ADVERTISEMENT

ಆಸ್ಪತ್ರೆಗೆ ‘ಔಷಧಿ’ ನೀಡುವರ್‌್ಯಾರು?

​ಪ್ರಜಾವಾಣಿ ವಾರ್ತೆ
Published 28 ಜನವರಿ 2015, 11:15 IST
Last Updated 28 ಜನವರಿ 2015, 11:15 IST

ಯಳಂದೂರು: ಬಿರುಕು ಬಿಟ್ಟ ನೆಲ, ತಲೆ ಮೇಲೆ ಉದುರಿ ಬೀಳುವ ಗಾರೆ ಚಕ್ಕೆಗಳು, ಗೋಡೆಗಳಲ್ಲಿ ಕಾಣಿಸಿಕೊಂಡಿರುವ ದರಿಗಳು, ಇದರ ನಡುವೆಯೇ ಬರುವ ಹೊರ ರೋಗಿಗಳನ್ನು ಪರೀಕ್ಷಿಸುವ ಅನಿವಾರ್ಯತೆ...

ಇದು ತಾಲ್ಲೂಕಿನ ಅವಳಿ ಗ್ರಾಮಗಳಾದ ಅಗರ–ಮಾಂಬಳ್ಳಿ ಗ್ರಾಮದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಕಟ್ಟಡದ ಸ್ಥಿತಿ–ಗತಿ. ತಾಲ್ಲೂಕಿನ ದೊಡ್ಡ ಗ್ರಾಮಗಳಾಗಿರುವ ಇವೆರಡು ಗ್ರಾಮಗಗಳಲ್ಲಿ ಕಳೆದ ಹತ್ತಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಆಸ್ಪತ್ರೆಯ ಕಟ್ಟಡ ಶಿಥಿಲವಾಗಿದೆ. ಹಾಗಾಗಿ ಇಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ. ಕಟ್ಟಡದ ಮುಂಭಾಗ ವಾರ್ಡ್‌ಗಳು, ವರಾಂಡದ ಗೋಡೆಗಳೆಲ್ಲಾ ಬಿರಕು ಬಿಟ್ಟಿದೆ. ಇದರ ಮೇಲ್ಛಾವಣಿಯ ಗಾರೆ ಚಕ್ಕೆಗಳು ಉದುರುತ್ತಿವೆ. ಅಲ್ಲದೆ ಹೋರ ರೋಗಿಗಳನ್ನು ನೋಡುವ ಕೊಠಡಿಗಳು ಇದರಿಂದ ಹೊರತಾಗಿಲ್ಲ. ವಿದ್ಯುತ್‌ ವೈರ್‌, ಸ್ವಿಚ್‌ಗಳೆಲ್ಲಾ ಹೊರಾಚಾಚಿವೆ. ಹಾಗಾಗಿ ಇಲ್ಲಿ ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ ಎಂಬುದು ಇಲ್ಲಿನವರ ದೂರು.

ಉದ್ಘಾಟನೆಗೊಳ್ಳದ ನೂತನ ಕಟ್ಟಡ: ಆಸ್ಪತ್ರೆಯ ಪಕ್ಕದಲ್ಲೇ ನಿರ್ಮಿತಿ ಕೇಂದ್ರದ ವತಿಯಿಂದ ಆರ್‌ಐಡಿಎಫ್‌ ಯೋಜನೆಯಡಿಯಲ್ಲಿ ₨ 60 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಇದರ ನಿರ್ಮಾಣವಾಗಿ ವರ್ಷ ಉರುಳಿದ್ದರೂ ಇದಕ್ಕೆ ಇನ್ನೂ ಕೂಡ ಉದ್ಘಾಟನಾ ಭಾಗ್ಯ ಲಭ್ಯವಾಗಿಲ್ಲ. ಹಾಗಾಗಿ ಈ ಶಿಥಿಲ ಕಟ್ಟಡದಲ್ಲೇ ಇರುವ ಅನಿವಾರ್ಯತೆ ಇಲ್ಲಿನ ಸಿಬ್ಬಂಧಿಯದ್ದು. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬುದು ಇಲ್ಲಿನ ನಾಗರೀಕರಾದ ಕಿರಣ್‌, ಗಿರೀಶ್‌ ಸೇರಿದಂತೆ ಹಲವರ ದೂರಾಗಿದೆ.

ಅಲ್ಲದೆ ಪಕ್ಕದಲ್ಲೇ ವಸತಿ ಗೃಹಗಳಿದ್ದು ಅವೂ ಕೂಡ ಶಿಥಿಲಾವಸ್ಥೆಯಲ್ಲಿದೆ. ಒಳರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡುತ್ತಿಲ್ಲವಾದ್ದರಿಂದ ಪಕ್ಕದ ಕೊಳ್ಳೇಗಾಲ ಅಥವಾ ಯಳಂದೂರು ಆಸ್ಪತ್ರೆಗಳಿಗೆ ರೋಗಿಗಳು ಅಲೆಯ ಬೇಕಾದ ಸ್ಥಿತಿ ಇದೆ ಎಂಬುದು ಇಲ್ಲಿನ ನಾಗರೀಕರ ದೂರಾಗಿದೆ. ಈಗಲಾದರೂ ಹೊಸ ಕಟ್ಟಡ ಉದ್ಘಾಟನೆಗೊಂಡು ಇಲ್ಲಿನ ನಾಗರಿಕರಿಗೆ ಗುಣಮಟ್ಟದ ಸೇವೆ ಒದಗಿಸುವಲ್ಲಿ ಸಂಬಂಧಪಟ್ಟವರು ಸಹಕರಿಸುವರೇ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.