ADVERTISEMENT

ಚಾಮುಲ್ ಚುನಾವಣೆ: 8 ನಿರ್ದೇಶಕರ ಸ್ಥಾನಕ್ಕೆ ಇಂದು ಮತದಾನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2017, 4:18 IST
Last Updated 30 ಜೂನ್ 2017, 4:18 IST
ಚಾಮುಲ್ ಚುನಾವಣೆ: 8 ನಿರ್ದೇಶಕರ ಸ್ಥಾನಕ್ಕೆ ಇಂದು ಮತದಾನ
ಚಾಮುಲ್ ಚುನಾವಣೆ: 8 ನಿರ್ದೇಶಕರ ಸ್ಥಾನಕ್ಕೆ ಇಂದು ಮತದಾನ   

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಚಾಮುಲ್‌) ಎಂಟು ನಿರ್ದೇಶಕರ ಸ್ಥಾನಗಳಿಗೆ ಮೊದಲ ಚುನಾವಣೆ ಶುಕ್ರವಾರ ನಡೆಯಲಿದೆ.

ಕುದೇರು ಗ್ರಾಮದಲ್ಲಿರುವ ಒಕ್ಕೂಟದ ಆಡಳಿತ ಮಂಡಳಿ ಕಚೇರಿ ಯಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದೆ. ಜಿಲ್ಲೆಯ ಎಲ್ಲ ಮತದಾರರೂ ಇಲ್ಲಿಯೇ ಮತ ಚಲಾಯಿಸಲಿದ್ದಾರೆ. ಬಳಿಕ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಸಂಜೆಯೇ ಫಲಿತಾಂಶ ಪ್ರಕಟವಾಗಲಿದೆ.

ಜಿಲ್ಲೆಯ ಹಾಲು ಉತ್ಪಾದಕರ ಸಹ ಕಾರ ಸಂಘಗಳ ವಹಿವಾಟು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಮೂಲಕ  ಈ ಹಿಂದೆ ನಡೆ ಯುತ್ತಿತ್ತು. 2015ರಲ್ಲಿ ಚಾಮರಾಜ ನಗರಕ್ಕೆ ಪ್ರತ್ಯೇಕವಾದ ಒಕ್ಕೂಟ ‘ಚಾಮುಲ್‌’ ಅಸ್ತಿತ್ವಕ್ಕೆ ಬಂದಿತು. ಇದಕ್ಕೆ ಎಂಟು ನಿರ್ದೇಶಕರನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದೆ.

ADVERTISEMENT

ಚಾಮರಾಜನಗರ, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ತಲಾ ಎರಡು, ಯಳಂದೂರು ತಾಲ್ಲೂಕಿನ ಒಂದು ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಒಂದು ಸ್ಥಾನ ಮಹಿಳೆಗೆ  ಮೀಸಲಿರಿಸಲಾಗಿದೆ. ಮೂವರು ಪೈಪೋಟಿ ನಡೆಸುತ್ತಿದ್ದಾರೆ.

22 ಅಭ್ಯರ್ಥಿಗಳು: ಐದು ವರ್ಷಗಳ ಅವಧಿಗೆ ಆಯ್ಕೆಯಾಗುವ ಎಂಟು ನಿರ್ದೇಶಕರ ಆಡಳಿತ ಮಂಡಳಿಯ ಸ್ಥಾನ ಗಳಿಗೆ ಒಟ್ಟು 26 ಮಂದಿ ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ನಾಲ್ಕು ಮಂದಿ ನಾಮಪತ್ರ ಹಿಂತೆಗೆದುಕೊಂಡಿದ್ದರು. ಪ್ರಸ್ತುತ 22 ಆಕಾಂಕ್ಷಿಗಳು ಕಣದಲ್ಲಿ ದ್ದಾರೆ.  ಜಿಲ್ಲೆಯ ವಿವಿಧ ಭಾಗಗಳ ಹಾಲು ಉತ್ಪಾದಕರು ಮತ ಚಲಾಯಿಸಲಿದ್ದಾರೆ.

ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸಾಮಾನ್ಯವಾಗಿ ಎಂಟು ನಿರ್ದೇಶಕರಿರುತ್ತಾರೆ. ಅವರಲ್ಲಿ ಒಬ್ಬರಿಗೆ ಮಾತ್ರ ಮತ ಚಲಾಯಿಸಲು ಅವಕಾಶ ವಿದೆ. ಮತ ಚಲಾಯಿಸುವ ಅರ್ಹರನ್ನು ಆಯಾ ಸಹಕಾರ ಸಂಘಗಳು ನಿರ್ಧರಿಸುತ್ತವೆ.

ಎಂಟು ನಿರ್ದೇಶಕರ ಜೊತೆಗೆ ಒಬ್ಬರನ್ನು ಸರ್ಕಾರ ನಾಮನಿರ್ದೇಶನ ಮಾಡುತ್ತದೆ. ಬಳಿಕ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಕೆಎಂಎಫ್, ಪಶು ಸಂಗೋಪನಾ ಇಲಾಖೆ, ಸಹಕಾರ ಇಲಾಖೆ ಮತ್ತು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಪಿ) ಒಬ್ಬ ಅಧಿಕಾರಿ ಕೂಡ ಅಧ್ಯಕ್ಷರ ಆಯ್ಕೆಗೆ ಮತ ಚಲಾಯಿಸುತ್ತಾರೆ.

**

ಚುನಾವಣೆ ಕಣದಲ್ಲಿ ಇರುವವರು
* ಚಾಮರಾಜನಗರ: ಕೋಡಿಮೋಳೆ ರಾಜಶೇಖರ್, ಎಚ್.ಎಸ್.ಬಸವರಾಜು, ಕೆ.ಬಿ.ಬಸವರಾಜು, ಎಂ.ಎಸ್.ರವಿಶಂಕರ್, ಪು.ಶ್ರೀನಿವಾಸನಾಯಕ, ಎಂ. ಶಿವರಾಂ.
* ಗುಂಡ್ಲುಪೇಟೆ: ವೈ.ಎನ್.ರಾಜಶೇಖರ್, ಎಚ್.ಎಸ್.ನಂಜುಂಡಪ್ರಸಾದ್, ಡಿ. ಮಾದಪ್ಪ, ಪಿ.ಕೆ.ಮಹದೇವಪ್ಪ, ಕೆ.ಎಂ.ನಾಗಮಲ್ಲಪ್ಪ.
* ಕೊಳ್ಳೇಗಾಲ: ಸಿ.ಎಸ್.ಗುರುಮಲ್ಲಪ್ಪ, ಎಂ.ನಂಜುಂಡಸ್ವಾಮಿ, ಎಸ್.ನಟೇಶ್, ಎಂ.ಪುಟ್ಟಣ್ಣ, ಎಸ್.ಮಹದೇವಸ್ವಾಮಿ.
* ಯಳಂದೂರು: ಎಚ್.ಎಂ.ಪುಟ್ಟಮಲ್ಲಪ್ಪ, ಎನ್.ಶಿವಾನಂದಸ್ವಾಮಿ, ಕೆ.ಎಂ.ಮಾದಪ್ಪ.
* ಮಹಿಳಾ ಮೀಸಲು ಕ್ಷೇತ್ರ: ಆರ್.ಶೀಲಾರತ್ನ, ಪ್ರಮೋದಾ ಶಿವಶಂಕರಮೂರ್ತಿ, ವಿಮಲಾ ಶಂಕರ್.

**

ಚುನಾವಣೆಗೆ ಎಲ್ಲ ಸಿದ್ಧತೆ ನಡೆದಿದೆ. ನಿರ್ದೇಶಕರ ಚುನಾವಣೆ ನಡೆದ 15 ದಿನಗಳಲ್ಲಿ ಅಧ್ಯಕ್ಷರ ಆಯ್ಕೆ ನಡೆಯಬೇಕು. ಜುಲೈ 15ರ ಒಳಗೆ ಅಧ್ಯಕ್ಷರ ಆಯ್ಕೆ ಆಗಲಿದೆ.
-ಡಾ.ಎಂ.ಎಸ್.ವಿಜಯಕುಮಾರ್, ವ್ಯವಸ್ಥಾಪಕ ನಿರ್ದೇಶಕ, ಚಾಮುಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.