ADVERTISEMENT

ದೌರ್ಜನ್ಯ ಖಂಡಿಸಿ ಬೀದಿಗಿಳಿದ ಪಿಡಿಒಗಳು

ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್‌ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 12 ಮೇ 2017, 9:48 IST
Last Updated 12 ಮೇ 2017, 9:48 IST
ಮಂಡ್ಯ:  ‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ್‌ ಹೇಳಿದರು.
 
ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಗ್ರಾಮ ಪಂಚಾಯಿತಿ ಸಿಬ್ಬಂದಿ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನಪ್ರತಿನಿಧಿಗಳಿಗೆ ಭಯಪಟ್ಟು ಕೆಲಸ ಮಾಡುವುದು ಬೇಡ. ಪ್ರಾಮಾಣಿಕವಾಗಿ ಕೆಲಸ ಮಾಡುವ ನಾವು ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ’ ಎಂದು ಹೇಳಿದರು.
 
‘ಕಾನೂನು ನಿಯಮ ಉಲ್ಲಂಘಿಸಿ ಸಾರ್ವಜನಿಕರ ಕೆಲಸ ಮಾಡುವಂತೆ ಜನಪ್ರತಿನಿಧಿಗಳು ಒತ್ತಡ ಹೇರುತ್ತಾರೆ. ಅದನ್ನು ಪ್ರಶ್ನಿಸಿದರೆ ಪಿಡಿಒಗಳ ಮೇಲೆ ಹಲ್ಲೆ ಮಾಡುತ್ತಾರೆ. ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶಕ್ಕೆ ಜನಪ್ರತಿನಿಧಿಗಳು ದೂಡುತ್ತಾರೆ. ಇದಕ್ಕೆ ತಾಲ್ಲೂಕಿನ ಯಲಿಯೂರು ಗ್ರಾಮ ಪಂಚಾಯಿತಿಯ ಸದಸ್ಯ ರಾಮಲಿಂಗಯ್ಯನ ಕಿರುಕುಳವೇ ಸಾಕ್ಷಿ.  ಪಿಡಿಒ ಶ್ರೀನಿವಾಸಯ್ಯ   ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 
 
ಸದಸ್ಯ ರಾಮಲಿಂಗಯ್ಯ ವಿರುದ್ಧ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಆರೋಪಿ ರಾಜರೋಷವಾಗಿ ಓಡಾಡಿ ಕೊಂಡಿದ್ದಾನೆ’ ಎಂದು ದೂರಿದರು.
 
ತಾಲ್ಲೂಕಿನ ಬೇಬಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಲ್‌. ಹೊಂಬಯ್ಯ ಅವರ ಮೇಲೆ ಹಲ್ಲೆ ಮಾಡಲಾಯಿತು. ಇದರ ಬಗ್ಗೆ ಪೋಲಿಸರಿಗೆ ದೂರು ನೀಡಿದ್ದರೂ ಮತ್ತೆ ಪ್ರತಿ ದೂರು ದಾಖಲಿಸಿ ಪಿಡಿಒಗೆ ಬೆದರಿಕೆ ಹಾಕಲಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು. 
 
ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಕಿರುಕುಳ ಮಾಮೂಲಾಗಿದೆ.  ಇದು ನಿಲ್ಲದೇ ಹೋದರೆ ಜಿಲ್ಲೆಯಾದ್ಯಂತ 25 ಸಾವಿರಕ್ಕೂ ಹೆಚ್ಚು ಜನರು ಸರ್ಕಾರಿ ನೌಕರರು ಉಗ್ರ ಹೋರಾಟ ನಡೆಸಬೇಕಾಗುತ್ತದೆ.
 
ಗ್ರಾಮ ಪಂಚಾಯಿತಿ ವತಿಯಿಂದ ನಡೆಯದೇ ಇರುವ ಕಾಮಗಾರಿಗಳಿಗೆ ಬಿಲ್‌ ಮಾಡುವಂತೆ ಪಿಡಿಒಗಳಿಗೆ ಒತ್ತಡ ಹೇರುವುದನ್ನು ಜನಪ್ರತಿನಿಧಿಗಳು ನಿಲ್ಲಿಸಬೇಕು. ವಿವಿಧ ವಸತಿ ಯೋಜನೆಗಳ ಅರ್ಹ ಫಲಾನುಭವಿಗಳನ್ನು ಗ್ರಾಮ ಸಭೆಯಲ್ಲಿ ಆಯ್ಕೆ ಮಾಡಲಾಗಿದ್ದರೂ  ಆಕ್ಷೇಪಣೆ ಬಂದರೆ ಅದಕ್ಕೆ ಪಿಡಿಒ ಹೊಣೆ ಮಾಡುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.
 
ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ಸ್ಥಳೀಯ ಜನಪ್ರತಿನಿಧಿಗಳಾದರೆ ಅವರ ಸದಸ್ಯತ್ವ ರದ್ದುಗೊಳಿಸಿ, ಆಜೀವ ಪರ್ಯಂತ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬೇಕು. ಹಲ್ಲೆ ಹಾಗೂ ದೌರ್ಜನ್ಯಕ್ಕೆ ಒಳಗಾದ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
 
ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ಬಿ.ಮಧುಸೂದನ್‌, ಪಿಡಿಒಗಳಾದ ವಿನಯ್‌ಕುಮಾರ್‌, ಮಲ್ಲೇಶ್‌, ಚಂದ್ರಶೇಖರ್‌, ಸುರೇಶ್‌, ಮಲ್ಲೇಶ್‌್, ಸುನೀಲ್‌ಕುಮಾರ್‌, ಮೇನಕಾ, ಸೌಭಾಗ್ಯ, ಕಾರ್ಯದರ್ಶಿ ಗಳಾದ ಮಧು, ಮಹೇಶ್‌, ಶಿವ ಲಿಂಗಯ್ಯ, ನಿತಿನ್‌, ಕಲಾ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾದ ಶಿವ ಕುಮಾರ್‌, ಜ್ಯೋತಿ, ಗೂಳಿಗೌಡ ಇದ್ದರು.
 
ಬೃಹತ್‌ ಮೆರವಣಿಗೆ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ದ್ವಿತೀಯದರ್ಜೆ ಲೆಕ್ಕೆ ಸಹಾಯಕರು ಹಾಗೂ ಸಿಬ್ಬಂದಿ  ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಿಂದ ಮೆರವಣಿಗೆ ಹೊರಟರು. 300ಕ್ಕೂ ಹೆಚ್ಚು ಜನರು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.