ADVERTISEMENT

99 ವಿದ್ಯಾರ್ಥಿಗಳಿಗೆ ಚಿನ್ನ; 212 ಪಿಎಚ್‌.ಡಿ

ಇಂದು ಬೆಂಗಳೂರು ವಿಶ್ವವಿದ್ಯಾಲಯ 50ನೇ ಘಟಿಕೋತ್ಸವ; 47,202 ವಿದ್ಯಾರ್ಥಿಗಳಿಗೆ ಪದವಿ

​ಪ್ರಜಾವಾಣಿ ವಾರ್ತೆ
Published 29 ಮೇ 2015, 20:19 IST
Last Updated 29 ಮೇ 2015, 20:19 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 50ನೇ ಘಟಿಕೋತ್ಸವ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇದೇ 30ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಅವರು, ಗೌರಿಬಿದನೂರಿನ ಎಇಎಸ್‌ ನ್ಯಾಷನಲ್‌ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಸಂಧ್ಯಾ ಜಿ.ಎ. ಅವರು 8 ಚಿನ್ನ ಹಾಗೂ 6 ನಗದು ಬಹುಮಾನ, ವಿವಿಯ ಕನ್ನಡ ಅಧ್ಯಯನ ಕೇಂದ್ರದ ಅರುಣ್‌ ಎಸ್‌.ಎನ್‌. ಅವರು 7 ಚಿನ್ನದ ಪದಕ ಗಳಿಸಿದ್ದಾರೆ. ಇವರು ಸೇರಿದಂತೆ 99  ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದರು.

512 ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ, 24,332 ವಿದ್ಯಾರ್ಥಿಗಳು ಪ್ರಥಮದರ್ಜೆ, 16,399 ವಿದ್ಯಾರ್ಥಿಗಳು ದ್ವಿತೀಯದರ್ಜೆ, 5,784 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 17,548 ವಿದ್ಯಾರ್ಥಿನಿಯರು ಸೇರಿದಂತೆ 32,526 ಮಂದಿ ಘಟಿಕೋತ್ಸವ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.

199 ಚಿನ್ನದ ಪದಕ ಹಾಗೂ 77 ನಗದು ಬಹುಮಾನಗಳನ್ನು 99 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದರು.
‘ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ. ವೇದಪ್ರಕಾಶ್‌ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಉಪಸ್ಥಿತರಿರುವರು’ ಎಂದರು.

‘ಹಲವು ನಗದು ಬಹುಮಾನಗಳನ್ನು ಆರಂಭಿಸಿ 40 ವರ್ಷಗಳು ಕಳೆದಿವೆ. ಅವರು ನೀಡಿರುವ ಹಣದಿಂದ ಬರುವ ಬಡ್ಡಿ ಕಡಿಮೆ. ಕೆಲವು ನಗದು ಬಹುಮಾನಗಳ ಮೊತ್ತ ₨500 ಇದೆ. ಉಳಿದವು ₨1 ಸಾವಿರ ಆಸುಪಾಸಿನಲ್ಲಿ ಇವೆ’ ಎಂದರು. ‘ಚಿನ್ನದ ಪದಕ ವಿಜೇತರಿಗೆ 20 ಗ್ರಾಂ ಬೆಳ್ಳಿ ಹಾಗೂ 1.3 ಗ್ರಾಂ ಚಿನ್ನವನ್ನು ಒಳಗೊಂಡ ಪದಕ ಪ್ರದಾನ ಮಾಡಲಾಗುವುದು. ಇದಕ್ಕೆ ₨5,301 ವೆಚ್ಚ ಆಗುತ್ತದೆ’ ಎಂದರು.

ವಾಹನ ನಿಲುಗಡೆ:  ಘಟಿಕೋತ್ಸವಕ್ಕೆ ಬರುವ ಆಹ್ವಾನಿತರು ಅರಮನೆ ರಸ್ತೆಯ ಪ್ರಸನ್ನ ಕುಮಾರ್‌ ಬ್ಲಾಕ್‌, ಗಾಂಧಿನಗರದ ಕ್ರಿಕೆಟ್‌ ಮೈದಾನ ಹಾಗೂ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ವಾಹನ ನಿಲುಗಡೆ ಮಾಡಬಹುದು ಎಂದರು.
ಕುಲಸಚಿವರಾದ (ಆಡಳಿತ) ಪ್ರೊ.ಕೆ.ಕೆ. ಸೀತಮ್ಮ, ಕುಲಸಚಿವ (ಮೌಲ್ಯ ಮಾಪನ) ಪ್ರೊ.ಕೆ.ಎನ್‌. ನಿಂಗೇಗೌಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಮುಂದಿನ ವಾರ ಸಚಿವರ ಬಳಿ ನಿಯೋಗ
ಬೆಂಗಳೂರು ವಿವಿಯಿಂದ ಸೆಂಟ್ರಲ್‌ ಕಾಲೇಜು ಕೈಬಿಟ್ಟುಹೋಗಲಿದೆ ಎಂಬ ಸುದ್ದಿ ಹಬ್ಬಿದೆ. ಈ ಸಂಬಂಧ ಉನ್ನತ ಶಿಕ್ಷಣ ಸಚಿವರನ್ನು ಮುಂದಿನ ವಾರ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಪ್ರೊ. ತಿಮ್ಮೇಗೌಡ ತಿಳಿಸಿದರು.

ಸೆಂಟ್ರಲ್‌ ಕಾಲೇಜು ಬೆಂಗಳೂರು ವಿವಿಯಲ್ಲೇ ಉಳಿಯಬೇಕು ಎಂಬುದು ನಮ್ಮ ಆಶಯ. ಅಕಾಡೆಮಿಕ್‌ ಕೌನ್ಸಿಲ್‌ ಹಾಗೂ ಸಿಂಡಿಕೇಟ್‌ ಸಭೆಯಲ್ಲಿ ಈ ಸಂಬಂಧ ನಿರ್ಣಯ ಮಂಡಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಉನ್ನತ ಶಿಕ್ಷಣ ಸಚಿವರಿಗೆ ಮೂರು ಬಾರಿ, ಮುಖ್ಯಮಂತ್ರಿ ಅವರಿಗೆ ಎರಡು ಬಾರಿ ಪತ್ರ ಬರೆದು ವಿನಂತಿಸಲಾಗಿತ್ತು. ಆದರೆ, ಅವರಿಂದ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ ಮತ್ತೊಮ್ಮೆ ಭೇಟಿ ಮಾಡಿ ಮನವರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.