ADVERTISEMENT

‘ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಒತ್ತು’

ದತ್ತಗಿರಿ ಪಬ್ಲಿಕ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 7:28 IST
Last Updated 2 ಮಾರ್ಚ್ 2017, 7:28 IST

ಬೀದರ್: ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯು ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ ಎಂದು ಅವಧೂತಗಿರಿ ಮಹಾರಾಜರು ನುಡಿದರು.
ನಗರದ ಬಸವನಗರ ಕಾಲೊನಿಯಲ್ಲಿ ಇರುವ ದತ್ತಗಿರಿ ಮಹಾರಾಜ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಸಿಬಿಎಸ್‍ಇ ಹಾಗೂ ರಾಜ್ಯಪಠ್ಯಕ್ರಮದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಂಸ್ಥೆ ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಸರಿಹೊಂದುವಂಥ ಗುಣಾತ್ಮಕ ಶಿಕ್ಷಣವನ್ನು ಒದಗಿಸುತ್ತಿದೆ. ಅದರ ಜತೆಗೆ ವಿದ್ಯಾರ್ಥಿಗಳಿಗೆ ಮಾನವೀಯ ಹಾಗೂ ನೈತಿಕ ಮೌಲ್ಯಗಳನ್ನು ಹೇಳಿಕೊಡುತ್ತಿದೆ ಎಂದು ತಿಳಿಸಿದರು.

1992 ರಲ್ಲಿ ಆರಂಭವಾದ ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆ ಈಗ ಬೆಳ್ಳಿಹಬ್ಬ ವರ್ಷದ ಸಂಭ್ರಮದಲ್ಲಿದೆ. 25 ವರ್ಷಗಳ ಹಿಂದೆ 150 ಮಕ್ಕಳಿಂದ ಪ್ರಾರಂಭವಾದ ಸಂಸ್ಥೆಯಲ್ಲಿ ಈಗ ಸಾವಿರಾರು ಮಕ್ಕಳು ಓದುತ್ತಿದ್ದಾರೆ. ದತ್ತಗಿರಿ ಮಹಾರಾಜ ಆಂಗ್ಲಮಾಧ್ಯಮ ಹಾಗೂ ಕನ್ನಡ ಮಾಧ್ಯಮ
ಶಾಲೆಯಲ್ಲಿ ಸದ್ಯ ಸುಮಾರು 2,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ರಮೇಶಕುಮಾರ ಪಾಂಡೆ ಹೇಳಿದರು.

ದತ್ತಗಿರಿ ಮಹಾರಾಜ ಪಬ್ಲಿಕ್ ಶಾಲೆ ನಗರದಲ್ಲಿ ನಾಲ್ಕು ಶಾಖೆಗಳನ್ನು ಹೊಂದಿದೆ. ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗಲು ದ್ವಿತೀಯ ಪಿಯುಸಿ ಕಾಲೇಜು, ಬಿ.ಎಡ್. ಮತ್ತಿತರ ಕೋರ್ಸ್‌ಗಳನ್ನು ಆರಂಭಿಸಿದೆ ಎಂದು ಕಾರ್ಯದರ್ಶಿ ಶಿವರಾಜ ಪಾಟೀಲ ತಿಳಿಸಿದರು.

ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು ಮುಂದಾಗಬೇಕು. ಸ್ಪರ್ಧಾತ್ಮಕ ಯುಗದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಂತೆ ಮಕ್ಕಳನ್ನು ಸಿದ್ಧಗೊಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಮಹಮ್ಮದ್ ಗುಲ್ಶಿನ್  ತಿಳಿಸಿದರು.

ಸಿಬಿಎಸ್‍ಇ ಹಾಗೂ ರಾಜ್ಯ ಪಠ್ಯಕ್ರಮದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆ ಶೇ ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸುತ್ತಿದೆ ಎಂದು ಶಾಲೆ ಪ್ರಾಚಾರ್ಯೆ ಮಹಾದೇವಿ ಬೀದೆ ಹೇಳಿದರು.

ಎಸ್ಸೆಸ್ಸೆಲ್ಸಿಯ ಅನೇಕ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಡಾ. ಸಿದ್ಧೇಶ್ವರ ಮಹಾರಾಜ, ಚೈತನ್ಯ ಗ್ರೂಪ್ ಆಫ್ ಇನ್ಸ್‌ಟಿಟ್ಯೂಷನ್ಸ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖರ, ಸಹಾಯಕ ಪ್ರಾಧ್ಯಾಪಕ ವಿ.ಜಿ. ಗಣೂರೆ, ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ರಮೇಶ ಜಿ. ದುಕಾನದಾರ, ಕನ್ನಡ ಮಾಧ್ಯಮ ಶಾಲೆ ಪ್ರಾಚಾರ್ಯೆ ಜಯದೇವಿ ಯದಲಾಪುರೆ ಉಪಸ್ಥಿತರಿದ್ದರು. ಅರುಣಾದೇವಿ ಲಕ್ಕಾ ನಿರೂಪಿಸಿದರು. ಸ್ನೇಹಲತಾ ಸಿ. ಸ್ವಾಗತಿಸಿದರು. ಧನರಾಜ ವಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.