ADVERTISEMENT

ನಲಿ–ಕಲಿ ಪದ್ಧತಿ ಪರಿಣಾಮಕಾರಿ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 6:04 IST
Last Updated 11 ಜನವರಿ 2017, 6:04 IST

ಭಾಲ್ಕಿ: ಶಾಲೆಯಲ್ಲಿ ಹಲವು ಸಮಸ್ಯೆಗಳಿವೆ. ಅವುಗಳ ನಡುವೆಯೇ ಮಕ್ಕಳ ಪ್ರಗತಿಗೆ ಪೂರಕವಾದ ನಲಿ–ಕಲಿ ಪದ್ಧತಿಯ ಪರಿಣಾಮಕಾರಿ ಅನುಷ್ಠಾನ ಅಹಮದಾಬಾದ್‌ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಲಾಗಿದೆ.

ಶಾಲೆ ತಾಲ್ಲೂಕು ಕೇಂದ್ರದಿಂದ 14 ಕಿ.ಮೀ ದೂರದಲ್ಲಿದೆ. ಮಾಹಾತ್ಮ ಗಾಂಧೀಜಿ ತತ್ವದ ಅಕ್ಷರಶಃ ಪಾಲನೆ ಆಗುತ್ತಿದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳ ವಯಸ್ಸಿಗೆ ಮೀರಿದ ಭಾರವನ್ನು ಹೊರುವ ಶಾಲಾ ಬ್ಯಾಗ್‌ನ್ನು ಹೊತ್ತು ಶಾಲೆಗೆ ಬರುವಷ್ಟರಲ್ಲಿ ಮಕ್ಕಳು ಸುಸ್ತಾಗುತ್ತಾರೆ. ಹೀಗಾಗಿ ಶಾಲೆಗಳು ಮಕ್ಕಳನ್ನು ಅವರ ಸ್ವಆಸಕ್ತಿಯಿಂದ ತಮ್ಮತ್ತ ಸೆಳೆಯುವಲ್ಲಿ ಹೆಚ್ಚು ಕಡಿಮೆ ವಿಫಲವಾಗುತ್ತಿವೆ ಎಂಬ ಮಾತು ಪ್ರಚಲಿತದಲ್ಲಿದೆ.

ಆದರೆ, ಇದಕ್ಕೆ ಅಪವಾದ ಎಂಬಂತೆ ಈ ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ವಿಭಿನ್ನ ರೀತಿಯ ಶಿಕ್ಷಣ ನೀಡುತ್ತಾರೆ. ಪುಸ್ತಕ ಭಾರವನ್ನು ಹೊರದೆ ಸಂತಸ, ಸ್ವ–ವೇಗ, ಬಹುವರ್ಗದ, ಬಹುಹಂತದ ಕಲಿಕೆ, ಸ್ವಕಲಿಕೆ ಎಂಬ ಐದು ತತ್ವಗಳನ್ನು ಆಧಾರವಾಗಿಸಿಕೊಂಡು  ಗುಣಾತ್ಮಕ ಶಿಕ್ಷಣ ಕೊಡಲಾಗುತ್ತದೆ. ನಲಿ–ಕಲಿ ಪದ್ಧತಿಯನ್ನು ಅವರು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದಾರೆ.

ಕನ್ನಡ ಮಾಧ್ಯಮ ವಿಭಾಗದಲ್ಲಿ 1ರಿಂದ 5ನೇ ವರ್ಗದವರೆಗೆ 24, ಮರಾಠಿ ಮಾಧ್ಯಮದಲ್ಲಿ 13 ಸೇರಿದಂತೆ ಒಟ್ಟು 37 ಮಕ್ಕಳಿದ್ದಾರೆ. ನಲಿ–ಕಲಿಯಲ್ಲಿ 12 ಮಕ್ಕಳು ಇದ್ದಾರೆ. ನಲಿ–ಕಲಿ ಶಿಶು ಮತ್ತು ಶಿಕ್ಷಕ ಸ್ನೇಹಿಯಾಗಿದೆ. ಮಕ್ಕಳ ಚಟುವಟಿಕೆ ಆಧರಿಸಿ  ಅವರ ಕಲಿಕಾ ವೇಗಕ್ಕೆ ಅನುಗುಣವಾಗಿ ಕಲಿಸಲು ಇದು ಸಹಕಾರಿಯಾಗಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ರಮೇಶ ಮೇತ್ರೆ.

ಕೊನೆಗಾಣದ ಸಮಸ್ಯೆಗಳು: ಶಾಲೆಯಲ್ಲಿ ಮಕ್ಕಳಿಗೆ ಆಟವಾಡಲು ಮೈದಾನವಿಲ್ಲ. ಶಿಥಿಲಗೊಂಡ ವರ್ಗಕೋಣೆ ಆವರಣದಲ್ಲಿಯೇ ಇರುವುದರಿಂದ ಮಕ್ಕಳು ಭಯದಲ್ಲಿ ಕಲಿಯುವಂತಾಗಿದೆ. ಇದರ ಪಕ್ಕಕ್ಕೆ ಅಂಗನವಾಡಿ ಕೇಂದ್ರವಿದೆ. ಇರುವ ಎರಡು ಶೌಚಾಲಯಗಳು ನೀರಿನ ಸಮಸ್ಯೆ, ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿವೆ. ಶಾಲೆ ಸುತ್ತ ಕಾಂಪೌಂಡ್‌ ಇರದಿರುವ ಕಾರಣ ನಾಯಿ, ದನಗಳು ಶಾಲೆಯನ್ನು ಆಶ್ರಯ ತಾಣವನ್ನಾಗಿಸಿಕೊಂಡಿವೆ. ಎರಡು ವರ್ಷದಿಂದ ಶಾಲೆಯಲ್ಲಿ ಎಸ್‌ಡಿಎಂಸಿ ರಚನೆ ಆಗಿಲ್ಲ.

ಹಾಗಾಗಿ, ಅಭಿವೃದ್ಧಿ ಕಾರ್ಯಗಳಿಗೆ ಹಣ (₹ 87 ಸಾವಿರ) ಬಂದರೂ ಬಳಕೆಯಾಗದೆ ವಾಪಸಾಗುತ್ತಿದೆ. ಶಾಲೆ ಮುಂಭಾಗದ ಸ್ಥಳ ಸಂಬಂಧ ಖಾಸಗಿ ವ್ಯಕ್ತಿಯೊಂದಿಗೆ ತಕರಾರು ನಡೆಯುತ್ತಿದೆ. ಈ ಸಂಬಂಧ ಶಾಲೆಗೆ ಹಿರಿಯ ಅಧಿಕಾರಿಗಳು ಬಂದು ಹೋದರು ಸಮಸ್ಯೆ ಬಗೆ ಹರಿದಿಲ್ಲ. ಜಾಗದ ತಕರಾರು, ಎಸ್‌ಡಿಎಂಸಿ ರಚಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನಾಲ್ಕು ಮನವಿ ಪತ್ರ ಸಲ್ಲಿಸಲಾಗಿದೆ. ಆದರೂ, ಇಲ್ಲಿಯವರೆಗೆ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಸಿಬ್ಬಂದಿ ವರ್ಗ.
ಶಾಲೆಯ ಸಮಸ್ಯೆಗಳನ್ನು ತ್ವರಿತವಾಗಿ ಬಗೆ ಹರಿಸಬೇಕು. ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು  ಪಾಲಕರು ಆಗ್ರಹಿಸುತ್ತಾರೆ.
ಬಸವರಾಜ ಎಸ್.ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.