ADVERTISEMENT

ಜಾತಿ ನಿರ್ಮೂಲನೆಯ ಶಿಕ್ಷಣ ಕೊಡಿ: ಮೇಧಾ

ವಚನ ವಿಜಯೋತ್ಸವದ ಸಮಾರೋಪ; ‘ಜಗನ್ಮಾತೆ ಅಕ್ಕಮಹಾದೇವಿ ಪುರಸ್ಕಾರ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 11:06 IST
Last Updated 12 ಫೆಬ್ರುವರಿ 2017, 11:06 IST
ಬೀದರ್‌ನ ಬಸವಗಿರಿಯಲ್ಲಿ ಶನಿವಾರ ವಚನ ವಿಯೋತ್ಸವದ ಪ್ರಯುಕ್ತ ತೆರೆದ ಮಾರಾಟ ಮಳಿಗೆಯಲ್ಲಿ ಪುಸ್ತಕ ಖರೀದಿಸಿದ ಮಹಿಳೆಯರು
ಬೀದರ್‌ನ ಬಸವಗಿರಿಯಲ್ಲಿ ಶನಿವಾರ ವಚನ ವಿಯೋತ್ಸವದ ಪ್ರಯುಕ್ತ ತೆರೆದ ಮಾರಾಟ ಮಳಿಗೆಯಲ್ಲಿ ಪುಸ್ತಕ ಖರೀದಿಸಿದ ಮಹಿಳೆಯರು   

ಬೀದರ್: ಪುರೋಹಿತ ಹಾಗೂ ಅಧಿಕಾರಶಾಹಿಗಳ ಕಪಿಮುಷ್ಠಿಯಿಂದ ಸಮಾಜವನ್ನು ಮುಕ್ತಗೊಳಿಸುವ ದಿಸೆಯಲ್ಲಿ ಇಂದಿನ ಪೀಳಿಗೆಗೆ ಜಾತಿ ನಿರ್ಮೂಲನೆಯ ಶಿಕ್ಷಣ ಕೊಡುವ ಅಗತ್ಯವಿದೆ ಎಂದು ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಹೇಳಿದರು.

ಇಲ್ಲಿಯ ಬಸವಗಿರಿಯಲ್ಲಿ ಶನಿವಾರ ನಡೆದ ವಚನ ವಿಜಯೋತ್ಸವದ ಸಮಾರೋಪ ಸಮಾರಂಭದಲ್ಲಿ ಬಸವ ಸೇವಾ ಪ್ರತಿಷ್ಠಾನದಿಂದ ‘ಜಗನ್ಮಾತೆ ಅಕ್ಕಮಹಾದೇವಿ ಪುರಸ್ಕಾರ’ ಸ್ವೀಕರಿಸಿ ಅವರು ಮತಾನಾಡಿದರು.

ಸಂಶೋಧಕ ಎಂ.ಎಂ. ಕಲಬುರ್ಗಿ ಹಾಗೂ ಮಹಾರಾಷ್ಟ್ರದ ನರೇಂದ್ರ ದಾಬೋಲ್ಕರ್ ಅವರು ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರ ಹಾಗೂ ಜಾತಿ ತಾರತಮ್ಯಗಳ ವಿರುದ್ಧ  ಧ್ವನಿ ಎತ್ತಿ ಸತ್ಯವನ್ನು ಪ್ರತಿಪಾದಿಸಿದ್ದಕ್ಕೆ ಅವರ ಹತ್ಯೆ ನಡೆಯಿತು. ಬಸವಣ್ಣ ಅವರನ್ನೂ ಇದೇ ಕಾರಣಕ್ಕೆ ಹತ್ಯೆ ಮಾಡಲಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.

ಬಸವಣ್ಣನ ಅನುಯಾಯಿಗಳು ತಮ್ಮ ಮನೆಯಲ್ಲಿ ಕೆಲಸ ಮಾಡುವವರಿಗೆ ಪ್ರತ್ಯೇಕ ಕಪ್ಪುಬಸಿ ಇಟ್ಟು ಜಾತಿ ವ್ಯವಸ್ಥೆಯನ್ನು ಪೋಷಿಸಿಕೊಂಡು ಬಂದರೆ ಬಸವಣ್ಣನ ತತ್ವಗಳು ಅನುಷ್ಠಾನಕ್ಕೆ ಬರಲು ಸಾಧ್ಯವಿಲ್ಲ. ಬಸವಣ್ಣನ ಪ್ರತಿಯೊಂದು ವಚನದಲ್ಲೂ ಕ್ರಾಂತಿಕಾರಕ ವಿಚಾರಗಳಿವೆ. ಅವುಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.

ಇಂದಿನ ಪೀಳಿಗೆಗೆ ಒಬಾಮಾ ಯಾರು ಗೊತ್ತಿದೆ. ಆದರೆ ಬಾಬಾಸಾಹೇಬ ಅಂಬೇಡ್ಕರ್, ಮಹಾತ್ಮ ಜ್ಯೋತಿಬಾ ಫುಲೆ, ಜಯಪ್ರಕಾಶ ನಾರಾಯಣ, ರಾಂಮನೋಹರ ಲೋಹಿಯಾ ಯಾರು ಗೊತ್ತಿಲ್ಲ. ಹೀಗಾಗಿ ಜಾತಿ ತಾರತಮ್ಯಗಳ ವಿರುದ್ಧ ನಡೆಸಿದ ಹೋರಾಟಗಳು ಪರಿಪೂರ್ಣಗೊಂಡಿಲ್ಲ. ಬಸವಣ್ಣನ ವಚನಗಳನ್ನು ಪಾಲಿಸುವ ಮೂಲಕ ಹೋರಾಟ ಮುಂದುವರಿಸಬೇಕಿದೆ ಎಂದು ತಿಳಿಸಿದರು.

ಬಿಹಾರದಲ್ಲಿ ಮದ್ಯ ನಿಷೇಧ ಸಾಧ್ಯವಾಗಿದೆ. ಕರ್ನಾಟಕದಲ್ಲೂ ಮದ್ಯ ನಿಷೇಧ ಮಾಡಬೇಕು. ಸಾಮಾಜಿಕ ಶಕ್ತಿ ಬಲಗೊಂಡರೆ ರಾಜಕೀಯ ಶಕ್ತಿಯನ್ನು ಮಣಿಸಲು ಸಾಧ್ಯವಿದೆ. ಆದ್ದರಿಂದ ಮಾದಕ ದ್ರವ್ಯ ಹಾಗೂ ಮದ್ಯ ವ್ಯಸನ ಮುಕ್ತ ಭಾರತಕ್ಕೆ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ಹಾಗೂ ಕಾರ್ಯದರ್ಶಿ ಡಾ. ಗಂಗಾಬಿಕೆ ಪಾಟೀಲ ಅವರು ಜಂಟಿಯಾಗಿ  ಮೇಧಾ ಪಾಟ್ಕರ್‌ ಅವರಿಗೆ ‘ಜಗನ್ಮಾತೆ ಅಕ್ಕಮಹಾದೇವಿ ಪುರಸ್ಕಾರ’ ಹಾಗೂ ₹ 51 ಸಾವಿರ ನಗದು ಪ್ರದಾನ ಮಾಡಿದರು.

ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಅಥಣಿ ಮೋಟಗಿ ಮಠದ ಪ್ರಭುಚೆನ್ನಬಸವ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂಖಾನ್‌, ಸಂಸದ ಭಗವಂತ ಖೂಬಾ ಉಪಸ್ಥಿತರಿದ್ದರು.

‘ಜಾತಿ ಪೋಷಿಸಿದರೆ ತತ್ವಜ್ಞಾನದ ಸೋಲು’

ADVERTISEMENT

ಬೀದರ್:  ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನ ಭಾವಚಿತ್ರ ಇಟ್ಟರೆ ಸಾಲದು. ಅವರು ಪ್ರತಿಪಾದಿಸಿದ ತತ್ವಗಳನ್ನು ಆಚರಣೆಯಲ್ಲಿ ತರುವ ಮೂಲಕ ಬಸವ ಧರ್ಮದ ಪಾಲನೆ ಮಾಡಬೇಕು ಎಂದು ನರ್ಮದಾ ಬಚಾವೋ ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಕರೆ ನೀಡಿದರು.

ಇಲ್ಲಿಯ ಬಸವಗಿರಿಯಲ್ಲಿ ಶನಿವಾರ ನಡೆದ ವಚನ ವಿಜಯೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾವಚಿತ್ರ ಇಟ್ಟು ಪೂಜೆ ಮಾಡಲು ಬಸವಣ್ಣ ಧರ್ಮ ಸ್ಥಾಪನೆ ಮಾಡಿಲ್ಲ. ಆದರೆ ಬಸವಣ್ಣನ ಅನುಯಾಯಿಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಬಸವಣ್ಣನ ತತ್ವದ ಪ್ರಚಾರ ಆಗಬೇಕು.

ಜಾತಿಯನ್ನು ಬದಿಗೊತ್ತದಿದ್ದರೆ ತತ್ವಜ್ಞಾನದ ಸೋಲು ಆಗಲಿದೆ ಎಂದು ಎಚ್ಚರಿಸಿದರು. ಬುದ್ಧ, ಪೈಗಂಬರ್‌ ಅವರ ಸಂದೇಶಗಳಲ್ಲೂ ಮನುಕುಲದ ಮೌಲ್ಯಗಳ ಪ್ರತಿಪಾದನೆ ಇದೆ. ಪ್ರಸ್ತುತ ಜಾತಿ ವ್ಯವಸ್ಥೆ ಜಡ್ಡುಗಟ್ಟಿದೆ.  ಹಣ ಹಾಗೂ ಅಧಿಕಾರದ ಮದ ಹೆಚ್ಚಾಗಿದೆ. ರಾಜಕೀಯ ಇಚ್ಛಾಶಕ್ತಿಯ ಮುಂದೆ ಏನೂ ನಡೆಯದಾಗಿದೆ. ಹೀಗಾಗಿ ಸಾಮಾಜಿಕ ಇಚ್ಛಾಶಕ್ತಿ ಬಲಗೊಳ್ಳಬೇಕಿದೆ ಎಂದು ಹೇಳಿದರು.

ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ ಜನರಿಗೆ ಕುಡಿಯಲು ನೀರು ಇಲ್ಲದಿದ್ದಾಗಲೂ ಫ್ಯಾಕ್ಟರಿಗಳಿಗೆ ಎಲ್ಲಿಂದ ನೀರು ಸರಬರಾಜು ಆಗುತ್ತದೆ. ಇದನ್ನು  ಪ್ರಶ್ನಿಸುವವರೇ ಇಲ್ಲವಾಗಿದ್ದಾರೆ. ಮದ್ಯ ಸೇವನೆಯಿಂದ ಕೆಳ ವರ್ಗದವರ ಬದುಕು ಶೋಚನೀಯವಾಗಿದೆ. ನರ್ಮದಾ ನದಿಗೆ ಅಣೆಕಟ್ಟು ಕಟ್ಟಿದ ಮೇಲೆ ನರ್ಮದಾ ಸತ್ತಿದ್ದಾಳೆ. ರೈತರಿಂದ ನೀರು ಖರೀದಿಸಿ ₹ 12 ಗೆ ಲೀಟರ್‌ನಂತೆ ಮಾರಾಟ ಮಾಡುತ್ತಿದ್ದಾರೆ.

ಹೋರಾಟದ ಫಲವಾಗಿ ರೈತರಿಗೆ ಪರಿಹಾರ ದೊರೆಯಿತು. ಆದರೆ ಕೃಷಿ ಭೂಮಿ, ವೃಕ್ಷ ಸಂಪತ್ತು ನೀರು ಪಾಲಾದವು. ಕೃಷಿ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳ ಬದುಕು ಕಮರಿ ಹೋಯಿತು. ಕಾಯಕವನ್ನು ನಂಬಿದ್ದ ಜನ ಬೀದಿಗೆ ಬಂದರು ಎಂದು ವಿಷಾದ ವ್ಯಕ್ತಪಡಿಸಿದರು. ರೈತರಿಗೆ ಪರಿಹಾರ ಕೊಟ್ಟರೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂದು ಭಾವಿಸುವುದು ಸರಿಯಲ್ಲ. ಬದುಕಿಗೆ ಬೆಲೆ ಕಟ್ಟಲಾಗದು ಎಂದರು.

ಅಕ್ಕ ಮಹಾದೇವಿ ಹೆಸರಲ್ಲಿ ಪುರಸ್ಕಾರ ಪಡೆದಿದ್ದಕ್ಕೆ ನನಗೆ ಮಹಾತ್ಮ ಗಾಂಧಿ, ಬಾಬಾಸಾಹೇಬ ಅಂಬೇಡ್ಕರ್ ಹೆಸರಲ್ಲಿ ಪ್ರಶಸ್ತಿ ಪಡೆದಷ್ಟೇ ಖುಷಿಯಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕ  ಶೋಷಣೆ ಹಾಗೂ ಜಾತಿ ವ್ಯವಸ್ಥೆ  ವಿರುದ್ಧ ಹೋರಾಟ ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಅಥಣಿ ಮೋಟಗಿ ಮಠದ ಪ್ರಭುಚೆನ್ನಬಸವ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಅನ್ನಪೂರ್ಣ ಹಾಗೂ ಡಾ. ಗಂಗಾಂಬಿಕೆ ಪಾಟೀಲ ನೇತೃತ್ವ ವಹಿಸಿದ್ದರು. ಉದ್ಯಮಿ ಬಸವರಾಜ ಧನ್ನೂರ ಅಧ್ಯಕ್ಷತೆ ವಹಿಸಿದ್ದರು.  

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂಖಾನ್‌, ಸಂಸದ ಭಗವಂತ ಖೂಬಾ, ಶಾಸಕ ಬಿ.ಆರ್‌. ಪಾಟೀಲ, ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಜಯರಾಜ್ ಖಂಡ್ರೆ, ಶಾಂತಾ ಖಂಡ್ರೆ, ಗುತ್ತಿಗೆದಾರ ಗುರುನಾಥ ಕೊಳ್ಳೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ವಿಜಯಶ್ರೀ ಬಶೆಟ್ಟಿ  ಉಪಸ್ಥಿತರಿದ್ದರು. ರಮೇಶ ಮಠಪತಿ ನಿರೂಪಣೆ ಮಾಡಿದರು.

ಬಿಹಾರ ಮಾದರಿಯಲ್ಲಿ ಕರ್ನಾಟಕದಲ್ಲೂ ಮದ್ಯ ನಿಷೇಧಿಸಬೇಕಿದೆ. ನಶೆ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರು ಪ್ರಯತ್ನಿಸಬೇಕು.
ಮೇಧಾ ಪಾಟ್ಕರ್‌, ಹೋರಾಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.