ್ಚಳ ಮಾಡಲಾಗಿದೆ. ಆಗಸ್ಟ್‌ 1ರಿಂದ ಜಾರಿಗೆ ಬರುವಂತೆ ಈ ಮೊತ್ತವನ್ನು ಪಾವತಿಸಬೇಕು. ಆದರೆ, ಈವರೆಗೂ ವೇತನ ಪಾವತಿಸಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.
 
ಮಹಾಸಂಘದ ಅಧ್ಯಕ್ಷ ನಾರಾಯಣ ಮಾತನಾಡಿ, ‘2016ರ ನವೆಂಬರ್‌ 8ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುತ್ತಿಗೆ ಪೌರಕಾರ್ಮಿಕರಿಗೆ ಹೆಚ್ಚುವರಿ ವೇತನದ ಚೆಕ್‌ಗಳನ್ನು ಸಾಂಕೇತಿಕವಾಗಿ  ವಿತರಿಸಿದ್ದರು. ಆದರೆ, ಚೆಕ್‌ಗಳು ನಗದೀಕರಣವಾಗದೆ ಪೌರಕಾರ್ಮಿಕರಿಗೆ ಸಮಸ್ಯೆ ಉಂಟಾಗಿತ್ತು’ ಎಂದು ದೂರಿದರು.
 
‘ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ನಗರಸಭೆ ಹಾಗೂ ಪುರಸಭೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಪೌರಕಾರ್ಮಿಕರಿಗೆ ಹೆಚ್ಚುವರಿ ವೇತನ ನೀಡಲಾಗುತ್ತಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯ ಗುತ್ತಿಗೆ ಪೌರಕಾರ್ಮಿಕರಿಗೆ ಆರು ತಿಂಗಳಿಂದ ಹೆಚ್ಚುವರಿ ವೇತನ ಪಾವತಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
 
ಪ್ರತಿಭಟನಾಕಾರರನ್ನು ಭೇಟಿ ಮಾಡಿದ ಮೇಯರ್‌ ಜಿ.ಪದ್ಮಾವತಿ, ‘ಗುತ್ತಿಗೆ ಪೌರಕಾರ್ಮಿಕರಿಗೆ ನೀಡಬೇಕಿರುವ ಹೆಚ್ಚುವರಿ ವೇತನವನ್ನು ಒಂದು ವಾರದಲ್ಲಿ ಬಿಡುಗಡೆ ಮಾಡುತ್ತೇವೆ. ಪೌರಕಾರ್ಮಿಕರ ಖಾತೆಗಳಿಗೆ ನೇರವಾಗಿ ವೇತನ ಜಮೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಯನ್ನು ಹಿಂಪಡೆದರು.
 
ಕೆಲಸ ಕಾಯಂ ಮಾಡದಿದ್ದರೆ ಏಪ್ರಿಲ್‌ 1ರಿಂದ ಕೆಲಸ ಬಂದ್‌: ‘ಮಾರ್ಚ್‌ 31ರೊಳಗೆ ಗುತ್ತಿಗೆ ಪೌರಕಾರ್ಮಿಕ ಪದ್ಧತಿಯನ್ನು  ರದ್ದುಗೊಳಿಸಬೇಕು. ಎಲ್ಲ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ಇಲ್ಲದಿದ್ದರೆ ಏಪ್ರಿಲ್‌ 1ರಿಂದ ಕಸ ಗುಡಿಸುವುದನ್ನು  ನಿಲ್ಲಿಸಿ ಪ್ರತಿಭಟನೆ ನಡೆಸುತ್ತೇವೆ’ ಎಂದು  ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.