ADVERTISEMENT

ಬಂಡೀಪುರದಲ್ಲಿ ಹಸಿರು; ಇನ್ನಿಲ್ಲ ಕಾಡ್ಗಿಚ್ಚಿನ ಆತಂಕ

ಅಕಾಲಿಕ ಮಳೆ ತಂದ ಅನುಕೂಲ, ಅರಣ್ಯ ಸಿಬ್ಬಂದಿ ನಿರ‌ಮ್ಮಳ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 6:07 IST
Last Updated 18 ಏಪ್ರಿಲ್ 2018, 6:07 IST
ಬಂಡೀಪುರ ಅರಣ್ಯ ಪ್ರದೇಶ ಹಸಿರಾಗಿರುವುದು
ಬಂಡೀಪುರ ಅರಣ್ಯ ಪ್ರದೇಶ ಹಸಿರಾಗಿರುವುದು   

ಗುಂಡ್ಲುಪೇಟೆ: ಹಿಂದಿನ ವರ್ಷಗಳ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬೇಸಿಗೆ ತಾಪಕ್ಕೆ ಮರಗಿಡಗಳೆಲ್ಲ ಒಣಗಿ ಬೆಂಕಿಗೆ ಆಹುತಿಯಾಗಿ ಹಸಿರು ಮಾಯವಾಗುತ್ತಿತ್ತು. ಆದರೆ, ಈ ವರ್ಷ ಬೇಸಿಗೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಏಪ್ರಿಲ್‍ನಲ್ಲಿ ಹಚ್ಚಹಸಿರಿನಿಂದ ಅರಣ್ಯ ಪ್ರದೇಶ ಕಂಗೊಳಿಸುತ್ತಿದೆ.

ಬಂಡೀಪುರ ರಾಷ್ಟ್ರೀಯ ಉದ್ಯಾನವು 874 ಚದರ ಕಿ.ಮೀ ಪ್ರದೇಶವನ್ನು ವ್ಯಾಪಿಸಿದೆ. ಈ ರಾಷ್ಟ್ರೀಯ ಉದ್ಯಾನವು ತಮಿಳುನಾಡಿನ ಮುದುಮಲೈ ಮತ್ತು ಕೇರಳದ ವಯನಾಡ್ ವನ್ಯಜೀವಿ ಅಭಯಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ. ಹೆಚ್ಚು ಹುಲಿಗಳಿರುವ ಪ್ರದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶದ ಅನೇಕ ವಲಯಗಳಿಗೆ ಬೆಂಕಿಯ ಕೆನ್ನಾಲಿಗೆ ಚಾಚಿ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಮತ್ತು ಸಣ್ಣಪುಟ್ಟ ಕಾಡು ಪ್ರಾಣಿಗಳು ನಾಶವಾಗಿದ್ದವು. ಜೊತೆಗೆ, ಅರಣ್ಯ ಸಿಬ್ಬಂದಿಯೊಬ್ಬರು ಬೆಂಕಿಯ ಜ್ವಾಲೆಗೆ ಬಲಿಯಾಗಿದ್ದರು. ಈ ಬಾರಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹಸಿರು ತುಂಬಿಕೊಂಡು ರಸ್ತೆ ಬದಿಯಲ್ಲಿಯೇ ಪ್ರಾಣಿಗಳ ದರ್ಶನವಾಗುತ್ತಿದೆ.

ADVERTISEMENT

ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿಯೇ ಅರಣ್ಯ ಪ್ರದೇಶಗಳ ಹುಲ್ಲುಗಳೆಲ್ಲ ಒಣಗಿರುತ್ತಿದ್ದವು. ಅರಣ್ಯಕ್ಕೆ ಬೆಂಕಿ ಬೀಳದಂತೆ ನೋಡಿಕೊಳ್ಳುವುದು ಅರಣ್ಯ ಸಿಬ್ಬಂದಿಗೆ ಸವಾಲಾಗುತ್ತಿತ್ತು. ಬೆಂಕಿಯನ್ನು ತಡೆಗಟ್ಟಲು ಪ್ರತಿವರ್ಷ ಬೆಂಕಿರೇಖೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಬೆಂಕಿಯನ್ನು ನಂದಿಸಲು ವಿವಿಧ ವಾಹನಗಳನ್ನು ಕರೆಸಿಕೊಳ್ಳುತ್ತಿದ್ದರು.

ಅಧಿಕಾರಿಗಳು ಸಿಬ್ಬಂದಿಗೆ ಹೆಚ್ಚು ಶ್ರಮವಹಿಸಿ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದರು. ಇವೆಲ್ಲದರ ಮಧ್ಯೆ ಎಲ್ಲಾದರೂ ಒಂದು ವಲಯದಲ್ಲಿ ಬೆಂಕಿ ಕಾಣಿಸಿಕೊಂಡು ಅರಣ್ಯ ನಾಶವಾಗುತ್ತಿತ್ತು. ಈ ಬಾರಿ ಬೇಸಿಗೆಯಲ್ಲಿ ಉತ್ತಮ ಮಳೆ ಯಾಗಿರುವುದರಿಂದ ಅರಣ್ಯ ಸಿಬ್ಬಂದಿ ಸ್ವಲ್ಪ ನೆಮ್ಮದಿಯಾಗಿರಬಹುದು ಎಂದು ವಲಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದರು.

ಇಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ಅನೇಕ ಪ್ರಾಣಿಗಳು ನೀರಿನ ಕೊರತೆಯಿಂದ ಪಕ್ಕದ ಮುದುಮಲೈ ಮತ್ತು ವಯನಾಡ್‌ ಅಭಯಾರಣ್ಯಕ್ಕೆ ವಲಸೆ ಹೋಗುತ್ತಿದ್ದವು. ಕಾಡಾನೆಗಳು ಕಾಡಂಚಿನ ಗ್ರಾಮಗಳ ಬಳಿ ಬಂದು ನೀರಿಗಾಗಿ ಘೀಳಿಡುತ್ತ, ಜಮೀನುಗಳಲ್ಲಿರುವ ತೊಟ್ಟಿ, ಡ್ರಂಗಳನ್ನು ಹೊಡೆದು ಹಾಕಿರುವ ಘಟನೆಗಳು ಉದಾಹರಣೆಇದೆ. ಮಳೆಯಾದ ಹಿನ್ನೆಲೆಯಲ್ಲಿ ಅರಣ್ಯದೊಳಗಿರುವ ಅನೇಕ ಕೆರೆಗಳು ತುಂಬಿವೆ. ಈ ಸಮಯದಲ್ಲಿ ಕಾಡಿನಲ್ಲಿ ಹೆಚ್ಚಿನ ಪ್ರಾಣಿಗಳು ಸಿಗುತ್ತಿರಲಿಲ್ಲ. ಆದರೆ, ಈ ವರ್ಷ ಕಾಡಿನಲ್ಲಿ ಬೀಟ್ ಮಾಡುವಾಗ ಅನೇಕ ಪ್ರಾಣಿಗಳು ಸಿಗುತ್ತಿವೆ ಎಂದು ವಾಚರ್ ಒಬ್ಬರು ತಿಳಿಸಿದರು.

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಲಾಂಟಾನ ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಒಣಗಿದ್ದರಿಂದ ಬೆಂಕಿ ಕಾಣಿಸಿಕೊಂಡಿದ್ದರೆ ಅದನ್ನು ನಿಯಂತ್ರಣಕ್ಕೆ ತರಲು ಅಸಾಧ್ಯವಾಗುತ್ತಿತ್ತು. ಅಕಾಲಿವಾಗಿ ಮಳೆಯಾಗಿರುವುದರಿಂದ ಎಲ್ಲ ಮರಗಿಡಗಳು ಹಸಿರಾಗಿವೆ. ಬೆಂಕಿಯ ಭಯವು ಕಡಿಮೆಯಾಗಿದೆ. ಕಳೆದ ವರ್ಷ ರಾತ್ರಿ ಸಮಯದಲ್ಲಿ ನಿದ್ರೆ ಮಾಡಲು ಆಗುತ್ತಿರಲಿಲ್ಲ. ಎಲ್ಲಿ, ಬೆಂಕಿ ಬೀಳುತ್ತದೋ ಎಂಬ ಭಯವಿತ್ತು. ಈ ವರ್ಷ ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ ಎಂದು ಅರಣ್ಯ ಸಿಬ್ಬಂದಿಯೊಬ್ಬರು ಹಿಂದಿನ ಅನುಭವವನ್ನು ಹಂಚಿಕೊಂಡರು.

ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಇಲ್ಲಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ.
ಕಳೆದ ಬಾರಿ ಈ ಸಮಯದಲ್ಲಿ ಸಫಾರಿಗೆ ಬಂದಿದ್ದಾಗ ಯಾವ ಪ್ರಾಣಿಗಳ ದರ್ಶನವಾಗಿರಲಿಲ್ಲ. ಕಾಡೆಲ್ಲ ಒಣಗಿ ನಿಂತಿತ್ತು. ಆನೆಗಳು ಹೆಚ್ಚಾಗಿ ಬಡಕಲಾಗಿದ್ದವು. ಈ ಬಾರಿ ಪ್ರಾಣಿಗಳೆಲ್ಲ ಮೈತುಂಬಿಕೊಂಡಿವೆ. ಹೆಚ್ಚಿನ ಪ್ರಾಣಿಗಳ ದರ್ಶನವೂ ಆಯಿತು ಎಂದು ಪ್ರವಾಸಿಗರಾದ ಬೆಂಗಳೂರಿನ ವೇಣುಗೋಪಲ್ ತಿಳಿಸಿದರು.

**

ಅಕಾಲಿಕವಾಗಿ ಮಳೆಯಾಗಿರುವುದು ಅರಣ್ಯದ ದೃಷ್ಟಿಯಿಂದ ಒಳ್ಳೆಯದೇ ಆಯಿತು. ಈ ಬಾರಿ ಬೆಂಕಿಯನ್ನು ತಡೆಯಲು ಮತ್ತು ಜಿರೋ ಫೈರ್ ಮಾಡಲು ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗಿತ್ತು. ಮಳೆಯಿಂದ ಹೆಚ್ಚಿನ ಅನುಕೂಲವಾಗಿದೆ – ಅಂಬಾಡಿ ಮಾಧವ್,ಬಂಡೀಪುರ ಹುಲಿ ಯೋಜನೆ ನಿರ್ದೇಶಕ.

**

ಮಲ್ಲೇಶ.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.