ADVERTISEMENT

ಜಲಮೂಲಕ್ಕಿಲ್ಲ ಕೊರತೆ: ನಿರ್ವಹಣೆ ಸಮಸ್ಯೆ

ಜನವಾಡ: ಗ್ರಾಮಗಳಲ್ಲಿ ಸೋರಿಕೆಯಾಗುತ್ತಿರುವ ಹಳೆಯ ಪೈಪ್‌ಲೈನ್‌

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 6:53 IST
Last Updated 6 ಮಾರ್ಚ್ 2017, 6:53 IST
ನಾಗೇಶ  ಪ್ರಭಾ
ಜನವಾಡ: ಬೀದರ್ ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿ ವರ್ಷದ ಗೋಳು. ಆದರೆ, ಅತಿವೃಷ್ಟಿಯಿಂದಾಗಿ ಈ ವರ್ಷ ಫೆಬ್ರುವರಿ ಕೊನೆಗೊಳ್ಳುತ್ತ ಬಂದರೂ ತಾಲ್ಲೂಕಿನಲ್ಲಿ ತೀವ್ರ ಸ್ವರೂಪದ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ.
 
ಕಳೆದ ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದ ತಾಲ್ಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿತ್ತು. ಆದರೆ, ಕೆರೆಕಟ್ಟೆ, ತೆರೆದ ಬಾವಿಗಳಿಗೆ ನೀರು ಬಂದಿರುವ ಕಾರಣ ನೀರಿನ ಸಮಸ್ಯೆ ಆಗಿಲ್ಲ.
 
ಮಾಂಜರಾ ನದಿ, ಜನವಾಡ ಕೆರೆ, ಮರಕಲ್ ಕೆರೆ, ಸೋಲಪುರ ಕೆರೆ, ಮನ್ನಳ್ಳಿ  ಮೊದಲಾದ ಕೆರೆಗಳಲ್ಲಿ ಇನ್ನೂ ನೀರಿದೆ. ಸುತ್ತಮುತ್ತಲಿನ ಪ್ರದೇಶ ಹಸಿರಾಗಿದೆ. ಬಾವಿಗಳಲ್ಲೂ ನೀರಿನ ಸೆಲೆ ಬತ್ತಿಲ್ಲ ಎಂದು ತಿಳಿಸುತ್ತಾರೆ ಜನ.
 
ತಾಲ್ಲೂಕಿನ ದೊಡ್ಡ  ಗ್ರಾಮಗಳಲ್ಲಿ ಒಂದಾಗಿರುವ ಜನವಾಡದಲ್ಲಿ ಈವರೆಗೂ ನೀರಿನ ಸಮಸ್ಯೆ ಎದುರಾಗಿಲ್ಲ. ತೆರೆದ ಬಾವಿ, ಕೊಳವೆಬಾವಿಗಳಲ್ಲಿ ನೀರಿದೆ ಎಂದು ತಿಳಿಸುತ್ತಾರೆ ಗ್ರಾಮದ ಮುಖಂಡ ಬಸವರಾಜ ಪನಸಾಲೆ. 
 
ಗ್ರಾಮದಲ್ಲಿ ಅಳವಡಿಸಿರುವ ಪೈಪ್‌ ಲೈನ್‌ ಹಲವು ದಶಕಗಳಷ್ಟು ಹಳೆಯದಾಗಿದೆ. ಅಲ್ಲಲ್ಲಿ ಸೋರಿಕೆ ಇದೆ. ಹೀಗಾಗಿ  ನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ.  ಹೊಸ ಪೈಪ್‌ಲೈನ್‌ ಅಳವಡಿಸಬೇಕು ಎಂದು ಬೇಡಿಕೆ ಮಂಡಿಸುತ್ತಾರೆ.
 
ನಾಲ್ಕು ವರ್ಷಗಳ ಬರದಿಂದ ಗ್ರಾಮದ ಕೆರೆ ಸಂಪೂರ್ಣ ಒಣಗಿ ಹೋಗಿತ್ತು. ಅತಿವೃಷ್ಟಿಯಿಂದ ಕೆರೆ ಒಡಲು ಸಂಪೂರ್ಣ ತುಂಬಿತ್ತು. ಕೆರೆಯಲ್ಲಿ ಈಗಲೂ ಅರ್ಧದಷ್ಟು ನೀರಿದೆ ಎಂದು ಹೇಳುತ್ತಾರೆ ಮನ್ನಳ್ಳಿಯ ಮುಖಂಡ ಅಜಮ್ ಅಲಿ.
 
ನಿರ್ವಹಣೆ ಹಾಗೂ ಪೂರೈಕೆಯಲ್ಲಿ ಕೆಲ ಕಡೆ ಸಮಸ್ಯೆ ಆಗಿರಬಹುದು. ಆದರೆ, ನೀರಿನ ಸಮಸ್ಯೆ ಉಂಟಾಗಿಲ್ಲ. ಮುಂದಿನ ಪರಿಸ್ಥಿತಿ ಹೇಗಿರಲಿದೆ ಎನ್ನುವುದನ್ನು ಈಗಲೇ ಹೇಳಲು ಆಗುವುದಿಲ್ಲ ಎಂದು ತಿಳಿಸುತ್ತಾರೆ.
 
ಗ್ರಾಮದ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಹೊಸ ಕ್ರಿಶ್ಚಿಯನ್ ಓಣಿಯಲ್ಲಿ ಪೈಪ್‌ಲೈನ್‌ ಹಾಗೂ ಕಿರು ನೀರು ಸಂಗ್ರಹ ಟ್ಯಾಂಕ್‌ ಆಳವಡಿಸದ ಕಾರಣ ಜನ ನೀರಿಗಾಗಿ ಅಲೆದಾಡಬೇಕಾಗಿದೆ ಎಂದು ಚಿಲ್ಲರ್ಗಿ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಚಿಲ್ಲರ್ಗಿ ಹೇಳುತ್ತಾರೆ.
 
ಗ್ರಾಮದಲ್ಲಿ ಪ್ರತಿ ವರ್ಷ ನೀರಿನ ಸಮಸ್ಯೆ ಉದ್ಭವಿಸುತ್ತಿತ್ತು. ಅತಿವೃಷ್ಟಿಯಿಂದ ಅಂತರ್ಜಲಮಟ್ಟ ಸುಧಾರಣೆಯಾಗಿದೆ. ಈ ವರ್ಷ ಮಾಂಜರಾ ನದಿ, ತೆರೆದ ಬಾವಿ ಹಾಗೂ ಕೊಳವೆ ಬಾವಿಗಳಲ್ಲಿ ನೀರಿದೆ. ಈವರೆಗೆ ಜನರಿಗೆ ಕಳೆದ ವರ್ಷದಷ್ಟು ನೀರಿನ ಸಮಸ್ಯೆ ಬಿಸಿ ತಟ್ಟಿಲ್ಲ ಎಂದು ಹೇಳುತ್ತಾರೆ ಯರನಳ್ಳಿ ಗ್ರಾಮದ ಕಲ್ಲಪ್ಪ ಹಾಸಗೊಂಡ. 
 
ಬೀದರ್ ತಾಲ್ಲೂಕು ವ್ಯಾಪ್ತಿಯ ಯಾವ ಗ್ರಾಮದಲ್ಲೂ ಈವರೆಗೆ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ.  ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಎದುರಾದಲ್ಲಿ ಅದನ್ನು ಪರಿಹರಿಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಿದೆ ಎಂದು ತಹಶೀಲ್ದಾರ್ ಜಗನ್ನಾಥ ರೆಡ್ಡಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.