ADVERTISEMENT

ಜನರ ಸುರಕ್ಷತೆಗೆ ‘ಗುಡ್‌ ಮಾರ್ನಿಂಗ್‌ ಬೀದರ್’

ನಗರ ಸಂಚಾರ

ಚಂದ್ರಕಾಂತ ಮಸಾನಿ
Published 9 ಜನವರಿ 2017, 5:43 IST
Last Updated 9 ಜನವರಿ 2017, 5:43 IST

ಬೀದರ್‌: ನಗರದ ನಿವಾಸಿಗಳು ಹಾಗೂ ವಾಯುವಿಹಾರಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ‘ಗುಡ್‌ ಮಾರ್ನಿಂಗ್‌ ಬೀದರ್’ ಘೋಷ ವಾಕ್ಯದೊಂದಿಗೆ ಬೆಳಗಿನ ಜಾವ ಪೊಲೀಸ್‌ ಅಧಿಕಾರಿಗಳೇ ಗಸ್ತು ನಡೆಸಲು ನಿರ್ಧರಿಸಿದ್ದಾರೆ.

ಬೆಳಗಿನ ಜಾವ ವಾಯುವಿಹಾರಕ್ಕೆ ಹೋಗುವ ಮಹಿಳೆಯರ ಕೊರಳಲ್ಲಿನ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುವ ಪ್ರಕರಣಗಳಿಂದಾಗಿ ಜನರು ಮನೆ ಬಿಟ್ಟು ಹೊರ ಬರಲು ಹೆದರುತ್ತಿದ್ದಾರೆ. ಅಂಥವರಿಗೆ ಧೈರ್ಯ ತುಂಬಲು ಹಾಗೂ ಸಾರ್ವಜನಿಕರಿಗೆ ರಕ್ಷಣೆ ಒದಗಿಸಲು ‘ಗುಡ್‌ ಮಾರ್ನಿಂಗ್‌ ಬೀದರ್’ ಯೋಜನೆ ಜಾರಿಗೆ ತರಲಾಗುತ್ತಿದೆ.

ಹೊಸ ಯೋಜನೆಯ ಪ್ರಕಾರ, ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಜತೆ ಪೊಲೀಸ್‌ ಸಬ್ ಇನ್‌ಸ್ಪೆಕ್ಟರ್‌, ಪೊಲೀಸ್‌ ಇನ್‌ಸ್ಪೆಕ್ಟರ್‌,  ಡಿವೈಎಸ್‌ಪಿ, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಹ ಬೆಳಿಗ್ಗೆ 4 ರಿಂದ 8 ಗಂಟೆಯವರೆಗೆ ಗಸ್ತು ನಡೆಸಲಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ  ಆಯಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಅನಿರೀಕ್ಷಿತ ಭೇಟಿ ನೀಡಿ,  ಬೆಳಗಿನ ಜಾವದ ಪೊಲೀಸ್‌ ಗಸ್ತು ಪರಿಶೀಲಿಸಲಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಧಿಕಾರಿ ಪ್ರಕಾಶ ನಿಕಮ್‌ ಈಗಾಗಲೇ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿ ‘ಗುಡ್‌ ಮಾರ್ನಿಂಗ್‌ ಬೀದರ್’ ಯೋಜನೆಯ ಪ್ರಸ್ತಾಪ ಮಾಡಿ ಜಿಲ್ಲೆಯ ಎಲ್ಲ ಹಂತದ ಪೊಲೀಸ್‌ ಅಧಿಕಾರಿಗಳ ಅಭಿಪ್ರಾಯ ಪಡೆದಿದ್ದಾರೆ.

ಪೊಲೀಸ್‌ ಅಧಿಕಾರಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಹೊಸ ಯೋಜನೆ ಅನುಷ್ಠಾನಗೊಳಿಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕಮ್ ಉತ್ಸುಕರಾಗಿದ್ದಾರೆ.

ಹೊಸ ವ್ಯವಸ್ಥೆಯಲ್ಲಿ ಸಾಮಾನ್ಯ ಪೊಲೀಸ್ ಸಿಬ್ಬಂದಿಯ ಮೇಲೆ ಹೆಚ್ಚು ಒತ್ತಡ ಬೀಳದಂತೆ ಯೋಜನೆ ರೂಪಿಸಲಾಗಿದೆ. ಜಿಲ್ಲಾ ಸಶಸ್ತ್ರಪಡೆಯ ಸಿಬ್ಬಂದಿಯ ನೆರವು ಪಡೆಯಲು ಉದ್ದೇಶಿಸಲಾಗಿದೆ.

ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನ ಪ್ರಮುಖ ಜನನಿಬಿಡ ಪ್ರದೇಶದಲ್ಲಿ ಸಾಮಾನ್ಯ ಪೊಲೀಸರು, ಪೊಲೀಸ್ ಠಾಣಾ ಆಧಿಕಾರಿ ಜತೆಗೆ ಡಿಎಆರ್‌ನ ಆಯ್ದ ಸಿಬ್ಬಂದಿ ಸಹ ಬೆಳಗಿನ ಜಾವ ಗಸ್ತು ನಡೆಸಲಿದ್ದಾರೆ.

ಬೆಳಗಿನ ಅವಧಿಯಲ್ಲಿ ಹೆಣ್ಣುಮಕ್ಕಳು ಟ್ಯೂಷನ್‌ಗೆ ಹೋಗುವುದರಿಂದ ಅವರಿಗೆ ರಕ್ಷಣೆ ದೊರೆಯಲಿದೆ. ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣು ಇಡಲು ಸಾಧ್ಯವಾಗಲಿದೆ. ನಿತ್ಯ ವಾಯವಿಹಾರಕ್ಕೆ ಹೋಗುವ ಹಾಗೂ ವ್ಯಾಯಾಮ ಮಾಡುವವರಿಂದ ಪೊಲೀಸರು ಸಮಸ್ಯೆಗಳನ್ನು ಅರಿತುಕೊಳ್ಳಲು ಸಾಧ್ಯವಾಗಲಿದೆ.

ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಉದ್ಯಾನ, ಪ್ರಾರ್ಥನಾ ಮಂದಿರ, ಪ್ರಮುಖ ವೃತ್ತಗಳು, ಮಹಾಪುರುಷರ ಪ್ರತಿಮೆ ಇರುವ ಸ್ಥಳ ಮತ್ತಿತರ ಅಂಶಗಳನ್ನು ಗಮನದಲ್ಲಿಕೊಂಡು ಗಸ್ತು ಕಾರ್ಯವನ್ನು ಬಿಗಿಗೊಳಿಸುವುದು ಹಾಗೂ ಸಾರ್ವಜನಿಕರಿಗೆ ರಕ್ಷಣೆ ಕೊಡುವುದು ಹೊಸ ಯೋಜನೆಯ ಮೂಲ ಉದ್ದೇಶವಾಗಿದೆ. ಜನರಲ್ಲಿ ಸುರಕ್ಷತೆ ಭಾವನೆ ಮೂಡುತ್ತದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕಮ್.

ಪೊಲೀಸರು ರಾತ್ರಿ ಪಾಳಿ ಮನೆಗೆ ಹೋಗುತ್ತಿದ್ದಂತೆಯೇ ಸರಗಳ್ಳರು ವಾಯುವಿಹಾರಕ್ಕೆ ಹೋಗುತ್ತಿದ್ದ ಮಹಿಳೆಯರ ಕೊರಳಲ್ಲಿನ ಚಿನ್ನದ ಸರ ಹಾಗೂ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು.

ಅಂತಹ ಪ್ರಕರಣಗಳಿಗೆ ಕಡಿವಾಣ ಹಾಕಲಾಗುವುದು. ಸಾರ್ವಜನಿಕರ ಸಹಕಾರ ಪಡೆದು ಭದ್ರತೆಯನ್ನು ಬಿಗಿಗೊಳಿಸಲಾಗುವುದು ಎನ್ನುತ್ತಾರೆ ಅವರು.
ಮೊದಲ ದಿನ ‘ಗುಡ್‌ ಮಾರ್ನಿಂಗ್‌ ಬೀದರ್’ ಬ್ಯಾನರ್‌ನೊಂದಿಗೆ ಪೊಲೀಸರು ಪ್ರಮುಖ ಮಾರ್ಗದಲ್ಲಿ ಗಸ್ತು ನಡೆಸುವರು.
ಗುಲಾಬಿ ಹೂವು ನೀಡಿ ವಾಯುವಿಹಾರ ಮಾಡುವವರಿಗೆ ಸ್ವಾಗತ ಕೋರುವರು. 

ಆಭರಣಗಳನ್ನು ಧರಿಸಿ ವಾಯುವಿಹಾರಕ್ಕೆ ಹೋಗದಂತೆ ಬೆಳಗಿನ ಅವಧಿಯಲ್ಲಿ ಮಹಿಳೆಯರಿಗೆ ತಿಳಿವಳಿಕೆಯನ್ನೂ ನೀಡುವರು. ಜಾಗ್ರತೆ ವಹಿಸಲು ಮಾರ್ಗದರ್ಶನ ನೀಡುವರು  ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.