ADVERTISEMENT

ಸಂಪಾದನೆ, ದಾಸೋಹ ತಕ್ಕಡಿ ಸಮನಾಗಿರಲಿ

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 6:34 IST
Last Updated 17 ಜುಲೈ 2017, 6:34 IST

ಚಾಮರಾಜನಗರ: ‘ವರ್ತಕರು ಸಂಪಾದನೆ ಮತ್ತು ದಾಸೋಹದ ತಕ್ಕಡಿಯನ್ನು ಯಾವಾಗಲೂ ಸಮನಾಗಿರುವಂತೆ ನೋಡಿಕೊಳ್ಳಬೇಕು’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ನಂದಿಭವನದಲ್ಲಿ ಭಾನುವಾರ ನಡೆದ ವರ್ತಕರ ಸಂಘದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣ ಅವರು ಕಾಯಕ ಹಾಗೂ ದಾಸೋಹ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ್ದರು. ಅದರಂತೆ ವರ್ತಕರು ಪ್ರಾಮಾಣಿಕತೆಯಿಂದ ಕಾಯಕ ಮಾಡುವ ಜತೆಗೆ, ದಾಸೋಹ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ರೈತಾಪಿ ವರ್ಗದವರಂತೆ ವರ್ತಕರು ಕೂಡ ಶ್ರಮ ಜೀವಿಗಳು. ಗ್ರಾಹಕರಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುವ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ ಎಂದ ಅವರು, ಸಂಘದ 50ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಹೊರತಂದಿರುವ ‘ಹೊಂಬಿಸಿಲು’ ಸ್ಮರಣ ಸಂಚಿಕೆ ಅರ್ಥಪೂರ್ಣವಾಗಿದೆ. ವರ್ತಕರ ಸಂಘವು ಸದಾ ಸೂರ್ಯನಂತೆ ಪ್ರಕಾಶಿಸಲಿ ಎಂದು ಆಶಿಸಿದರು.

ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ವರ್ತಕರಿಗೆ ಜಿಲ್ಲೆಯಲ್ಲಿ ಪೂರಕವಾದ ವಾತಾವರಣ ಕಲ್ಪಿಸಿಕೊಡಲು ಶ್ರಮಿಸಲಾಗುವುದು. ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿದ್ದು, ಅಭಿವೃದ್ಧಿ ಕಾಮಗಾರಿಗಳು ಪ್ರಗತಿ ಯಲ್ಲಿವೆ. ಕೆಲವೇ ತಿಂಗಳಲ್ಲಿ ಮಾದರಿ ಜಿಲ್ಲೆಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶ ಅಭಿ ವೃದ್ಧಿಗೆ ಆದ್ಯತೆ ನೀಡಿದ್ದಾರೆ. ಆದರೆ, ಜಿಲ್ಲೆಗೆ ಕೈಗಾರಿಕೆಗಳು ಬರುತ್ತಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿ ಜತೆ, ಚರ್ಚಿಸಿ ಬೆಂಗಳೂರಿನ ಕಂಪೆನಿಗಳನ್ನು ಕರೆತರುವಂತೆ ಒತ್ತಾಯಿಸ ಲಾಗಿದೆ. ವರ್ತಕರು ಕೂಡ ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಕೋರಿದರು.

ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತ ನಾಡಿ, ಜಿಲ್ಲೆಯ ಅಭಿವೃದ್ಧಿಗೆ ವರ್ತಕರು ಹಲವು ಕಾರ್ಯಕ್ರಮ ರೂಪಿಸುವ ಮೂಲಕ ಶ್ರಮಿಸುತ್ತಿದ್ದಾರೆ. ಅವರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕಾಚಾರ್ಯ ಸ್ವಾಮೀಜಿ, ವರ್ತಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಧ್ಯಕ್ಷ ಕೆ. ರವಿ, ಹಿರಿಯ ಉಪಾಧ್ಯಕ್ಷ ಎಸ್‌. ಸುಧಾಕರಶೆಟ್ಟಿ, ಅಸೋಚಾಮ್‌ ಅಧ್ಯಕ್ಷ ಆರ್. ಶಿವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷರಾದ ಎ.ಎಸ್. ಸತೀಶ್‌, ಜಿ.ಆರ್. ಅಶ್ವತ್ಥ್‌ನಾರಾಯಣ, ಸುವರ್ಣ ಸಂಭ್ರಮಾಚರಣೆ ಸಮಿತಿ ಅಧ್ಯಕ್ಷ ಎ. ಜಯಸಿಂಹ ಹಾಜರಿದ್ದರು.

**

ಸಭಿಕರ ರಂಜಿಸಿದ ‘ನಗೆ ಹಬ್ಬ’ ಕಾರ್ಯಕ್ರಮ

ಚಾಮರಾಜನಗರ: ಸುವರ್ಣ ಮಹೋತ್ಸವದ ಅಂಗವಾಗಿ ಮಧ್ಯಾಹ್ನ ನಗೆಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಲಾವಿದರಾದ ನರಸಿಂಹ ಜೋಷಿ, ಬಸವರಾಜ್‌ ಮಹಾಮನಿ ಮತ್ತು ಇಂದುಮತಿ ಹಾಸ್ಯ ಚಟಾಕಿಗಳ ಮೂಲಕ ಸಭಾಂಗಣದಲ್ಲಿ ಹಾಸ್ಯದ ಹೊಳೆ ಹರಿಸಿದರು.

ಮೊದಲು ನರಸಿಂಹ ಜೋಷಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ,  ವಾಟಾಳ್‌ ನಾಗರಾಜ್‌, ಪ್ರಧಾನಿ ನರೇಂದ್ರ ಮೋದಿ ಅವರ ಧ್ವನಿಗಳನ್ನು ಅನುಕರಣೆ ಮಾಡಿ ರಂಜಿಸಿದರು.

ಬಸವರಾಜ್‌ ಮಹಾಮನಿ ಹಾಗೂ ನರಸಿಂಹ ಜೋಷಿ ತಮ್ಮ ದೇಹದ ಆಕಾರವನ್ನೇ ವಸ್ತುವಾಗಿಟ್ಟುಕೊಂಡು ನಡೆಸಿದ ಮಾತಿನ ಜುಗಲ್ಬಂದಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು.

ಸಂಜೆ ವೈನಾಡು ನೃತ್ಯ ಕಲಾ ಕ್ಷೇತ್ರಂನ ಕಲಾಮಂಡಲಂ ಉಷಾ ನೇತೃತ್ವದಲ್ಲಿ ಮೋಹಿನಿಯಾಟ್ಟಂ ನೃತ್ಯ ರೂಪಕ ಕಾರ್ಯಕ್ರಮ ನಡೆಯಿತು.

**

ವರ್ತಕರು ವ್ಯಾಪಾರದ ಜತೆಗೆ ಸಂಘ ರಚಿಸಿಕೊಂಡು ಸಾಮಾಜಿಕ ಸೇವಾ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ. ಈ ಪರಂಪರೆಯನ್ನು ಮುಂದುವರಿಸಬೇಕು.
–ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
ಸುತ್ತೂರು ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.