ADVERTISEMENT

ಪರಸ್ಪರ ಪ್ರೀತಿ, ವಿಶ್ವಾಸ ಅಗತ್ಯ: ಖಾನ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 8:18 IST
Last Updated 16 ಜನವರಿ 2017, 8:18 IST
ಪರಸ್ಪರ ಪ್ರೀತಿ, ವಿಶ್ವಾಸ ಅಗತ್ಯ: ಖಾನ್
ಪರಸ್ಪರ ಪ್ರೀತಿ, ವಿಶ್ವಾಸ ಅಗತ್ಯ: ಖಾನ್   

ಬೀದರ್: ಮುಸ್ಲಿಮರು ಇತರೆ ಧರ್ಮದ ವರೊಂದಿಗೆ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಬಾಳ್ವೆಯಿಂದ ಬದುಕುವ ಮೂಲಕ ಕೋಮು ಸೌಹಾರ್ದ ರಾಷ್ಟ್ರ ನಿರ್ಮಿಸಲು ಶ್ರಮಿಸಬೇಕು ಎಂದು ರಾಜ್ಯಸಭಾ ಮಾಜಿ ಸಂಸದ ಮೌಲಾನಾ ಉಬೆದುಲ್ಲಾ ಖಾನ್‌ ಆಜ್ಮಿ ತಿಳಿಸಿದರು.

ಸಮುದಾಯ ಸಂಪರ್ಕ ಸಮಿತಿ ಜಿಲ್ಲಾ ಘಟಕ ವತಿಯಿಂದ ನಗರದ ಚೌಬಾರಾ ಸಮೀಪದ ಜಾಮಾ ಮಸೀದಿಯಲ್ಲಿ ಭಾನುವಾರ ನಡೆದ ಮುಸ್ಲಿಂ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೋಮು ಸಾಮರಸ್ಯ ವಾತಾವರಣ ನಿರ್ಮಾಣವಾದಾಗ ಮಾತ್ರ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬಹುದು. ಇದರಿಂದ ರಾಷ್ಟ್ರದ ರಕ್ಷಣೆ ಮಾಡಲು ಅನುಕೂಲ. ದ್ವೇಷ ಮನೋಭಾವದಿಂದ ಏನೂ ಸಾಧನೆ ಮಾಡಲಾಗದು ಎಂದರು.

ಪ್ರತಿಯೊಬ್ಬರು ಐಕ್ಯತೆಯಿಂದ ಜೀವನ ನಡೆಸಬೇಕು ಎಂಬುದು ಮುಸ್ಲಿಂ ಧರ್ಮದ ಮುಖ್ಯ ಧ್ಯೇಯ. ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಮೆಕ್ಕಾದಿಂದ ಮದೀನಾಕ್ಕೆ ವಲಸೆ ಬಂದ ಸಂದರ್ಭದಲ್ಲಿ ತಮ್ಮ ರಾಜ್ಯದ ರಕ್ಷಣೆ ಮಾಡುವುದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಹಾಗೂ ಪರಸ್ಪರ ಸಹಕಾರ ಮನೋಭಾವದಿಂದ ಇರೋಣ ಎಂದು ಇತರೆ ಧರ್ಮದವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂದು ತಿಳಿಸಿದರು.

ಎಲ್ಲರೂ ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಒಳ್ಳೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಮಾಜಕ್ಕೆ ಕೆಡುಕು ಉಂಟು ಮಾಡುವಂಥ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದು ಎಂದು ಬೆಂಗಳೂರಿನ ಹಜರತ್‌ ಮೌಲಾನಾ ಮಕ್ಸೂದ್‌ ಇಮ್ರಾನ್‌ ಸಾಹೇಬ ರಶಾದಿ ಸಲಹೆ ಮಾಡಿದರು.

ಮುಸ್ಲಿಂ ಬಾಂಧವರು ಇತರೆ ಧರ್ಮದವರೊಂದಿಗೆ ಸಹಬಾಳ್ವೆ, ಸೌಹಾರ್ದದಿಂದ ಇರಬೇಕು. ಈ ಮೂಲಕ ನಮ್ಮ ಧರ್ಮದ ಹಾಗೂ ರಾಷ್ಟ್ರದ ರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಜಮಾತೆ ಇಸ್ಲಾಮಿ ಹಿಂದ್‌ ರಾಜ್ಯ ಘಟಕದ ಅಧ್ಯಕ್ಷ ಮಹಮ್ಮದ್‌ ಅಥರುಲ್ಲಾಹ್‌ ಷರೀಫ್‌ ಸಾಹೇಬ ಮಾತನಾಡಿದರು. ಸಮುದಾಯ ಸಂಪರ್ಕ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ  ಮೌಲಾನಾ ಸೈಯದ್‌ ಅಬ್ದುಲ್‌ ವಹೀದ್‌ ಕಾಸ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಹಿನ್‌ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್‌ ಖದೀರ್‌, ಪ್ರಮುಖರಾದ ಮಹಮ್ಮದ್‌ ರಫೀಕ್‌ ಅಹಮ್ಮದ್‌ ಸಾಬ ಮತ್ತಿತರರು ಉಪಸ್ಥಿತರಿದ್ದರು. ಸಮುದಾಯ ಸಂಪರ್ಕ ಸಮಿತಿಯ ಕಾರ್ಯದರ್ಶಿ ಮಹಮ್ಮದ್‌ ಆಸಿಫೊದ್ದೀನ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.