ADVERTISEMENT

ಎಪಿಎಲ್‌ ಕಾರ್ಡ್‌ಗೆ ಮೂರೇ ಅರ್ಜಿ!

ಆನ್‌ಲೈನ್‌ ಪ್ರಕ್ರಿಯೆಗೆ ಜಿಲ್ಲೆಯ ಜನರ ನೀರಸ ಪ್ರತಿಕ್ರಿಯೆ

ಕೆ.ಎಚ್.ಓಬಳೇಶ್
Published 12 ಜನವರಿ 2017, 8:36 IST
Last Updated 12 ಜನವರಿ 2017, 8:36 IST

ಚಾಮರಾಜನಗರ: ಆನ್‌ಲೈನ್‌ನಲ್ಲಿ ಎಪಿಎಲ್‌ ಕಾರ್ಡ್‌ ಪಡೆಯಲು ಜಿಲ್ಲೆಯಲ್ಲಿ 3 ಅರ್ಜಿ ಮಾತ್ರವೇ ಸಲ್ಲಿಕೆಯಾಗಿವೆ!
ಜ. 9ರಂದು ಕಂಪ್ಯೂಟರ್‌ ಮೂಲಕ ಮನೆಯಲ್ಲಿಯೇ ಆನ್‌ಲೈನ್‌ನಲ್ಲಿ ಎಪಿಎಲ್‌ ಕಾರ್ಡ್‌ ಪಡೆಯುವುದಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಚಾಲನೆ ನೀಡಿತ್ತು. ಕಾರ್ಡ್‌ನ ಅಗತ್ಯ ಇರುವವರು ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ ತಕ್ಷಣವೇ ತಾತ್ಕಾಲಿಕ ವಾಗಿ ಎಪಿಎಲ್‌ ಕಾರ್ಡ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಈ ಪ್ರಕ್ರಿಯೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ ಆಧಾರ್‌ ಸಂಖ್ಯೆ ದಾಖಲಿಸಿದರೆ ತಾತ್ಕಾಲಿಕ ಕಾರ್ಡ್‌ ಲಭಿಸಲಿದೆ. ಕುಟುಂಬದ ಸದಸ್ಯರ ನೋಂದಣಿಯೂ ಸುಲಭ. ಇದಕ್ಕೆ ಬಯೊಮೆಟ್ರಿಕ್‌ನ ಅಗತ್ಯ ಇಲ್ಲ. ಜತೆಗೆ, ಈ ಹಿಂದೆ ಎಪಿಎಲ್‌ ಕಾರ್ಡ್‌ ಹೊಂದಿದ್ದು, ವಿಳಾಸ ಬದಲಾವಣೆ, ಕಾರ್ಡ್‌ ತಿರಸ್ಕರಿಸಲು, ಹೊಸದಾಗಿ ಕಾರ್ಡ್‌ ಪಡೆಯಲು ಮತ್ತು ಕುಟುಂಬದ ಸದಸ್ಯರ ಹೆಸರು ಸೇರ್ಪಡೆಗೂ ಅವಕಾಶವಿದೆ.

4,297 ಎಪಿಎಲ್‌ ಕಾರ್ಡ್‌: ಸರ್ಕಾರದ ವಿವಿಧ ಯೋಜನೆಯಡಿ ಸೌಲಭ್ಯ ಪಡೆ ಯಲು ಪಡಿತರ ಚೀಟಿಯ ಅಗತ್ಯವಿದೆ. ಹಾಗಾಗಿ, ಕೆಲವು ನಾಗರಿಕರು ಪಡಿತರ ಪದಾರ್ಥದ ಅಗತ್ಯವಿಲ್ಲದಿದ್ದರೂ ಸರ್ಕಾರಿ ಸೌಲಭ್ಯಕ್ಕಾಗಿ ಎಪಿಎಲ್‌ ಕಾರ್ಡ್‌ ಪಡೆಯುವುದು ಉಂಟು.

ಈ ಮೊದಲು ಜಿಲ್ಲೆಯಲ್ಲಿ ಒಟ್ಟು 13,284 ಎಪಿಎಲ್‌ ಕಾರ್ಡ್‌ಗಳಿದ್ದವು. ಸರ್ಕಾರ ಅನಧಿಕೃತ ಕಾರ್ಡ್‌ಗಳಿಗೆ ಕಡಿವಾಣ ಹಾಕಲು ನಿರ್ಧರಿಸಿತು. ಹಾಗಾಗಿ, ಪಡಿತರ ಚೀಟಿಗೆ ಆಧಾರ್‌ ಸಂಖ್ಯೆ ಲಿಂಕ್‌ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿತು.

ಆಧಾರ್‌ ನೋಂದಣಿ ಮಾಡದಿರುವ 8,987 ಎಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಅಗತ್ಯವಿರುವವರು ಈಗ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ತಾತ್ಕಾಲಿಕ ಕಾರ್ಡ್‌ ಪಡೆಯ ಬಹುದು. 15 ದಿನದೊಳಗೆ ಸ್ಪೀಡ್‌ ಪೋಸ್ಟ್‌ ಮೂಲಕ ಫಲಾನುಭವಿಯ ಕಾಯಂ ವಿಳಾಸಕ್ಕೆ ಕಾರ್ಡ್ ಬರಲಿದೆ. ₹ 100 ಪಾವತಿಸಿ ಎಪಿಎಲ್‌ ಕಾರ್ಡ್‌ ಪಡೆಯಬೇಕಿದೆ.
ಕೇವಲ ಆಧಾರ್‌ ಸಂಖ್ಯೆ ಆಧರಿಸಿಯೇ ಎಪಿಎಲ್‌ ಕಾರ್ಡ್‌ ನೀಡಲಾಗುತ್ತದೆ. ಹಾಗಾಗಿ, ಅರ್ಜಿ ಸಲ್ಲಿಸುವ ಕುಟುಂಬದ ಎಲ್ಲ ಸದಸ್ಯರು ಆಧಾರ್‌ ಕಾರ್ಡ್ ಹೊಂದಿರಬೇಕು. ಆಧಾರ್‌ನಲ್ಲಿ ದಾಖಲಿಸಿರುವ ವಿಳಾಸ ಆಧರಿಸಿಯೇ ಕಾರ್ಡ್ ನೀಡಲಾಗುತ್ತದೆ.

ಹಾಗಾಗಿ, ಸಂಬಂಧಪಟ್ಟ ಗ್ರಾಮ ಅಥವಾ ನಗರ ಪ್ರದೇಶಕ್ಕೆ ಒಳಪಟ್ಟಿರುವ ನ್ಯಾಯಬೆಲೆ ಅಂಗಡಿ ಬಗ್ಗೆಯೂ ಆನ್‌ಲೈನ್‌ನಲ್ಲಿಯೇ ಮಾಹಿತಿ ಇರುತ್ತದೆ. ಅರ್ಜಿದಾರರು ತಮಗೆ ಆಹಾರ ಪದಾರ್ಥದ ಅಗತ್ಯವಿದ್ದರೆ ಆನ್‌ಲೈನ್‌ ಅರ್ಜಿಯಲ್ಲಿಯೇ ನಮೂದಿಸಬೇಕಿದೆ.

‘ಜಿಲ್ಲೆಯಲ್ಲಿ ಮೂರು ದಿನದಲ್ಲಿ ಕೇವಲ ಮೂವರು ಫಲಾನುಭವಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ತಾತ್ಕಾಲಿಕ ವಾಗಿ ಎಪಿಎಲ್‌ ಕಾರ್ಡ್‌ ಪಡೆದಿದ್ದಾರೆ.
ಈ ಪ್ರಕ್ರಿಯೆಗೆ ಕಾಲಮಿತಿ ನಿಗದಿಪಡಿಸಿಲ್ಲ. ಫಲಾನುಭವಿಗಳು ತಮಗೆ ಅಗತ್ಯವಿದ್ದಾಗ ಎಪಿಎಲ್‌ ಕಾರ್ಡ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ’ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಆರ್‌. ರಾಚಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

20ರಿಂದ ಆನ್‌ಲೈನ್‌ ಅರ್ಜಿ

ಚಾಮರಾಜನಗರ: ‘ಬಿಪಿಎಲ್‌ ಕಾರ್ಡ್‌ಗೆ ಜ. 20ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸ ಬಹುದು. ಫಲಾನುಭವಿಯು ಅರ್ಜಿ ಸಲ್ಲಿಸಿದ ಬಳಿಕ ಆಹಾರ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಮಟ್ಟದ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಅರ್ಹರಿದ್ದರೆ ಕಾರ್ಡ್‌ ವಿತರಿಸಲಾಗುತ್ತದೆ’ ಎಂದು –ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕ ಆರ್. ರಾಚಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT