ADVERTISEMENT

ಅಗ್ರಶ್ರೇಣಿಯಲ್ಲಿ ಪಾಸಾದ ಕೂಲಿಕಾರನ ಮಕ್ಕಳು

​ಪ್ರಜಾವಾಣಿ ವಾರ್ತೆ
Published 14 ಮೇ 2017, 7:20 IST
Last Updated 14 ಮೇ 2017, 7:20 IST

ಹುಮನಾಬಾದ್: ತಾಲ್ಲೂಕಿನ ಕಬಿರಾಬಾದವಾಡಿ ಗ್ರಾಮದ ಕೂಲಿಕಾರನ ಮೂವರು ಮಕ್ಕಳು ಶೇ 90ಕ್ಕೂ ಮೇಲ್ಪಟ್ಟು ಅಂಕ ಪಡೆದು ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದ್ದಾರೆ. ಇವರು ತಾಲ್ಲೂಕಿನ ಹಳ್ಳಿಖೇಡ (ಬಿ)ದ ಬಸವತೀರ್ಥ ವಿದ್ಯಾಪೀಠ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು.

‘ನಾವು ಅತ್ಯಂತ ಕಡುಬಡವರು. ಅಪ್ಪ ಕಷ್ಟಪಟ್ಟು ಕೂಲಿ ಕೆಸಲ ಮಾಡಿ, ನಮ್ಮನ್ನು ಓದಿಸುತ್ತಿದ್ದಾರೆ. ಚೆನ್ನಾಗಿ ಓದಿ ಸ್ವಂತ ಕಾಲಮೇಲೆ ನಿಂತು ಉದ್ಯೋಗ ಗಿಟ್ಟಿಸಿಕೊಂಡು ಹೆತ್ತವರ ಋಣ ತೀರಿಸುವುದನ್ನು ಸವಾಲಾಗಿ ಸ್ವೀಕರಿಸಿದ್ದೇವೆ’ ಎಂದು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ 93 ಅಂಕ ಪಡೆದ ಕಾವೇರಿ ತಿಳಿಸಿದರು.

‘ನನ್ನ ತಮ್ಮ ಪ್ರಕಾಶ ಮತ್ತು ನಾನು ಸರಿಯಾಗಿ ಓದದೇ ಹತ್ತನೇ ತರಗತಿಗೆ ಓದು ನಿಲ್ಲಿಸಿದ್ದೆವು. ಆದರೆ, ಉಪನ್ಯಾಸಕರ ಸಲಹೆ ಮೇರೆಗೆ ಪ್ರವೇಶ ಪಡೆದು, ಸತತ ಕಾಲೇಜಿಗೆ ಹೋಗಿ ಶೇ 91ರಷ್ಟು ಅಂಕ ಪಡೆದು     ತೇರ್ಗಡೆಯಾಗಿದ್ದೇವೆ’ ಎಂದು ಚರಪಟ್ಟಿನಾಥ ವಿವರಿಸಿದರು.

ADVERTISEMENT

‘ನಾನು ಬಿಎ ಓದಿ, ಸಾಮಾನ್ಯ ದರ್ಜೆಯಲ್ಲಿ ಪಾಸಾಗಿದ್ದೇನೆ. ಕೆಲಸ ಸಿಗದ ಕಾರಣ ನನಗಿರುವ ಸ್ವಲ್ಪ ಸ್ವಂತ ಭೂಮಿಯಲ್ಲಿ ಒಣಬೇಸಾಯ ಮಾಡಿ, ಮಕ್ಕಳನ್ನು ಓದಿಸುತ್ತಿದ್ದೇನೆ. ನಾನು ಎದುರಿಸಿದ ಕಷ್ಟ ಮಕ್ಕಳಿಗೆ ಭವಿಷ್ಯದಲ್ಲಿ ಬರಬಾರದು. ಸಾಲ ಮಾಡಿಯಾದರೂ ಮಕ್ಕಳಿಗೆ ಚೆನ್ನಾಗಿ ಓದಿಸಿ, ಸ್ವಾವಲಂಬಿ ಜೀವನ ಸಾಗಿಸುವಂತೆ ಮಾಡುತ್ತೇನೆ.

ಮಕ್ಕಳಿಗೆ ಬರುವ ವಿದ್ಯಾರ್ಥಿ ವೇತನ ಓದಿಗೆ ಒಂದಿಷ್ಟು ನೆರವಾಗಿದೆ. ಅದು ಸಾಕಾಗದ್ದಕ್ಕೆ ₹60 ಸಾವಿರ ಸಾಲ ಮಾಡಿದ್ದೇನೆ. ಮಕ್ಕಳ ಉತ್ತಮ ಫಲಿತಾಂಶ ಸಾಲದ ನೋವು ಮರೆಸಿದೆ’ ಎಂದು ತಂದೆ ದತ್ತಾತ್ರೆಯ ‘ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.