ADVERTISEMENT

ಕೋರ್ಟ್‌ ರಸ್ತೆ; ಇಲ್ಲಿ ನಿಧಾನವಾಗಿ ಚಲಿಸಿ!

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 8:26 IST
Last Updated 18 ಸೆಪ್ಟೆಂಬರ್ 2017, 8:26 IST
ಚಾಮರಾಜನಗರದ ನ್ಯಾಯಾಲಯ ರಸ್ತೆಯ ದುರವಸ್ಥೆ
ಚಾಮರಾಜನಗರದ ನ್ಯಾಯಾಲಯ ರಸ್ತೆಯ ದುರವಸ್ಥೆ   

ಚಾಮರಾಜನಗರ: ಒಂದು ಚಿಕ್ಕ ಗುಂಡಿ ತಪ್ಪಿಸಿಕೊಳ್ಳುವುದರೊಳಗೆ ಮತ್ತೊಂದು ದೊಡ್ಡ ಗುಂಡಿ ಎದುರಾಗುತ್ತದೆ. ಸದ್ಯ! ಗುಂಡಿಗೆ ಬೀಳಲಿಲ್ಲ ಎಂದು ಸುಧಾರಿಸಿಕೊಳ್ಳುವಷ್ಟರಲ್ಲಿ ಪುಟ್ಟ ಕೆರೆಯೇ ಕಾಣಿಸುತ್ತದೆ. ಹೀಗೆ, ಗುಂಡಿಗಳ ನಡುವೆ ರಸ್ತೆ ಇದೆ ಎಂಬ ವಿಡಂಬನೆಯ ಸಾಲನ್ನು ನೆನಪಿಸುತ್ತದೆ ನಗರದ ನ್ಯಾಯಾಲಯ ರಸ್ತೆ.

ಈ ರಸ್ತೆಯಲ್ಲಿ ಸಂಚರಿಸುವಾಗ ವಾಹನ ಸವಾರರು ಮತ್ತು ಪಾದಚಾರಿಗಳು ಮೈತುಂಬಾ ಕಣ್ಣಾಗಿರುವುದು ಅನಿವಾರ್ಯ. ಸ್ವಲ್ಪ ಗಮನ ತಪ್ಪಿದರೂ ಗುಂಡಿಯೊಳಗೆ ಬೀಳುವ ಅಪಾಯವಿದೆ. ನಗರದ ಡಿವೈಎಸ್‌ಪಿ ಕಚೇರಿಯಿಂದ ಸತ್ತಿ ರಸ್ತೆಗೆ ಸಂಪರ್ಕ ಕಲ್ಪಿಸುವ 1.10 ಕಿ.ಮೀ. ಉದ್ದದವರೆಗೆ ಕಾಂಕ್ರೀಟ್‌ ಹಾಕಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಜುಲೈನಲ್ಲಿ ಚಾಲನೆ ನೀಡಲಾಗಿತ್ತು. ₹8 ಕೋಟಿ ವೆಚ್ಚದ ಯೋಜನೆಯಲ್ಲಿ ರಸ್ತೆಯ ಎರಡೂ ಬದಿ 1.88 ಕಿ.ಮೀ. ಮಳೆನೀರು ಚರಂಡಿ ನಿರ್ಮಾಣ ಕೆಲಸ ನಡೆಯುತ್ತಿದೆ.

ಮೊದಲ ಕೆಲವು ದಿನ ವೇಗವಾಗಿ ನಡೆದ ಕಾಮಗಾರಿ ನಂತರ ಕುಂಠಿತಗೊಂಡಿದೆ. ಈಗ ಮಳೆಯಾಗುತ್ತಿರುವುದು ಕಾಂಕ್ರೀಟ್‌ ಚರಂಡಿ ನಿರ್ಮಾಣಕ್ಕೆ ಅಡ್ಡಿಯಾಗಿದೆ.
ಮಳೆ ಬಂದರಂತೂ ಓಡಾಟ ದುಸ್ತರವಾಗುತ್ತದೆ. ಈಗಾಗಲೇ ಕೆಲವು ಬೈಕ್‌ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಇಲ್ಲಿ ಶಾಲೆ ಕೂಡ ಇರುವುದರಿಂದ ಪುಟ್ಟ ಮಕ್ಕಳಿಗೆ ಅಪಾಯವಾಗಬಹುದು ಎನ್ನುವುದು ಜನರ ಕಳವಳ.

ADVERTISEMENT

ರಸ್ತೆಯ ಸಮೀಪವೇ ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ, ನ್ಯಾಯಾಧೀಶರು, ಸರ್ಕಾರಿ ಅಧಿಕಾರಿಗಳ ಮನೆಗಳಿವೆ. ಪ್ರತಿಷ್ಠಿತರು ಇರುವ ಜಾಗದ ಪರಿಸ್ಥಿತಿಯೇ ಹೀಗಾದರೆ ನಗರದ ಅಭಿವೃದ್ಧಿ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.

ಆಕಾರವೇ ಇಲ್ಲ!:
ಆರಂಭದಲ್ಲಿ 60 ಅಡಿ ಅಗಲದವರೆಗೆ ರಸ್ತೆ ವಿಸ್ತರಿಸಲು ತೀರ್ಮಾನಿಸಲಾಗಿತ್ತು. ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಸ್ತಾವ ಕೈಬಿಡಲಾಯಿತು. ಈಗ 53 ಅಡಿ ರಸ್ತೆ ಮಾಡಲಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ, ಮನಬಂದಂತೆ ಅಗಲೀಕರಣ ಮಾಡಲಾಗುತ್ತಿದೆ. ಕೆಲವೆಡೆ 53 ಅಡಿ ಇದ್ದರೆ, ಇನ್ನು ಕೆಲವೆಡೆ 45 ಅಡಿ ಇದೆ. ದೂರಾಲೋಚನೆ ಮತ್ತು ಶಿಸ್ತು ಇಲ್ಲದೆ ಕೆಲಸ ಮಾಡಲಾಗುತ್ತಿದೆ ಎಂದು ನಾಗರಿಕರು ಆರೋಪಿಸಿದರು.

ರಸ್ತೆಗೇ ಚರಂಡಿ ನೀರು ಬಿಡಿ!:
ಬಚ್ಚಲು ನೀರು ಹರಿದುಹೋಗಲು ಮೊದಲು ತೆರೆದ ಚರಂಡಿ ಇತ್ತು. ಕಾಮಗಾರಿಗಾಗಿ ಅದನ್ನು ಬಂದ್‌ ಮಾಡಲಾಗಿದೆ. ಒಳಚರಂಡಿಯ ಮ್ಯಾನ್‌ಹೋಲ್‌ ಮತ್ತು ಕೊಳವೆ ಮಾರ್ಗ ಕೆಲಸ ಮುಗಿದಿದೆ. ಅದಕ್ಕೆ ಸಂಪರ್ಕ ನೀಡಿಲ್ಲ. ಹೀಗಾಗಿ, ಕೊಳಚೆ ನೀರು ಹರಿದುಹೋಗಲು ಇಲ್ಲಿ ಜಾಗವೇ ಇಲ್ಲ. ಅದಕ್ಕೆ ವ್ಯವಸ್ಥೆ ಮಾಡಿಕೊಡಿ ಎಂದು ಕೋರಿದರೆ, ರಸ್ತೆಯ ಮೇಲೆಯೇ ಬಿಡಿ ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾಗಿ ಸ್ಥಳೀಯರು ತಿಳಿಸಿದರು.

ಜಿಲ್ಲಾ ಕಾರಾಗೃಹದ ಎದುರು ಭಾಗದಲ್ಲಿ ಅಡ್ಡರಸ್ತೆಯೊಂದರಿಂದ ಚರಂಡಿ ನೀರನ್ನು ನೇರವಾಗಿ ರಸ್ತೆಯ ಮೇಲೆಯೇ ಹರಿಬಿಡಲಾಗುತ್ತಿದೆ. ಇನ್ನು ಕೆಲವೆಡೆ ಅಲ್ಲಲ್ಲಿ ದೊಡ್ಡ ಗುಂಡಿಗಳನ್ನು ನಿರ್ಮಿಸಲಾಗಿದ್ದು, ಕೊಳಚೆ ನೀರು ಅಲ್ಲಿಯೇ ಸಂಗ್ರಹವಾಗುತ್ತಿದೆ.

ಎತ್ತರದ ಚರಂಡಿಯಿಂದ ತೊಡಕು: ಚರಂಡಿಯನ್ನು ರಸ್ತೆಗಿಂತ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ. ಇದಕ್ಕೆ ಸರಿಸಮನಾಗಿ ಮುಂದೆ ರಸ್ತೆಯನ್ನು ಎತ್ತರಿಸುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಇದರಿಂದ ಅಲ್ಲಿನ ನಿವಾಸಿಗಳು ಮತ್ತು ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಗಿದೆ.

‘ಚರಂಡಿ ಎತ್ತರಿಸಿ ನಿರ್ಮಿಸಿರುವುದರಿಂದ ಅಂಗಡಿಗೆ ಜನರು ಬರಲು ಕಷ್ಟಪಡುತ್ತಾರೆ. ಇದರಿಂದ ವ್ಯಾಪಾರ ಕುಸಿದಿದೆ’ ಎಂದು ವ್ಯಾಪಾರಿ ಮಂಜುನಾಥ್‌ ಅಳಲು ತೋಡಿಕೊಂಡರು. ‘ಮನೆಯಲ್ಲಿ ಕಾರು ಇದ್ದರೂ ಹೊರಗೆ ತೆಗೆಯುವಂತಿಲ್ಲ. ಹೊರ ಹೋಗಲು ದಾರಿಯೇ ಇಲ್ಲ. ಇದರಿಂದ ಬಾಡಿಗೆ ವಾಹನ ತರಿಸಿಕೊಂಡು ಓಡಾಡುವಂತಾಗಿದೆ’ ಎಂದು ಗೃಹಿಣಿಯೊಬ್ಬರು ದೂರಿದರು.

ಕಾಮಗಾರಿ ಆರಂಭಕ್ಕೂ ಮೊದಲು ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು. ಕಂಬಗಳು ಇರುವ ಜಾಗದಲ್ಲಿ ಚರಂಡಿ ನಿರ್ಮಿಸುವ ಗೋಜಿಗೇ ಹೋಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.