ADVERTISEMENT

ಪ್ರತಿ ಮತದಾರರ ಗುರುತಿಸಲು ಸಲಹೆ

ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 5:23 IST
Last Updated 17 ಏಪ್ರಿಲ್ 2017, 5:23 IST
ಔರಾದ್: ಇಲ್ಲಿನ ಅಮರೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಒಂದು ದಿನದ ಕಾರ್ಯಾಗಾರ ನಡೆಯಿತು.
 
ಪಕ್ಷದ ತಾಲ್ಲೂಕು ಉಸ್ತುವಾರಿ ಜಯಕುಮಾರ ಕಾಂಗೆ ಮಾತನಾಡಿ, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಕಾರ್ಯಕರ್ತರು ಕ್ರಿಯಾಶೀಲರಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಪಕ್ಷ ವಹಿಸಿದ ಜವಾಬ್ದಾರಿಗೆ ಚ್ಯುತಿ ಬಾರದಂತೆ ಪ್ರಾಮಾಣಿವಾಗಿ ಕೆಲಸ ಮಾಡುವಂತೆ ಅವರು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು. 
 
ಶಾಸಕ ಪ್ರಭು ಚವಾಣ್ ಮಾತನಾಡಿ, ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಸರ್ಕಾರ ಇದ್ದರೂ ತಾಲ್ಲೂಕಿನ ಜನರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಿಕೊಡಲು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.
 
ಕಾರ್ಯಕರ್ತರಿಂದಲೇ ಪಕ್ಷ ಬೆಳೆಯುತ್ತದೆ. ಹೀಗಾಗಿ ಪಕ್ಷದ ಮುಖಂಡರು ಕಾರ್ಯಕರ್ತರನ್ನು ಕಡೆಗಣಿಸಬಾರದು. ತಾಲ್ಲೂಕಿನಲ್ಲಿ ಪಕ್ಷದ ಯುವ ಕಾರ್ಯಕರ್ತರ ಪಡೆ ಚುನಾವಣೆ ಎದುರಿಸಲು ಸಿದ್ಧವಾಗಿದೆ ಎಂದು ಹೇಳಿದರು. 
 
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ  ಬಂಡೆಪ್ಪ ಕಂಟೆ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 240 ಬೂತ್‌ಗಳಿವೆ. ಪ್ರತಿ ಬೂತ್‌ಗೆ 12 ಯುವ ಕಾರ್ಯಕರ್ತರ ಪಡೆ ನೇಮಕ ಮಾಡಲಾಗಿದೆ.
 
ಅವರು ತಮ್ಮ ತಮ್ಮ ಬೂತ್‌ಗಳಲ್ಲಿ ಹೊಸ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು. ಬೋಗಸ್ ಮತದಾರರ ಹೆಸರು ಸೇರ್ಪಡೆಯಾಗದಂತೆ ನೋಡಿಕೊಳ್ಳಬೇಕು. ಬೂತ್‌ನಲ್ಲಿರುವ ಪ್ರತಿ ಮತದಾರರನ್ನು ಗುರುತಿಸುವ ಕೆಲಸ ಆಗಬೇಕು ಎಂದು ಹೇಳಿದರು.
 
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರಸಿಂಗ್ ಠಾಕೂರ್‌ ಮಾತನಾಡಿ, ಬರಲಿರುವ ವಿಧಾನಸಭೆ ಚುನಾವಣೆ ಸವಾಲಾಗಿ ಸ್ವೀಕರಿಸಬೇಕು. ಪಕ್ಷದ ಕೇಂದ್ರ ಚುನಾವಣಾ ಸಮಿತಿ ಪ್ರತಿ ವಿಧಾನಸಭೆ ಮೇಲೆ ಕಣ್ಣಿಟ್ಟು ನೋಡುತ್ತಿದೆ ಎಂದು ಹೇಳಿದರು. 
 
ಜಿಲ್ಲಾ ಪಂಚಾಯಿತಿ ಸದಸ್ಯ ಮಾರುತಿ ಚವಾಣ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಸಚಿನ್ ರಾಠೋಡ, ಮಾಣಿಕ ಚವಾಣ್, ಸುರೇಶ ಭೋಸ್ಲೆ, ಪ್ರಕಾಶ ಅಲ್ಮಾಜೆ, ಅಶೋಕ ಅಲ್ಮಾಜೆ, ನಾಗೇಶ ಪತ್ರೆ, ಬಸವರಾಜ ಹಳ್ಳೆ, ಬಂಟಿ ದರಬಾರೆ, ಶರಣಬಸವ ಸಾವಳೆ, ಶಿವಾಜಿ ಚವಾಣ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.