ADVERTISEMENT

ಮಾಧ್ಯಮಗಳು ದುರ್ಬಲರ ದನಿಯಾಗಲಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 4:54 IST
Last Updated 17 ಜುಲೈ 2017, 4:54 IST

ಬಸವಕಲ್ಯಾಣ: ‘ಗ್ರಾಮೀಣ ಭಾಗದ ಸುದ್ದಿಗಳಿಗೆ ಪತ್ರಿಕೆಗಳು ಆದ್ಯತೆ ನೀಡಿ ಸರ್ಕಾರದ ಕಣ್ಣು ತೆರೆಸುತ್ತಿರುವ ಕಾರಣ ನಾನಾ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರಕುತ್ತಿದೆ’ ಎಂದು ಹಾರಕೂಡ ಚನ್ನವೀರ ಶಿವಾಚಾರ್ಯರು ನುಡಿದರು.

ತಾಲ್ಲೂಕಿನ ಹಾರಕೂಡದ ಹಿರೇಮಠದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಜನರಿಗೆ ಸ್ಥಳೀಯ ಪ್ರದೇಶಗಳ ಐತಿಹಾಸಿಕ ಮಹತ್ವ ತಿಳಿಸಬೇಕು. ಅನ್ಯಾಯಕ್ಕೆ ಒಳಗಾದವರ ಮತ್ತು ದುರ್ಬಲರ ಬಗ್ಗೆ ಧ್ವನಿ ಎತ್ತಬೇಕಾದ ಕರ್ತವ್ಯ ಪತ್ರಕರ್ತರದ್ದಾಗಿದೆ. ತಾರತಮ್ಯ ಮಾಡದೆ, ಪೂರ್ವಾಗ್ರಹ ಪೀಡಿತರಾಗದೆ ಸುದ್ದಿ ಪ್ರಕಟಿಸಬೇಕು. ಸ್ವತಂತ್ರ ಮನೋಧರ್ಮವನ್ನು ಬೆಳೆಸಿಕೊಳ್ಳಬೇಕು. ಪ್ರಜ್ಞೆ, ವಿಶ್ವಾಸ, ನಿಷ್ಠೆ ಬೆಳೆಸಿಕೊಂಡವರು ಉತ್ತಮ ಪತ್ರಕರ್ತರಾಗಲು ಸಾಧ್ಯವಿದೆ’ ಎಂದರು.

ADVERTISEMENT

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕಕುಮಾರ ಕರಂಜೆ ಮಾತನಾಡಿ, ‘ಪತ್ರಕರ್ತರು ನಿರ್ಭೀತಿಯಿಂದ ಕಾರ್ಯನಿರ್ವಹಿಸಬೇಕು. ಸಮಾಜವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡಬೇಕು. ಜನರಿಗೆ ಎಲೆಕ್ಟ್ರಾನಿಕ್‌ ಮಾಧ್ಯಮಗಳಿಗಿಂತ ಮುದ್ರಣ ಮಾಧ್ಯಮಗಳಲ್ಲಿ ಹೆಚ್ಚಿನ ಮತ್ತು ಸವಿಸ್ತಾರ ಮಾಹಿತಿ ದೊರಕುತ್ತದೆ’ ಎಂದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭುಲಿಂಗಯ್ಯ ಟಂಕಸಾಲಿಮಠ, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಶಿವರಾಜ ನರಶೆಟ್ಟಿ, ಪ್ರದೀಪ ವಾತಡೆ, ಕಲ್ಯಾಣರಾವ ಮದರಗಾಂವಕರ್ ಮಾತನಾಡಿದರು.

ಜಿಲ್ಲಾ ಘಟಕದ ಪದಾಧಿಕಾರಿಗಳಾದ ನರೇಶ ಪಾಠಕ, ಶಶಿಕಾಂತ ಬಂಬುಳಗೆ, ಶಿವಕುಮಾರ ಸ್ವಾಮಿ, ಎಂ.ಪಿ,ಮುದಾಳೆ, ಸಬ್ ಇನ್‌ಸ್ಪೆಕ್ಟರ್ ಶಿರೋಮಣಿ, ಶಿವಶರಣಪ್ಪ ಹೂಗಾರ, ಸಿದ್ರಾಮಪ್ಪ ಗುದಗೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರಾದ ಸಂಜೀವ ಮುದಗಡೆ, ಕಲ್ಯಾಣರಾವ, ವೀರಶೆಟ್ಟಿ ಬೇಲೂರ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.